'ಭಾಗ್ಯ'ಕ್ಕೆ ಹಣ, ಉನ್ನತ ಶಿಕ್ಷಣಕ್ಕಿಲ್ಲ ಕಾಂಚಾಣ!
ಕ.ಪ್ರ. ವಾರ್ತೆ , ರಾಯಚೂರು , ಡಿ.7
ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ವಿವಿಧ 'ಭಾಗ್ಯ' ಯೋಜನೆಗಳೆಡೆಗೇ ಆಸಕ್ತಿ ತೋರುತ್ತಿದೆ. ಆ ಯೋಜನೆಗಳಿಗೆ ಹಣ ಒದಗಿಸಲು ಇಲ್ಲಿನ ಕೃಷಿ ವಿವಿಯ ಬಜೆಟ್ಗೇ ಕತ್ತರಿ ಹಾಕಿದೆ!
ಕೃಷಿ ವಿವಿಯ ಶೈಕ್ಷಣಿಕ ಮತ್ತು ಭೌತಿಕ ಪ್ರಗತಿಗೆ ಸರ್ಕಾರವೇ ಅಡ್ಡಗಾಲು ಹಾಕಿದ್ದು, ಮುಂದಿನ ದಿನಗಳಲ್ಲಿ ಸಿಬ್ಬಂದಿ ವೇತನಕ್ಕೂ ಕುತ್ತು ಬರುವುದು ಖಚಿತವಾಗಿದೆ. ಕೃಷಿಯೇ ಪ್ರಧಾನ ಉದ್ಯಮವಾಗಿರುವ ಜಿಲ್ಲೆಯಲ್ಲಿರುವ ಕೃಷಿ ವಿವಿಗೆ ಸದ್ಯ ಒದಗಿರುವ ದುಸ್ಥಿತಿಯ ಚಿತ್ರಣವಿದು.
ಇಲ್ಲಿನ ಕೃಷಿ ವಿವಿಯು ಕೊಪ್ಪಳ, ಬಳ್ಳಾರಿ, ಯಾದಗಿರಿ, ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಅಂತೆಯೇ ಕೃಷಿ ವಿವಿಯಲ್ಲಿ ಕೈಗೊಳ್ಳಲಾಗುವ ಎಲ್ಲ ಸಂಶೋಧನೆಗಳ ಫಲ ರೈತರಿಗೆ ತಲುಪಿಸುವ ಕಾರ್ಯವನ್ನೂ ಮಾಡುತ್ತಿದೆ. ಆದರೆ ವಿವಿಗೆ ಆರಂಭದಿಂದಲೂ ಅನುದಾನ ಕಡಿತದ ಶಿಕ್ಷೆ ಎದುರಿಸುವುದು ತಪ್ಪುತ್ತಿಲ್ಲ.
ಭರವಸೆಯಂತೆ ಸಿಗದ ಅನುದಾನ: ಪ್ರತಿ ಬಾರಿಯಂತೆ ಈ ಬಾರಿಯೂ ರಾಯಚೂರು ಕೃಷಿ ವಿವಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಮರ್ಪಕ ಅನುದಾನ ಒದಗಿಸುವ ಭರವಸೆ ನೀಡಿತ್ತು. ಬಜೆಟ್ಗೂ ಮುನ್ನ ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಇಂಥದ್ದೊಂದು ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ರೈತರ ಪರ ಎಂದು ಹೇಳಿಕೊಂಡಿದ್ದು ವಿವಿ ಆಡಳಿತಕ್ಕೆ ಹೊಸದೊಂದು ಭರವಸೆ ಮೂಡಿತ್ತು.
ಆದರೆ ಬಜೆಟ್ ಮಂಡನೆ ನಂತರ ವಿವಿಯ ನಿರೀಕ್ಷೆ ಹುಸಿಯಾಯಿತು. ವಿವಿಗೆ ಯೋಜನೇತರ ವೆಚ್ಚದಲ್ಲಿ ಕಳೆದ ವರ್ಷ 42 ಕೋಟಿ ನೀಡಲಾಗಿತ್ತು. ಪ್ರಸಕ್ತ ಆರ್ಥಿಕ ವರ್ಷಕ್ಕೆ ಅಷ್ಟೇ ಮೊತ್ತದ ನಿರೀಕ್ಷೆಯಲ್ಲಿದ್ದ ವಿವಿ ಆಡಳಿತಕ್ಕೆ ಸರ್ಕಾರ 35 ಕೋಟಿ ನೀಡುವ ಭರವಸೆಯಿತ್ತಿದ್ದು, ಅದರಲ್ಲಿ ದಕ್ಕಿದ್ದು 25 ಕೋಟಿ ಮಾತ್ರ.
ಹಾಗೆಯೇ ಯೋಜನೆಯ ವೆಚ್ಚದಲ್ಲಿ 35 ಕೋಟಿ ನಿರೀಕ್ಷಿಸಲಾಗಿತ್ತು. ಆದರೆ 31 ಕೋಟಿಗೆ ಭರವಸೆ ನೀಡಿದ್ದು, ಇದುವರೆಗೆ ವಿವಿಗೆ ಸೇರಿದ್ದು 26 ಕೋಟಿ ಮಾತ್ರ. ಹೀಗಾಗಿ ಇದುವರೆಗೂ ಸುಮಾರು 12 ಕೋಟಿ ಗೂ ಹೆಚ್ಚಿನ ಮೊತ್ತದ ಅನುದಾನದ ಕಡಿತ ಸರ್ಕಾರ ಮಾಡಿದೆ. ಇದರಿಂದ ವಿವಿ ಆಡಳಿತಕ್ಕೆ ಕೃಷಿ ವಿಸ್ತರಣೆ ಸೇರಿ ವಿವಿಧ ಚಟುವಟಿಕೆಗಳಿಗೆ ಅನುದಾನದ ಅಭಾವ ಕಾಡುತ್ತಿದೆ.
ಸಾಕಾಗದ ಅನುದಾನ: ವಿವಿ ಆಡಳಿತ ಅಳೆದು ತೂಗಿ ಕಾಮಗಾರಿ ಕೈಗೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಯೋಜನೇತರ ವೆಚ್ಚದಲ್ಲಿ ಸರ್ಕಾರ ನೀಡಿದ ಅನುದಾನ ಯಾವುದಕ್ಕೂ ಸಾಲದಂಥ ಸ್ಥಿತಿ. ವಿವಿ ಮೂಲಗಳ ಪ್ರಕಾರ ಜನವರಿ ನಂತರ ಸರ್ಕಾರ ಅಗತ್ಯ ಅನುದಾನ ಒದಗಿಸದಿದ್ದರೆ ಕಳೆದ ವರ್ಷದಂತೆ ಈ ಬಾರಿಯೂ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸಿಬ್ಬಂದಿ ವೇತನಕ್ಕೂ ಹಣದ ಕೊರತೆ ಎದುರಾಗುತ್ತದೆ.
ಈಗಾಗಲೇ ಕೃಷಿ ವಿವಿಯ ಹಂಗಾಮಿ ನೌಕರರಿಗೆ ಅನುದಾನ ಲಭ್ಯವಿರುವವರೆಗೆ ಮಾತ್ರ ಕೂಲಿ ಕೆಲಸ. ಅನುದಾನ ಖಾಲಿಯಾದರೆ ಕೃಷಿ ಚಟುವಟಿಕೆಗಳು ಸ್ಥಗಿತ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆ ಮುಂದಿನ ಹಂಗಾಮಿಗೆ ವಿವಿಯಲ್ಲಿ ಕೇವಲ ಬೋಧನೆ ಮಾತ್ರ ನಡೆಯಲಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವುದರಲ್ಲಿ ಸಂದೇಹವಿಲ್ಲ.
ಸರ್ಕಾರ ಕೃಷಿ ವಿವಿಗೆ ಅನುದಾನ ಕಡಿತ ಮಾಡಿರುವುದು ನಿಜ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸೇರಿದಂತೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆದು ಸಮರ್ಪಕ ಅನುದಾನ ಒದಗಿಸಲು ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಹೆಚ್ಚಿನ ಅನುದಾನದ ಭರವಸೆ ದೊರೆತಿಲ್ಲ.
ಟಿ ಡಾ. ಬಿ.ವಿ.ಪಾಟೀಲ್, ಕುಲಪತಿ, ಕೃಷಿ ವಿವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

