ಕೈಗಾರಿಕೆ ಕ್ಷೇತ್ರದ ಪ್ರಗತಿಗೆ ಜನವರಿಯಲ್ಲಿ ಸಭೆ
ಕ.ಪ್ರ. ವಾರ್ತೆ ರಾಯಚೂರು ಡಿ.19
ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿನ ಮೂಲ ಸೌಲಭ್ಯಗಳ ಕೊರತೆ, ನಿವೇಶನಗಳ ಹಂಚಿಕೆಯಲ್ಲಿನ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜನವರಿ ಮೂರನೇ ವಾರದಲ್ಲಿ ರಾಜ್ಯ ಕೈಗಾರಿಕೆ ಇಲಾಖೆಯ ಆಯುಕ್ತರೊಂದಿಗೆ ಸಭೆ ಆಯೋಜಿಸಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಹೊರವಲಯದಲ್ಲಿರುವ ಕೈಗಾರಿಕೆ ಕೇಂದ್ರದಲ್ಲಿ ಈಗಲೂ ಅನೇಕ ರೀತಿಯ ಸೌಲಭ್ಯಗಳ ಕೊರತೆಯಿದೆ. ಅದರಿಂದಾಗಿ ಕೈಗಾರಿಕೆಗಳ ಸ್ಥಾಪನೆಗೆ ಅಡಚಣೆಯಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಒಟ್ಟು 83 ಅರ್ಜಿಗಳು ಕೈಗಾರಿಕೆ ಸ್ಥಾಪನೆಗೆ ಸಲ್ಲಿಕೆಯಾಗಿದ್ದು ಅವುಗಳ ಪೈಕಿ 77 ಅರ್ಜಿದಾರರಿಗೆ ನಿವೇಶನ ಮಂಜೂರಾಗಿದ್ದರೂ ಹಂಚಿಕೆಯಾಗಿಲ್ಲ ಎಂದು ದೂರಿದರು.
ಆಯುಕ್ತರ ಸಮ್ಮುಖ ಸಮಸ್ಯೆಗೆ ಪರಿಹಾರ: ನಿವೇಶನ ನೀಡಿಕೆಯಲ್ಲಿನ ವಿಳಂಬ ಹಾಗೂ ಸವಲತ್ತುಗಳ ಕೊರತೆಯಿಂದಾಗಿ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಯಲ್ಲಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಲಭ್ಯವಿರುವ 65 ಎಕರೆ ಪ್ರದೇಶದಲ್ಲಿ ಅರ್ಜಿದಾರರಿಗೆ ನಿವೇಶನ ಹಂಚಿಕೆಗೆ ಕೈಗಾರಿಕೆ ಆಯುಕ್ತರ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಕೃಷಿ ಉತ್ಪನ್ನಗಳ ರಫ್ತು ಸಂಬಂಧಿಸಿ ಅನೇಕರಿಗೆ ಮಾಹಿತಿ ನೀಡಿಕೆಗೆ ಸಂಬಂಧಿಸಿ ಡಿ.21ರಂದು ಕೃಷಿ ವಿವಿ ಸಹಯೋಗದಲ್ಲಿ ರಫ್ತು ಉತ್ತೇಜನಕ್ಕೆ ಸಂಬಂಧಿಸಿ ಮಾಹಿತಿ ನೀಡಿಕೆ ಕಾರ್ಯಾಗಾರ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ರಫ್ತು ನೀತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ರಫ್ತು ಮಾಹಿತಿ ಕೇಂದ್ರ: ಲಭ್ಯ ಉತ್ಪನ್ನಗಳ ಮಾರುಕಟ್ಟೆ ಮಾಡುವಿಕೆ ಮತ್ತು ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಖ್ಯಾತ ಉದ್ಯಮಿ ವಿಪಿನ್ ಸಿಂಘ್ವಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಿದ್ದಾರೆ ಎಂದ ಅವರು, ಶೀಘ್ರದಲ್ಲಿಯೇ ಜಿಲ್ಲಾ ವಾಣಿಜ್ಯೋದ್ಯಮ ಸಂಘವು ತನ್ನ ಕಚೇರಿಯಲ್ಲಿ ರಫ್ತು ಮಾಹಿತಿ ನೀಡಿಕೆ ಕೇಂದ್ರ ಆರಂಭಿಸಲು ಯೋಜಿಸಿದೆ ಎಂದು ಹೇಳಿದರು.
ಲೆವಿ ಅಕ್ಕಿ ಪದ್ಧತಿ ರದ್ದತಿಗೆ ಆಗ್ರಹ: ರಾಜ್ಯ ಸರ್ಕಾರ ಲೆವಿ ಅಕ್ಕಿ ಪ್ರಮಾಣ ಹೆಚ್ಚಳ ಮಾಡುವ ಮೂಲಕ ಪರೋಕ್ಷವಾಗಿ ರೈತರು, ಕೂಲಿಕಾರ್ಮಿಕರ ಬದುಕಿಗೆ ಸಂಕಷ್ಟ ತಂದೊಡ್ಡಿದೆ. ಲೆವಿ ಅಕ್ಕಿ ಸಂಗ್ರಹ ಪದ್ಧತಿ ಕೈಬಿಡಬೇಕು. ಈಗಾಗಲೇ ಎಫ್ ಕೆಸಿಸಿಐ ಈ ನಿಟ್ಟಿನಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದೆ. ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ಅಕ್ಕಿ ಗಿರಣಿಗಳ ಮಾಲೀಕರು ಮತ್ತು ಸರ್ಕಾರದ ಮಧ್ಯೆ ನಡೆದ ಲೆವಿ ಅಕ್ಕಿ ಕಾರಣಕ್ಕಾಗಿನ ಸಂಘರ್ಷದಿಂದ ರೈತರು ಸಂಕಷ್ಟ ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಲೆವಿ ಅಕ್ಕಿ ಪದ್ಧತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಡಿಸಿ ವಿರುದ್ಧ ಅಸಮಾಧಾನ: ರಾಯಚೂರು ನಗರದಲ್ಲಿ ವಿವಿಧ ಸೌಲಭ್ಯಗಳ ಕೊರತೆ ಸಾಕಷ್ಟಿದ್ದು, ರಸ್ತೆ, ಕುಡಿವ ನೀರು, ವಿದ್ಯುತ್ ಪೂರೈಕೆಯಂಥ ಅಗತ್ಯ ಸೇವೆಗಳು ಸಮರ್ಪಕವಾಗಿಲ್ಲ. ಇದರಿಂದ ಕೈಗಾರಿಕೆಗಳ ಆಗಮನಕ್ಕೆ ವಿಳಂಬವಾಗುತ್ತಿದೆ. ಜಿಲ್ಲಾಧಿಕಾರಿಗಳನ್ನು ಈಗಾಗಲೇ ಅನೇಕ ಬಾರಿ ಈ ವಿಚಾರಕ್ಕೆ ಸಂಬಂಧಿಸಿ ಭೇಟಿ ಮಾಡಿ ಚರ್ಚಿಸಿದ್ದು, ಇದುವರೆಗೆ ಸೂಕ್ತ ಕ್ರಮ ಮಾತ್ರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯು ಜನವರಿ ವೇಳೆಗೆ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ. ಅದರಿಂದಾಗಿ ಈ ಮಾರ್ಗದಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕಾರಣ ಕೂಡಲೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಜಗದೀಶ್ ಗುಪ್ತಾ, ಕಮಲ್ ಕುಮಾರ್ ಜೈನ್, ಮೈಲಾಪುರ ಎನ್. ಮೂರ್ತಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

