ದೇವದುರ್ಗ ಅಭಿವೃದ್ಧಿ ಅನುದಾನ ದುರ್ಬಳಕೆ
ರಾಯಚೂರು: ದೇವದುರ್ಗ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಳೆದ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರು. ಅನುದಾನ ಬಿಡುಗಡೆಯಾಗಿದ್ದರೂ ಅಲ್ಲಿನ ತಾಂಡಾಗಳಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ತಾಂಡಾಗಳಲ್ಲಿ ಈಗಲೂ ಸೌಲಭ್ಯದಿಂದ ದೂರವೇ ಉಳಿದಿವೆ ಎಂದು ಸಿಪಿಐಎಂಎಲ್ ರೆಡ್ ಫ್ಲ್ಯಾಗ್ ರಾಜ್ಯ ಸಮಿತಿ ಸದಸ್ಯ ಬಿ. ಬಸವಲಿಂಗಪ್ಪ ಆರೋಪಿಸಿದರು.
ನಗರದಲ್ಲಿ ಸೋಮವಾರ ಕರ್ನಾಟಕ ಯುವಜನ ರಂಗದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರವು ದೇವದುರ್ಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾಗಿ ಹೇಳಿತ್ತು. ಆದರೆ ಅನುದಾನ ದುರ್ಬಳಕೆಯಾಗಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಕುಡಿಯಲು ಶುದ್ಧ ನೀರೇ ಇಲ್ಲ: ದೇವದುರ್ಗ ತಾಲೂಕಿನ ಬಂಗಾರಬಂಡಿ ತಾಂಡಾ ಹತ್ತು ಹಲವು ಸಮಸ್ಯೆಗಳ ತಾಣವಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಯಾಪೈಸೆ ದೊರೆತಿಲ್ಲ. ಜನತೆ ಸಂಕಷ್ಟಗಳ ಮಧ್ಯೆ ಬದುಕು ಕಳೆಯುತ್ತಿದ್ದಾರೆಂದು ಆರೋಪಿಸಿದ ಅವರು, ಅರಕೇರಾ ಗ್ರಾಮದಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ತಾಂಡಾಕ್ಕೆ ಇಂದಿಗೂ ಸಮರ್ಪಕ ರಸ್ತೆಯಿಲ್ಲವಾಗಿದೆ ಎಂದು ದೂರಿದರು.
ನಾರಾಯಣಪುರ ಬಲದಂಡೆ ಕಾಲುವೆಯ ಬಳಿಯೇ ತಾಂಡಾ ಇದ್ದರೂ ತಾಂಡಾದ ಜನತೆಗೆ ಶುದ್ಧ ಕುಡಿಯುವ ನೀರೊದಗಿಸುವ ಕಾರ್ಯವನ್ನು ಗ್ರಾಪಂ ಆಡಳಿತವಾಗಲೀ ಜನಪ್ರತಿನಿಧಿಗಳಾಗಲೀ ಮಾಡಿಲ್ಲ. ತಾಂಡಾದಲ್ಲಿ ಎರಡು ಕೊಳವೆಬಾವಿಗಳಿದ್ದು ಆ ಎರಡರಲ್ಲೂ ಶುದ್ಧ ಕುಡಿಯುವ ನೀರು ದೊರೆತಿಲ್ಲ. ಆದರೂ ಜನತೆ ಅನಿವಾರ್ಯವಾಗಿ ಅದೇ ನೀರು ಸೇವಿಸುವಂತಾಗಿದೆ ಎಂದು ಆರೋಪಿಸಿದರು.
5ನೇ ತರಗತಿ ನಂತರ ಶಿಕ್ಷಣ ಮರೀಚಿಕೆ: ತಾಂಡಾದ ಕೃಷಿ ಜಮೀನಿಗೆ ಕಾಲುವೆಯ ನೀರು ಹರಿಸುವ ಮೂಲಕ ತಾಂಡಾದ ನಿವಾಸಿಗಳ ಬದುಕಿಗೆ ಭದ್ರತೆ ಕಲ್ಪಿಸುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಗಂಗಾಕಲ್ಯಾಣ ಯೋಜನೆ ಅಡಿ ಕೊಳವೆಬಾವಿಗಳಿಂದಲೇ ನೀರಾವರಿ ಮಾಡಿಕೊಂಡಿದ್ದಾರೆಂದು ತಿಳಿಸಿದರು.
