ರಸ್ತೆ ಅವ್ಯವಸ್ಥೆ ವಿರುದ್ಧ ರಸ್ತಾ ರೋಕೋ
ಕ.ಪ್ರ. ವಾರ್ತೆ, ರಾಯಚೂರು, ಡಿ.17
ನಗರದ ಕುಷ್ಟಗಿ ರಸ್ತೆ ಮತ್ತು ಹಳೆ ಬಜಾರ್ ರಸ್ತೆ ಡಾಂಬರೀಕರಣಗೊಳಿಸುವುದು, ಧೂಳು ನಿಯಂತ್ರಣ ಮಾಡುವುದು ಸೇರಿದಂತೆ ಇನ್ನಿತರ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ನಗರಾಭಿವೃದ್ಧಿ ಹೋರಾಟ ಸಮಿತಿ ಗಾಂಧೀಜಿ ವೃತ್ತದಲ್ಲಿ ಮಂಗಳವಾರ ಗಂಟೆ ಕಾಲ ರಸ್ತಾರೋಕೋ ನಡೆಸುವ ಮೂಲಕ ಪ್ರತಿಭಟಿಸಿತು.
ಎಪಿಎಂಸಿ ಗಂಜ್ನ ಗಣೇಶ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮಿತಿಯ ಸಂಚಾಲಕರು ಪಾಲ್ಗೊಂಡು ಸರ್ಕಾರ ಮತ್ತು ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪ್ರತಿಭಟನಾಕಾರರು ಗಾಂಧೀಜಿ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಿರ್ಲಕ್ಷ್ಯಕ್ಕೆ ಖಂಡನೆ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಮಸ್ಯೆ ಪರಿಹಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಂಪರ್ಕ ಸಂಚಾಲಕ ಡಿ.ಎಚ್. ಕಂಬಳಿ ಮಾತನಾಡಿ, ಧೂಳು ಮತ್ತು ಹದಗೆಟ್ಟ ರಸ್ತೆಯಿಂದ ಜನತೆ ಮಾರಕ ರೋಗಗಳಿಂದ ಬಳಲುತ್ತಿದ್ದರೂ ಅಧಿಕಾರಿಗಳು ಕನಿಷ್ಠ ಕಾಳಜಿ ವಹಿಸದೇ ಇರುವುದನ್ನು ಗಮನಿಸಿದರೆ ಉಗ್ರ ಸ್ವರೂಪದ ಹೋರಾಟವನ್ನು ಅವರೇ ನಿರೀಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಯುಸಿಐ ರಾಜ್ಯ ಅಧ್ಯಕ್ಷ ಡಿ.ಎಚ್. ಪೂಜಾರ್, ಸಂಚಾಲಕರಾದ ಎಸ್.ದೇವೇಂದ್ರಗೌಡ, ವೈದ್ಯ ಡಾ. ಕೆ.ಶಿವರಾಜ, ವೀರಭದ್ರಪ್ಪ ಕುರುಕುಂದಿ ಮಾತನಾಡಿ, ಜನಪ್ರತಿನಿಧಿಗಳ ವಿಳಂಬ ಧೋರಣೆ ಖಂಡಿಸಿದರು.
ಡಾ. ತಾಹೀರ ಅಲಿ, ವೆಂಕನಗೌಡ ಗದ್ರಟಗಿ, ಡಾ.ಜಗದೀಶ ಮಾದಿನೂರು, ಡಾ. ಚನ್ನನಗೌಡ ಪಾಟೀಲ್, ಡಾ. ಗೋವಿಂದರಾಜ, ಡಾ. ರವಿಕುಮಾರ, ಡಾ. ಬಸವರಾಜ, ಗುಂಡಪ್ಪ ಬಳಿಗಾರ, ಹಾಜಿಸಾಬ, ನಾಗರಾಜ ಪೂಜಾರ್, ರಮೇಶ ಪಾಟೀಲ್ ಭೇರ್ಗಿ, ಬಸವರಾಜ ಹೊಸಳ್ಳಿ, ನಾರಾಯಣ ಬೆಳಗುರ್ಕಿ, ಗೌತಮ್ ಮೆಹತಾ, ವಿಶ್ವನಾಥ, ಬಗ್ಗೂರು ನಾಗರಾಜ, ಬಸವರಾಜ ಬಾದರ್ಲಿ, ಡಿಶ್ ಗಂಗಣ್ಣ, ಭಾಸ್ಕರ್, ಮಹಾದೇವಪ್ಪ ಧುಮುತಿ, ಶಿವಣ್ಣ ಸಣ್ಣಪ್ಪನವರ್, ಶಂಕರ ಗುರಿಕಾರ, ದಾವಲಸಾಬ ದೊಡ್ಡಮನಿ, ಬಸವರಾಜ ಕೋಟೆ, ಬಸವರಾಜ ಗೋಡೆಹಾಳ, ಯಾಕೂಬ್ ಅಲಿ, ಸಮ್ಮದ್ ಚೌದ್ರಿ, ಗುಲಾಮ್ ಹುಸೇನ್, ಅಜರ್ಖಾನ್, ಸೀತಮ್ಮ, ಗೋಪಾಲಕೃಷ್ಣ, ಅಶೋಕ ನಂಜಲದಿನ್ನಿ, ವೀರಭದ್ರಗೌಡ ಅಮರಾಪುರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಸಣ್ಣಪುಟ್ಟ ವ್ಯಾಪಾರಸ್ಥರು, ಕುಷ್ಟಗಿ ರಸ್ತೆ ವ್ಯಾಪಾಸ್ಥರು, ಮಹಿಳೆಯರು ಭಾಗವಹಿಸಿದ್ದರು.
ಧೂಳು ಮುಕ್ತ; ಭರವಸೆ
ಸಿಂಧನೂರು: ನಗರವನ್ನು ಧೂಳು ಮುಕ್ತ ನಗರವನ್ನಾಗಿ ಮಾಡುವುದು ಸೇರಿದಂತೆ ಪ್ರಮುಖ 26 ಬೇಡಿಕೆಗಳ ಈಡೇರಿಕೆಗಾಗಿ ತಹಸೀಲ್ದಾರ್ ವಿ.ಆರ್. ಪಾಟೀಲ್ ಜತೆ ಸತತ ಮೂರು ಗಂಟೆಗಳ ಕಾಲ ಸ್ವಚ್ಛ, ಸ್ವಸ್ಥ, ಸುಂದರ ಸಿಂಧನೂರು ನಿರ್ಮಾಣಕ್ಕಾಗಿ ವೇದಿಕೆಯ ಸದಸ್ಯರು ಚರ್ಚೆಸಿದರು.
ನಗರದ ಸ್ವಚ್ಛತೆ, ಧೂಳು ನಿಯಂತ್ರಣ, ಕುಡಿಯುವ ನೀರಿನ ಸರಬರಾಜು, ರಸ್ತೆಗಳ ಡಾಂಬರೀಕರಣ, ಒಳಚರಂಡಿ ಕಾಮಗಾರಿಗಳಿಗೆ ನಿಯಮಿತ ಕ್ಯೂರಿಂಗ್ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಲಾಯಿತು. ಇಂದಿನಿಂದಲೇ ರಸ್ತೆ ಡಾಂಬರೀಕರಣ ಆರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆಂದು ತಹಸೀಲ್ದಾರರು ತಿಳಿಸಿದರು.
ಕ್ರಮ ಕೈಗೊಳ್ಳುವ ಭರವಸೆ: ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸೈಯ್ಯದ ಜಾಫರ ಅಲಿ ಜಾಗೀರದಾರ, ನಗರಸಭೆಗೆ ಸಂಬಂಧಿಸಿದ ಬೇಡಿಕೆಗಳನ್ನು ತಾವೇ ಮುತುವರ್ಜು ವಹಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ನಗರಸಭೆಯ ವ್ಯವಸ್ಥಾಪಕ ಗುರುರಾಜ ಸೌಧಿ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಕರವೀರಪ್ರಭು ಕ್ಯಾಲಕೊಂಡ, ಆರೋಗ್ಯ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರು, ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ, ಕೆಆರ್ಡಿಎಲ್, ಜೆಸ್ಕಾಂ, ತೋಟಗಾರಿಕೆ, ಕೆಎಸ್ಸಾರ್ಟಿಸಿ, ಅರಣ್ಯ ಇಲಾಖೆ, ವಿವಿಧ ಶಾಲೆಗಳ ಮುಖ್ಯಸ್ಥರು, ಅಧಿಕಾರಿ ವೃಂದದವರು ಭಾಗವಹಿಸಿದ್ದರು. ಹೋರಾಟ ವೇದಿಕೆಯ ಪರವಾಗಿ ಪದಾಧಿಕಾರಿಗಳಾದ ಶ್ಯಾಮಸುಂದರ ಕೀರ್ತಿ, ಆರ್.ಬೋನವೆಂಚರ್, ಬಾಷುಮಿಯಾ, ಕೆ.ಮರಿಯಪ್ಪ, ಯಶವಂತ ಕೋವಿ, ಅಪ್ಪಣ್ಣ ಕಾಂಬ್ಳೆ, ಸೋಮನಾಥ ಸೂಲಂಗಿ, ಮಂಜುನಾಥ ಗಾಂಧಿನಗರ, ಸಬ್ಜಲಿಸಾಬ, ಅಮರೇಶ ಗಿರಿಜಾಲಿ, ಬಸವರಾಜ ಬಡಿಗೇರ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

