ರಾಯಚೂರು

ಲಿಂಗಸ್ಗೂರು ಮಿನಿ ವಿಧಾನಸೌಧ ಕಾಮಗಾರಿಗೆ ಗರ

Published On :

ಕ.ಪ್ರ. ವಾರ್ತೆ, ಲಿಂಗಸ್ಗೂರು, ಡಿ.17
ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆದ್ಯತೆ ಮೇರೆಗೆ ತಾಲೂಕಿಗೊಂದು ಮಿನಿವಿಧಾನಸೌಧ ಕಟ್ಟಡ ನಿರ್ಮಿಸಲು ಮುಂದಾಗಿದೆ. ಆದರೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರಾಸಕ್ತಿ ಎದ್ದುಕಾಣುತ್ತಿದೆ.
ಬ್ರಿಟೀಷ್ ಮತ್ತು ಹೈದ್ರಾಬಾದ್ ನಿಜಾಮರ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಲಿಂಗಸ್ಗೂರಲ್ಲಿ 101 ಬಾಗಿಲವುಳ್ಳ ಬೃಹತ್ ಬಂಗಲೆ ನಿರ್ಮಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ನಂತರ ಈ ಬೃಹತ್ ಬಂಗಲೆಯಲ್ಲಿ ಪ್ರಸ್ತುತ ಸಹಾಯಕ ಆಯುಕ್ತರ ಕಚೇರಿ, ತಹಸೀಲ್ದಾರ್ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ, ಸರ್ವೆ ಇಲಾಖೆ ಕಚೇರಿ, ಆಹಾರ ಇಲಾಖೆ ಕಚೇರಿ ಸೇರಿದಂತೆ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮೀನುಗಾರಿಕೆ, ಅರಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ, ಪ್ರವಾಸಿ ಮಂದಿರ ಸೇರಿದಂತೆ ಅಂದಿನ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಬಾಡಿಗೆ ಕಟ್ಟಡಗಳಲ್ಲಿ: ಆದರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಉಪನೋಂದಣಿ, ಕೆಪಿಟಿಸಿಎಲ್, ಕಾರ್ಮಿಕ ನಿರೀಕ್ಷಕರು, ಕೃಷಿ ಜಲಾನಯನ, ಸಮಾಜ ಕಲ್ಯಾಣ, ಜಲಸಂವರ್ಧನ, ರಾಜ್ಯ ಹೆದ್ದಾರಿ ಅಭಿವೃದ್ಧಿ, ಅಬಕಾರಿ, ಭೂಸೇನಾ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗಳು ಪ್ರತಿ ತಿಂಗಳು ಬಾಡಿಗೆಯಂತೆ ಸಾವಿರಾರು ರೂ. ಬಾಡಿಗೆಯುಳ್ಳ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಈ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ಸೇರಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2010ರಲ್ಲಿ ಕಟ್ಟಡ ನಿರ್ಮಿಸಲು 2.50 ಕೋಟಿ ಮಂಜೂರು ಮಾಡಿ ಅಂದಿನ ಕಂದಾಯ ಸಚಿವರಾಗಿದ್ದ ಎಂ. ಕರುಣಾಕರರೆಡ್ಡಿ ಈಗಿನ ಪ್ರವಾಸಿ ಮಂದಿರದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಿದರು.
ಕಾಮಗಾರಿ ಮಂದಗತಿಯಲ್ಲಿ: ಪ್ರಸ್ತುತ ಕಾಮಗಾರಿ ಎರಡು ಅಂತಸ್ತಿನವರೆಗೆ ಮಾತ್ರ ನಿರ್ಮಿಸಲಾಗಿದ್ದು, ಬಹುತೇಕ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಕಾಮಗಾರಿ ತ್ವರಿತಗೊಳಿಸುವಂತೆ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಾ ಬರುತ್ತಿದ್ದಾರೆ. ಮಿನಿವಿಧಾನಸೌಧ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡ ನಂತರ ಸಹಾಯಕ ಆಯುಕ್ತರ ಹಾಗೂ ತಹಸೀಲ್ದಾರ್ ಕಚೇರಿಗಳು ನೂತನ ಕಟ್ಟಡದಲ್ಲಿ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ. ಈ ಕುರಿತು ಇನ್ನು ಯಾವ ಇಲಾಖೆಗಳು ನೂತನ ಕಟ್ಟಡದಲ್ಲಿ ಸ್ಥಳಾಂತರಗೊಳ್ಳಲಿವೆ ಎಂಬುದು ನಿರ್ಧಾರವಾಗಿಲ್ಲ.
-ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.