ರಾಯಚೂರು

ಎನ್ನಾರ್ಬಿಸಿ ಕಾಲುವೆ ವಿಸ್ತರಣೆ ಶೀಘ್ರ ಪೂರ್ಣ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಡಿ.25
ನಾರಾಯಣಪುರ ಬಲದಂಡೆ ಕಾಲುವೆಯನ್ನು 95 ಕಿಮೀನಿಂದ 125 ಕಿಮೀವರೆಗೆ ಸದ್ಯ ಚಾಲನೆ ನೀಡಿರುವ ವಿಸ್ತರಣೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಸರ್ಕಾರ ಬದ್ಧವಾಗಿದೆ. ಅದೇ ವೇಳೆ 125 ಕಿಮೀನಿಂದ 168 ಕಿಮೀವರೆಗೆಕಾಲುವೆ ವಿಸ್ತರಣೆಗೆ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಮಾನವಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಕಾಮಗಾರಿಯನ್ನು ಸಿಎಂ ಚಾಲನೆ ನೀಡಿದ ನಂತರದಲ್ಲಿ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಲು ಪ್ರಾಮಾಣಿಕ ಯತ್ನ ಮಾಡಲಾಗುತ್ತದೆ. ಅದೇ ರೀತಿ ಸದ್ಯ 125 ಕಿಮೀನಿಂದ 168 ನೇ ಕಿಮೀವರೆಗಿನ ಕಾಲುವೆಯ ನಿರ್ಮಾಣಕ್ಕೆ ಸಮೀಕ್ಷೆ ಜಾರಿಯಲ್ಲಿದ್ದು, ಸಮೀಕ್ಷೆಯಾಧರಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಪ್ರಾಮಾಣಿಕ ಯತ್ನ: ನಾರಾಯಣಪುರ ಬಲದಂಡೆ ಕಾಲುವೆಯಿಂದ ತುಂಗಭದ್ರಾ ಎಡದಂಡೆ ಕಾಲುವೆಗೆ ಸಂಪರ್ಕ ಕಾಲುವೆ ನಿರ್ಮಿಸಿ ನೀರು ಹರಿಸುವ ಮೂಲಕ ಎಡದಂಡೆ ಕಾಲುವೆಯ ಕಡೆಯ ಭಾಗದ ರೈತರಿಗೆ ಸಮರ್ಪಕ ನೀರೊದಗಿಸುವುದು ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಪರಿಶೀಲಿಸಲಿದೆ ಎಂದು ತಿಳಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಗೂ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಬಾಕಿ ಉಳಿದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಉದ್ದೇಶಿಸಿದ್ದು, ಸಿಎಂ ಸಿದ್ದರಾಮಯ್ಯ ಅದಕ್ಕಾಗಿ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆಂದರು.
ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಹಿಂದುಳಿದಿರುವ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಎಲ್ಲ ಇಲಾಖೆಗಳ ಸಹಕಾರ ಅವಶ್ಯಕ. ಆದತ್ಯೆಯ ಮೇರೆಗೆ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಅವರು ಸಿಎಂ ಸೇರಿದಂತೆ ಸಮಾರಂಭದಲ್ಲಿದ್ದ ಎಲ್ಲ ಸಚಿವರಿಗೆ ಮನವಿ ಮಾಡಿದರು.
ಮತ್ತೊಬ್ಬ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ರಾಜ್ಯದಲ್ಲಿ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರದಿಂದ ರು. 1800 ಕೋಟಿ ಮಂಜೂರಾಗಿದ್ದು, ರಾಜ್ಯ ಹೆದ್ದಾರಿಗಳ ಡಾಂಬರೀಕರಣ ಕಾರ್ಯಕ್ಕೆ ಅನುದಾನ ಬಳಕೆ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ, ಈ ಅಭಿವೃದ್ಧಿ ಕಾರ್ಯಕ್ಕೆ ಡಿ. 26ರಂದು ಚಾಲನೆ ನೀಡಲಿದ್ದಾರೆಂದು ಹೇಳಿದರು.