1995ರಲ್ಲಿ ಈ ತಾಂಡಾಕ್ಕೆ ಸರ್ಕಾರದಿಂದ ವಸತಿ ಯೋಜನೆ ಅಡಿ 10 ಮನೆಗಳು ಮಂಜೂರಾಗಿದ್ದು, ಆನಂತರದಲ್ಲಿ ಬಿ. ಗಣೇಕಲ್ ಗ್ರಾಪಂ ವ್ಯಾಪ್ತಿಯ ಈ ಗ್ರಾಮಕ್ಕೆ ವಸತಿ ಯೋಜನೆಯ ಒಂದೂ ಮನೆ ಮಂಜೂರಾಗಿಲ್ಲ. ಅನೇಕ ಬಾರಿ ಗ್ರಾಪಂನಿಂದ ವಸತಿ ಯೋಜನೆ ಅಡಿ ಬಡವರಿಗೆ ಮನೆ ನೀಡುವ ಭರವಸೆ ನೀಡಲಾಗಿದೆಯೇ ವಿನಾ ಮನೆಗಳನ್ನು ಮಾತ್ರ ಇದುವರೆಗೆ ಕಟ್ಟಿಕೊಟ್ಟಿಲ್ಲ ಎಂದು ದೂರಿದರು.
ಮನವಿಗೆ ಸ್ಪಂದನೆಯೇ ಇಲ್ಲ: ಗ್ರಾಮದಲ್ಲಿ 400 ಜನಸಂಖ್ಯೆಯಿದ್ದು ಗ್ರಾಮದಲ್ಲಿ ಒಂದರಿಂದ 5ನೇ ತರಗತಿವರೆಗೆ ಶಾಲೆಯಿದೆ. ಇಬ್ಬರು ಶಿಕ್ಷಕರಿದ್ದು, ಅವರು ದಿನವೂ ಕಾಲ್ನಡಿಗೆಯಲ್ಲಿಯೇ ತಾಂಡಾಕ್ಕೆ ಆಗಮಿಸಿ ಕಾರ್ಯನಿರ್ವಹಿಸುವಂತಾಗಿದೆ. ಗ್ರಾಮದ ಮಕ್ಕಳು 5ನೇ ತರಗತಿಯ ನಂತರದಲ್ಲಿ ಕಾಲ್ನಡಿಗೆಯಲ್ಲಿಯೇ ಸಾಗಿ ನಂತರ ಶಿಕ್ಷಣ ಪಡೆಯಬೇಕಿದೆ ಎಂದು ಆರೋಪಿಸಿದರು.
ತಾಂಡಾಕ್ಕೆ ವಿದ್ಯುತ್ ಸಂಪರ್ಕವಿದ್ದರೂ ಸಮರ್ಪಕ ವಿದ್ಯುತ್ ಪೂರೈಕೆಯಾಗುವುದಿಲ್ಲ. ವಿದ್ಯುತ್ ಪರಿವರ್ತಕ ಸುಟ್ಟ ಸಂದರ್ಭದಲ್ಲಿ ತಾಂಡಾದ ನಿವಾಸಿಗಳು ಹತ್ತಾರು ರೀತಿಯಿಂದ ತೊಂದರೆ ಎದುರಿಸುತ್ತಾರೆ. ತಾಂಡಾಕ್ಕೆ ಎರಡು ವಿದ್ಯುತ್ ಪರಿವರ್ತಕಗಳನ್ನು ನೀಡುವಂತೆ ಕಳೆದ ಅನೇಕ ವರ್ಷಗಳಿಂದ ತಾಂಡಾದ ನಿವಾಸಿಗಳು ಬೇಡಿಕೆಯಿಟ್ಟಿದ್ದರೂ ಅಧಿಕಾರಿಗಳು ಮಾತ್ರ ಮನವಿಗೆ ಸ್ಪಂದಿಸಿಲ್ಲ ಎಂದು ಟೀಕಿಸಿದರು.
'ಜ್ಯೋತಿ' ದರ್ಶನವೇ ಇಲ್ಲ: ರಾಜೀವಗಾಂಧಿ ವಿದ್ಯುತ್ ಯೋಜನೆ ಅಡಿ ನೂರಾರು ಕೋಟಿ ರು. ವೆಚ್ಚ ಮಾಡಲಾಗಿದೆ. ಆದರೆ ತಾಂಡಾಕ್ಕೆ ಮಾತ್ರ ಆ ಯೋಜನೆಯ ಲಾಭ ದೊರೆತಿಲ್ಲ. ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಲಭ್ಯವಾಗಿಲ್ಲ. ನಿರಂತರ ಜ್ಯೋತಿ ಯೋಜನೆಯ ದರ್ಶನ ಈ ತಾಂಡಾದ ನಿವಾಸಿಗಳಿಗಾಗಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ದೇವದುರ್ಗ ಶಾಸಕರು ಹಾಗೂ ರಾಜ್ಯದ ಸಿಎಂ ಗಮನಹರಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಸಂಘಟನೆಯಿಂದ ಎಲ್ಲ ತಾಂಡಾಗಳ ನಿವಾಸಿಗಳ ಜತೆಗೂಡಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವಜನ ರಂಗದ ಪ್ರಮುಖರಾದ ಬಸವರಾಜ ಹುರಕಡ್ಲಿ, ಶ್ರೀನಿವಾಸ ಕೊಪ್ಪರ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

