ರಾಯಚೂರು

ನಕಲಿ ಇ-ಸ್ಟ್ಯಾಂಪ್; ಸಮಗ್ರ ತನಿಖೆಗೆ ಹರಳಯ್ಯ ಆಗ್ರಹ

Published On :

ಕ.ಪ್ರ. ವಾರ್ತೆ, ರಾಯಚೂರು, ಡಿ.16
ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಪತ್ತೆಯಾಗಿರುವ ನಕಲಿ ಇ-ಸ್ಟ್ಯಾಂಪ್ ಹಗರಣದ ಸಮಗ್ರ ತನಿಖೆಗೊಳಪಡಿಸುವಂತೆ ದಲಿತ ಮುಖಂಡ ಹರಳಯ್ಯ ಯದ್ದಲದಿನ್ನಿ ಒತ್ತಾಯಿಸಿದ್ದಾರೆ.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿರವಾರದಲ್ಲಿ ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರ ಶಹಬುದ್ದೀನ್ ಎಂಬಾತ 200 ಮುಖಬೆಲೆಯ ನಕಲಿ ಇ-ಸ್ಟ್ಯಾಂಪ್‌ಗಳನ್ನು ತಯಾರಿಸಿ ಜೆಸ್ಕಾಂ ಇಲಾಖೆಯಿಂದ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕಾರಣನಾಗಿದ್ದು, ಆತನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಇದುವರೆಗೆ 155 ಇಂಥ ನಕಲಿ ಇ-ಸ್ಟ್ಯಾಂಪ್‌ಗಳು ಸಂಘಟನೆಗೆ ಲಭ್ಯವಾಗಿದ್ದು, ಜಿಲ್ಲೆಯ ರಾಯಚೂರು, ಲಿಂಗಸ್ಗೂರು, ಸಿಂಧನೂರು, ದೇವದುರ್ಗ ಮತ್ತು ಮಾನವಿಗಳಲ್ಲಿಯೂ ಈ ಅಕ್ರಮ ಹರಡಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ತನಿಖೆಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿದರು.
ಮಾನವಿ ತಾಲೂಕಿನಲ್ಲಿ ಸಿರವಾರ ಪಟ್ಟಣದಲ್ಲಿ ಮೊದಲ ಬಾರಿಗೆ ಜೆಸ್ಕಾಂನಲ್ಲಿ ನಕಲಿ ಇ-ಸ್ಟ್ಯಾಂಪ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಸ್ವತಃ ಶಹಬುದ್ದೀನ್ ತಯಾರಿಸಿ ಬಳಕೆ ಮಾಡಿದ್ದಾನೆ. ಆ ಮೂಲಕ ಸರ್ಕಾರಕ್ಕೆ ವಂಚಿಸಿದ್ದು, ನಕಲಿ ಇ-ಸ್ಟ್ಯಾಂಪ್‌ನ ಮೇಲೆ ಸಿರವಾರದ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ವ್ಯವಸ್ಥಾಪಕರ ಖೊಟ್ಟಿ ಸಹಿ ಹಾಕಿರುವುದು ಪತ್ತೆಯಾಗಿದೆ ಎಂದು ಆರೋಪಿಸಿದರು.
ಮಾನವಿ ತಾಲೂಕು ಸೇರಿದಂತೆ ಇನ್ನಿತರೆ ತಾಲೂಕುಗಳ ವಿವಿಧ ಇಲಾಖೆಗಳಲ್ಲೂ ಈ ಅಕ್ರಮ ಹರಡಿರುವ ಸಾಧ್ಯತೆಯಿದ್ದು, ಈಗಾಗಲೇ ಸಿರವಾರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಕೂಡಲೇ ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಆಸಕ್ತಿವಹಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಕ್ರಮದ ಆರೋಪಿ ಶಹಬುದ್ದೀನ್ ಸಂಘಟನೆಯ ಸದಸ್ಯರೂ ಸೇರಿದಂತೆ ತಮ್ಮ ವಿರುದ್ಧ ಆರೋಪ ಎಸಗಿದ ಎಲ್ಲರಿಗೆ ಬೆದರಿಕೆಯೊಡ್ಡುತ್ತಿದ್ದು, ಸಂಬಂಧಿಸಿದ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ. ಪ್ರಕರಣ ದಾಖಲಾದ ನಂತರ ತಲೆ ಮರೆಸಿಕೊಂಡಿರುವ ಆರೋಪಿ ಶಹಬುದ್ದೀನ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ಪ್ರಮುಖರಾದ ಮಲ್ಲು ಕಾಂಬ್ಳೆ, ಬಸವರಾಜ ಅತ್ತನೂರು, ದುರ್ಗಣ್ಣ ಮರಾಠಾ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.