ಭರವಸೆ: ಸರ್ಕಾರವು ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಲಿದ್ದು, ರಸ್ತೆಗಳ ಅಭಿವೃದ್ಧಿ ಮತ್ತು ಸುಧಾರಣೆಗೆ ಪೂರಕ ಕ್ರಮ ಕೈಗೊಂಡಿದೆ. ಸರ್ಕಾರ ತಾನು ನೀಡಿದ ಚುನಾವಣೆಯ ಪ್ರಣಾಳಿಕೆಯಲ್ಲಿನ ಶೇ. 60ರಷ್ಟು ಭರವಸೆ ಈಡೇರಿಸಿರುವುದಾಗಿ ತಿಳಿಸಿದರು.
ಸಚಿವ ಖಮರುಲ್ ಇಸ್ಲಾಂ ಮಾತನಾಡಿ, ರಾಜ್ಯದ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮೂಲಸೌಕರ್ಯಾಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ರಾಯಚೂರು ನಗರಸಭೆಗೆ ರು. 70 ಕೋಟಿ, ಸಿಂಧನೂರು ನಗರಸಭೆಗೆ ರು. 35ಕೋಟಿ, ಮಾನವಿ ಪುರಸಭೆಗೆ ರು. 15ಕೋಟಿ ಹಾಗೂ ಮತ್ತಿತರೆ ಸ್ಥಳೀಯ ಸಂಸ್ಥೆಗಳಿಗೆ ತಲಾ ರು. 5 ಕೋಟಿ ಒದಗಿಸಿ ಮುಂದಿನ ಜನವರಿಯ ಮೊದಲ ವಾರವೇ ಕಾಮಗಾರಿಗೆ ಚಾಲನೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆರ್ಥಿಕ ನೆರವು: ರಾಜ್ಯ ಸರ್ಕಾರ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ಹತ್ತಾರು ಯೋಜನೆಗಳಡಿ ಆರ್ಥಿಕ ನೆರವು ನೀಡುತ್ತಿದ್ದು, ರಾಜ್ಯ ಸರ್ಕಾರದ ಶಾದಿಭಾಗ್ಯ ಯೋಜನೆ ಅಡಿ 2 ಸಾವಿರ ಜನರಿಗೆ ಸೌಲಭ್ಯ ಒದಗಿಸಲು ಯೋಜಿಸಲಾಗಿತ್ತು. ಆ ಪೈಕಿ ಈಗಲೇ 500 ಅರ್ಜಿಗಳು ಬಂದಿವೆ ಎಂದರು.
ಸಮಾರಂಭದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಮಾಜಿ ಶಾಸಕ ಎನ್.ಎಸ್. ಬೋಸರಾಜು, ಮಾಜಿ ಶಾಸಕ ಪಾಪಾರೆಡ್ಡಿ, ಜಿಪಂ ಅಧ್ಯಕ್ಷೆ ಲಲಿತಮ್ಮ, ಪಾರಸಮಲ್ ಸುಖಾಣಿ ಸೇರಿ ಅನೇಕರಿದ್ದರು.
ಪ್ರಯಾಣಿಕರ ಪರದಾಟ
ರಾಯಚೂರು: ಕಿಲೋಮೀಟರ್‌ಗಟ್ಟಲೇ ವಾಹನಗಳ ಸಾಲು. ಸಾರಿಗೆ ಸಂಸ್ಥೆಯ ಬಸ್‌ಗಳೂ ಸೇರಿ ನೂರಾರು ವಾಹನಗಳ ನಿಲುಗಡೆಯಿಂದ ಪ್ರಯಾಣಿಕರ ಪರದಾಟ. ಮಾನವಿಯಲ್ಲಿ ಬುಧವಾರ ಸಿಎಂ ಭೇಟಿ ಕಾರ್ಯಕ್ರಮದ ಸಂದರ್ಭ ಕಂಡುಬಂದ ಚಿತ್ರಣವಿದು.
ಸಿಎಂ ಸಿದ್ದರಾಮಯ್ಯ ಮಾನವಿ ಪಟ್ಟಣದ ಹೊರವಲಯದಲ್ಲಿನ ