ಖಾಸಗಿ ಕಾಲೇಜುಗಳಿಗೆ ಸಿಇಟಿ ರದ್ದತಿ; ಖಂಡನೆ
ಕ.ಪ್ರ. ವಾರ್ತೆ, ರಾಯಚೂರು, ಡಿ.16
ರಾಜ್ಯ ಸರ್ಕಾರ 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯಿದೆ ಜಾರಿ ನೆಪದಲ್ಲಿ ಸಿಇಟಿ ಪರೀಕ್ಷೆಯನ್ನು ಕೇವಲ ಸರ್ಕಾರಿ ವೃತ್ತಿಪರ ಕಾಲೇಜುಗಳಿಗೆ ಸೀಮಿತಗೊಳಿಸಿ ಸಾವಿರಾರು ವಿದ್ಯಾರ್ಥಿಗಳು ಕಾಮೆಡ್-ಕೆ ಪರೀಕ್ಷೆಯನ್ನು ಬರೆಯುವ ಅನಿವಾರ್ಯತೆ ಸೃಷ್ಟಿಸಲು ಮುಂದಾಗಿದೆ ಎಂದು ಎಐಡಿಎಸ್‌ಒ ಟೀಕಿಸಿದೆ.
ಬಡ ವಿದ್ಯಾರ್ಥಿಗಳನ್ನು ಧನದಾಹಿ ಖಾಸಗಿ ಆಡಳಿತ ಮಂಡಳಿಗಳ ತೆಕ್ಕೆಗೆ ತಳ್ಳುವ ಕಾರ್ಯವನ್ನು ಸರ್ಕಾರ ಮಾಡುತ್ತಿದ್ದು, ರಾಜ್ಯ ಸರ್ಕಾರದ ಈ ವಿದ್ಯಾರ್ಥಿ ವಿರೋಧಿ ನೀತಿಯನ್ನು ಸಂಘಟನೆ ಖಂಡಿಸಿದ್ದು, ಹಿಂದೆ ಅಧಿಕಾರದಲ್ಲಿದ್ದ ಹಲವು ಸರ್ಕಾರಗಳು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಶಾಮೀಲಾಗಿ ಕ್ರಮೇಣ ಸಿಇಟಿಯನ್ನು ನಿಷ್ಪ್ರಯೋಜಕಗೊಳಿಸಿವೆ ಎಂದು ಆಪಾದಿಸಿದೆ.
ಕಾಮೆಡ್-ಕೆ ಪರೀಕ್ಷೆ ಧನದಾಹಿ ಪರ: ದುಬಾರಿ ಶುಲ್ಕಗಳನ್ನು ಕಾನೂನುಬದ್ಧಗೊಳಿಸಿರುವುದು ದುರಂತದ ಇತಿಹಾಸ. ಹಲವಾರು ಇತಿಮಿತಿಗಳ ನಡುವೆಯೂ ಸಿಇಟಿ ವ್ಯವಸ್ಥೆಯು ನಮ್ಮ ರಾಜ್ಯದಲ್ಲಿ ತಕ್ಕಮಟ್ಟಿಗೆ ಉತ್ತಮವಾಗಿದೆ. ಸಾವಿರಾರು ಮಂದಿ ಬಡ-ಮಧ್ಯಮ ವರ್ಗದ ಪ್ರತಿಭಾವಂತರಿಗೆ ವೃತ್ತಿಪರ ಶಿಕ್ಷಣದ ಅವಕಾಶ ಒದಗಿಸುತ್ತಿತ್ತು. ಖಾಸಗಿ ಆಡಳಿತ ಮಂಡಳಿಗಳಿಗೆ ಪ್ರತಿಭೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಿರುವುದರಿಂದ, ಅವರು ತಮಗಿಷ್ಟ ಬಂದಂತೆ ಸೀಟುಗಳನ್ನು ಮಾರಾಟ ಮಾಡುವುದಕ್ಕಾಗಿ ಕಾಮಡ್-ಕೆ ಪರೀಕ್ಷೆಯನ್ನು ಆರಂಭಿಸಿದ್ದಾರೆಂದು ದೂರಿದೆ.
ಕಾಯ್ದೆ ಹಿಂದಡೆಯಲು ಒತ್ತಾಯಿಸಿ: ಸದ್ಯ ಕಾಂಗ್ರೆಸ್ ಸರ್ಕಾರವು 2006ರ ಕಾಯಿದೆ ಜಾರಿ ಹೆಸರಿನಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳ ಮಾರಾಟ ಕಾನೂನುಬದ್ಧಗೊಳಿಸಲು ಮುಂದಾಗಿದೆ. ಇದರಿಂದ ಮುಂದೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸಂಪೂರ್ಣ ರದ್ದಾಗಿ, ಸಾವಿರಾರು ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ. ಆದ್ದರಿಂದ ಸರ್ಕಾರ ಈ ತೀರ್ಮಾನವನ್ನು ಹಿಂಪಡೆದು, ರಾಜ್ಯದಲ್ಲಿ ಸಿಇಟಿ ಮೂಲಕವೇ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಸೀಟುಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಲು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ವೃತ್ತಿಪರರು ಮುಂದಾಗಬೇಕೆಂದು ಎಐಡಿಎಸ್‌ಒ ಕರೆ ನೀಡಿದೆ. ವೃತ್ತಿಪರ ಕಾಲೇಜುಗಳಲ್ಲಿ ಶ್ರೀಸಾಮಾನ್ಯರಿಗೂ ಕೈಗೆಟಕುವಂತಹ ಮತ್ತು ಆಡಳಿತ ಮಂಡಳಿಗಳ ಕೋಟಾವನ್ನು ರದ್ದುಪಡಿಸಿ, ಪ್ರತಿಭೆಯ ಆಧಾರದಲ್ಲೇ ಪ್ರವೇಶ ನೀಡುವಂತಹ ಕಾಯಿದೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತರಬೇಕೆಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

