ರಾಯಚೂರು

14ರಂದು ಗಂಗಾವತಿ ಅಂಜನಾದ್ರಿಬೆಟ್ಟದಲ್ಲಿ ಹನುಮ ಮಾಲಾ ಕಾರ್ಯಕ್ರಮ

Published On :

ರಾಯಚೂರು: ಹನುಮದ್ ವ್ರತದ ಅಂಗವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿ.14ರಂದು ಹನುಮ ಮಾಲಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಜರಂಗ ದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಹೇಳಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಡಿ.6ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಜರಂಗದಳದ ಸ್ಥಾನೀಯ ಆಂಜನೇಯ ದೇವಸ್ಥಾನಗಳಲ್ಲಿ ಹನುಮ ಮಾಲಾ ಧಾರಣೆ ಮಾಡಲಿದ್ದಾರೆ. ದತ್ತ ಮಾಲಾ ಮಾದರಿಯಲ್ಲಿಯೇ ಒಂಬತ್ತು ದಿನಗಳ ವ್ರತಾಚರಣೆ ನಂತರ ಡಿ.14ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 3 ಸಾವಿರ ಮಾಲಾ ಧಾರಿಗಳು ಅಂಜನಾದ್ರಿ ಬೆಟ್ಟ ತಲುಪಲಿದ್ದಾರೆಂದು ತಿಳಿಸಿದರು.
ಸಂಕೀತನೆ ಮೆರವಣಿಗೆ: ಡಿ.13 ರಂದು ವಿವಿಧ ಜಿಲ್ಲೆಗಳಲ್ಲಿ ಸಂಕೀತನೆ ಮೆರವಣಿಗೆ ನಡೆಸಿ ಆನೆಗೊಂದಿ ಬಳಿಯ ದುರ್ಗಾ ಬೆಟ್ಟವನ್ನು ಡಿ.14ರಂದು ಬಂದು ಸೇರಲಿರುವ ಮಾಲಾಧಾರಿಗಳು ಅಂದು ಬೆಳಗ್ಗೆ 9ಕ್ಕೆ ಬೆಟ್ಟದ ಮೇಲೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಧಾರ್ಮಿಕ ಸಭೆಯಲ್ಲಿ ಬಜರಂಗ ದಳದ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ ಮಾತನಾಡಲಿದ್ದಾರೆ. ವಿವಿಧ ಮಠಗಳ ಮಠಾಧೀಶರು ಹಾಗೂ ವಿಶ್ವ ಹಿಂದೂ ಪರಿಷದ್‌ನ ಪ್ರಮುಖರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಧಾರ್ಮಿಕ ಸಭೆಯ ನಂತರ ಎಲ್ಲ ಮಾಲಾಧಾರಿಗಳು ದುರ್ಗಾಬೆಟ್ಟದಿಂದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ಡಿ.14ರ ಮಧ್ಯಾಹ್ನ 12ಕ್ಕೆ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿಯ ದರ್ಶನ ಪಡೆದು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲಿದ್ದಾರೆಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳವನ್ನು ಸಮಗ್ರವಾಗಿ ಸಂಘಟಿಸುವ ನಿಟ್ಟಿನಲ್ಲಿ ದತ್ತ ಮಾಲಾ ಮಾದರಿಯಲ್ಲಿಯೇ ಹನುಮಮಾಲಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ವರ್ಷ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಒಂದೂವರೆ ಸಾವಿರ ಜನ ಸೇರಿದ್ದರು. ಈ ಬಾರಿ ಮೂರು ಸಾವಿರ ಜನ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಶಾದಿಭಾಗ್ಯ ವಿರೋಧ: ವಿಹಿಂಪ ಮತ್ತು ಬಜರಂಗ ದಳ ಸಂಘಟನೆಗಳು ಧರ್ಮಗುರುಗಳ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತವೆ ಎಂದ ಅವರು, ರಾಜ್ಯದ ಸಿಎಂ ಸಿದ್ದರಾಮಯ್ಯ ಜಾತಿ ಮತಗಳ ಮಧ್ಯೆ ದ್ವೇಷ ಭಾವನೆ ಬಿತ್ತುವಂಥ ಕಾರ್ಯ ಮಾಡುತ್ತಿದ್ದಾರೆ. ಶಾದಿಭಾಗ್ಯ ಯೋಜನೆಯನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವ ಮೂಲಕ ಜಾತಿಯ ತುಷ್ಠಿಕರಣಕ್ಕೆ ಮುಂದಾಗಿದ್ದು, ಇಂಥ ಯೋಜನೆಗಳ ಜಾರಿಗೆ ಸಂಘಟನೆಯ ತೀವ್ರ ವಿರೋಧವಿದೆ ಎಂದು ಹೇಳಿದರು.
ಎಲ್ಲ ಜಾತಿ ಜನಾಂಗದಲ್ಲಿ ಬಡವರಿದ್ದಾರೆ. ಅಂಥವರಿಗೂ ಸರ್ಕಾರದ ಯೋಜನೆಯ ಲಾಭ ದೊರೆಯುವಂತಾಗಬೇಕು. ಆದರೆ ಒಂದೇ ಜಾತಿಗೆ ಲಾಭವಾಗುವಂಥ ಯೋಜನೆಗಳ ಜಾರಿಗೆ ಸರ್ಕಾರ ಆಲೋಚಿಸುವುದು ಸಮಂಜಸವಲ್ಲ. ಈ ಯೋಜನೆಯ ಜಾರಿಗೆ ಸರ್ಕಾರ ಮುಂದಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಅವಕಾಶ ನೀಡುವುದಿಲ್ಲ: ಸರ್ಕಾರ ಮೂಢನಂಬಿಕೆ ನಿಷೇಧಿಸಿ ಕಾಯಿದೆ ಜಾರಿಗೆ ಚಿಂತನೆ ನಡೆಸಿರುವುದು ಹಿಂದೂ ಧರ್ಮದ ವಿರುದ್ಧ ಕಾಯಿದೆ ಜಾರಿಗೆ ಹೊರಟಂತಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಯಾವುದೇ ಕಾಯಿದೆ ಜಾರಿಗೆ ಸಂಘಟನೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಹಂಪಿ ಪರಿಸರದಲ್ಲಿ ಮುಸ್ಲಿಂ ಜನಾಂಗಕ್ಕೆ ಸೇರಿದ 31ಗೋರಿಗಳನ್ನು ನಿರ್ಮಿಸಲಾಗಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರಿ ಕಣ್ಣು ಮುಚ್ಚಿ ಕುಳಿತಿದೆ. ವಿಶ್ವಪರಂಪರೆ ಪಟ್ಟಿಯಲ್ಲಿ ಹಂಪಿ ಸೇರಿದ್ದರೂ ಅಲ್ಲಿ ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬದಲಿಗೆ ಅಕ್ರಮಗಳಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರವು ಹಿಂದೂಗಳ ವಿರುದ್ಧ ನೀತಿ ರೂಪಿಸಿ ಜಾರಿಗೆ ತರಲು ಮುಂದಾದಲ್ಲಿ ಅವರ ಸರ್ಕಾರ ಪತನಕ್ಕೆ ಚಳವಳಿ ಆರಂಭಿಸಲಾಗುತ್ತದೆ. ಮತಾಂತರ ತಡೆಗೆ ಸಂಘಟನೆಯಿಂದ ಗ್ರಾಮೀಣ ಪ್ರದೇಶ ಸೇರಿದಂತೆ ನಿರ್ಲಕ್ಷ್ಯಕ್ಕೊಳಗಾದವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ದೇಶದಲ್ಲಿ ಬಡತನದ ಕಾರಣಕ್ಕೆ ಮತ್ತು ಆಸೆ ಆಮಿಷಗಳಿಗೆ ಬಲಿಯಾಗಿ ಅನೇಕರು ಮತಾಂತರಗೊಳ್ಳುತ್ತಿರುವುದು ಸ್ಪಷ್ಟ. ಸಂಕಷ್ಟದಲ್ಲಿ ಸಿಲುಕಿರುವವರ ನೆರವಿಗೆ ಸಂಘಟನೆ ಧಾವಿಸುವ ಮೂಲಕ ಮತಾಂತರ ತಡೆಗೆ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಉಭಯ ಸಂಘಟನೆಗಳ ಪ್ರಮುಖರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.