ಸಮಾಜದ ಪ್ರಗತಿಗೆ ಅನಿಷ್ಟ ಪದ್ಧತಿಗಳ ಅಡ್ಡಿ
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.22
ಸಮಾಜದಲ್ಲಿ ಪರಂಪರಾಗತವಾಗಿ ಆಚರಣೆಯಲ್ಲಿರುವ ಕೆಲ ಅನಿಷ್ಟ ಪದ್ಧತಿಗಳು ಸಮಾಜಕ್ಕೆ ಉಪದ್ರವಿಯಾಗಿವೆ. ಅಂಥ ಆಚರಣೆ ಗಳಿಂದಾಗಿಯೇ ಸಾಮಾಜಿಕ ಪ್ರಗತಿಗೆ ಹಿನ್ನಡೆಯಾಗಿದೆ. ಅಂಥ ಅನಿಷ್ಟ ಆಚರಣೆಗಳನ್ನು ಪ್ರತಿಬಂಧಿಸುವುದು ಅವಶ್ಯಕ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪ್ರೊ. ಶ್ರೀಧರ್ ಹೇಳಿದರು.
ಅವರು ನಗರದ ಸರ್ಕಾರಿ ನೌಕರರ ಭವನ ಮನೋರಂಜನಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ ಕುರಿತ ಸಂವಾದ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಷಯ ಮಂಡಿಸಿ, ದೇಶದಲ್ಲಿ ಅನಿಷ್ಟ ಪದ್ಧತಿಗಳ ತಡೆಗೆ ಬಿಡಿ ಬಿಡಿಯಾಗಿ ಅನೇಕ ಕಾಯಿದೆಗಳು ಜಾರಿಯಲ್ಲಿವೆ. ಆದರೆ ಅಂಥ ಕಾನೂನುಗಳ ಹೊರತಾಗಿಯೂ ಈಗಲೂ ಅನೇಕ ಕಡೆ ಅಂಥ ಆಚರಣೆಗಳು ನಡೆಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅನಗತ್ಯ ಗೊಂದಲ: ಅನಿಷ್ಟ ಪದ್ಥತಿಗಳ ಆಚರಣೆಯನ್ನು ಪ್ರತಿಬಂಧಿಸುವ ಸಮಗ್ರ ಮಸೂದೆಯ ಅವಶ್ಯಕತೆಯಿದ್ದು, ಅದೇ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ-2013 ಆಗಿದೆ. ಈ ವಿಧೇಯಕದ ಕುರಿತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸಮಾಜದಲ್ಲಿನ ಮೇಲ್ವರ್ಗದವರು ಅನಗತ್ಯ ಗೊಂದಲ ಹುಟ್ಟಿಸುವ ಕಾರ್ಯ ಮಾಡಿವೆ ಎಂದು ದೂರಿದರು.
ದೇಶದಲ್ಲಿ ಯಾವುದೇ ಕಾನೂನು ಜಾರಿಗೆ ಬರುವ ಮುನ್ನ ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುವುದು ಅವಶ್ಯಕ. ಆದರೆ ಈವರೆಗೆ ದೇಶದಲ್ಲಿ ಜಾರಿಗೆ ಬಂದಂಥ ಜಾಗತೀಕರಣ, ಉದಾರೀಕರಣ ನೀತಿಗಳು, ವಿದೇಶಿ ನೇರ ಬಂಡವಾಳ ಹೂಡಿಕೆಯಂಥ ವಿಧೇಯಕಗಳು ಚರ್ಚೆಯಾಗದೇ ಕೇಂದ್ರ ಸರ್ಕಾರದಿಂದ ಅಂಗೀಕಾರ ಪಡೆದಿದ್ದು ಸಮಾಜದಲ್ಲಿ ಈಗಾಗಲೇ ಆತಂಕಕ್ಕೆ ದಾರಿ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾರ್ಪಾಟು ಅಗತ್ಯ: ಈ ಹಿನ್ನೆಲೆಯಲ್ಲಿ ಮೂಢನಂಬಿಕೆಗಳ ಪ್ರತಿಬಂಧಕ ವಿಧೇಯಕ ಏಕಾಏಕಿ ಜಾರಿಗೆ ತರಲು ಹೊರಟಂಥ ಕಾನೂನಲ್ಲ. ಈ ಕುರಿತು ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರು, ದೇಶದ ವಿವಿಧ ಭಾಗಗಗಳಲ್ಲಿರುವ ಅನೇಕ ಕಾನೂನು ತಜ್ಞರು, ವಿಚಾರವಾದಿಗಳ ಸಲಹೆ ಸೂಚನೆ ಪಡೆದು ವಿಧೇಯಕದ ಪರಿಕಲ್ಪನಾತ್ಮಕ ಟಿಪ್ಪಣಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರಕ್ಕೆ ಈ ಟಿಪ್ಪಣಿಯಲ್ಲಿನ ಅನೇಕ ಅಂಶಗಳಲ್ಲಿ ಮಾರ್ಪಾಟು ಮಾಡುವ ಅಧಿಕಾರವಿದೆ ಎಂದು ತಿಳಿಸಿದರು.
ಸಾರ್ವಜನಿಕರೊಂದಿಗೆ ಚರ್ಚೆ ನಂತರವಷ್ಟೇ ವಿಧೇಯಕ ರೂಪು ತಳೆದಿದೆ. ಈ ವಿಧೇಯಕದ ಬಗ್ಗೆ ಸದ್ಯ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದ ಅವರು, ಪರಂಪರಾಗತವಾಗಿ ಜಾರಿಯಲ್ಲಿರುವ ಬೆತ್ತಲೆ ಸೇವೆ, ಅಜಲು ಪದ್ಧತಿಯಂಥ ಆಚರಣೆಗಳ ನಿಯಂತ್ರಣಕ್ಕೆ ಕಾನೂನು ರೂಪಿಸಿದ್ದರೂ ಅವುಗಳ ಆಚರಣೆ ನಿಂತಿಲ್ಲ. ಇಂಥ ಅನಿಷ್ಟ ಆಚರಣೆಗಳ ತಡೆಗೆ ವಿಧೇಯಕದ ಜಾರಿ ತೀರಾ ಅವಶ್ಯಕ ಎಂದರು.
ಹೊಣೆಗಾರಿಕೆ: ದೇಶದ ಸಂವಿಧಾನದಲ್ಲಿಯೇ ನಂಬಿಕೆಗೆ ವಿರುದ್ಧವಾದ ಕಾನೂನು ರೂಪಿಸದಂತೆ ತಿಳಿಸಿದೆ. ಅದೇ ವೇಳೆ ನಂಬಿಕೆಗೆ ಪೆಟ್ಟು ನೀಡುವ ರೀತಿಯಲ್ಲಿ ಅನಿಷ್ಟ ಆಚರಣೆಗಳಿಗೆ ಕಡಿವಾಣ ಹಾಕುವ ಹೊಣೆಗಾರಿಕೆಯನ್ನು ಸಮಾಜದಲ್ಲಿರುವ ಎಲ್ಲ ನಾಗರಕ ಮೇಲೆ ಹೊರಿಸಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಕುಮಾರ ಸಮತಳ, ಮೌಢ್ಯ ಬಿತ್ತುವ ಕಾರ್ಯಕ್ಕೆ ತಡೆಯೊಡ್ಡುವ ಕೆಲಸ ವಿಧೇಯಕದಿಂದಾಗಬೇಕಿದೆ. ಈ ನಿಟ್ಟಿನಲ್ಲಿ ಚಳವಳಿ ಕಟ್ಟಿಕೊಡುವ ಕಾರ್ಯಕ್ಕೆ ಚಾಲನೆ ದೊರೆಯಬೇಕಿದೆ ಎಂದರು.
ಟೀಕೆ ಸರಿಯಲ್ಲ: ಮೂಢನಂಬಿಕೆ, ಆಚಾರ ವಿಚಾರ, ಜಾತಿ ಧರ್ಮ ಪರಿಪಾಲನೆಯ ಹೆಸರಿನಲ್ಲಿ ಸಮಾಜದ ವಿಂಗಡಣೆ ಸರಿಯಲ್ಲ. ರಾಜ್ಯ ಸರ್ಕಾರ ವಿಧೇಯಕದ ಬಗ್ಗೆ ವಿಚಾರ ಪ್ರಸ್ತಾಪಿಸಿದಾಗ ಮೇಲ್ವರ್ಗ ಮತ್ತು ಪುರೋಹಿತಶಾಹಿ ಜನ ವಿಧೇಯಕವನ್ನು ಅನಗತ್ಯ ವಿರೋಧಿಸುವ ಹಾಗೂ ವಿಚಾರವಾದಿಗಳ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಟೀಕಿಸಿದ್ದು ಸರಿಯಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮವರ್ಧನ್ ವಕೀಲರು ವಹಿಸಿದ್ದರು.ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚಟ್ಹಾಳ್, ಅಂಬಣ್ಣ ಅರೋಲಿಕರ್, ಡಾ.ಕುಂಟೆಪ್ಪ ಗೌರೀಪುರ, ಮಹೆಬೂಬ್ ಪಾಷಾ ಮೂಲಿಮನಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

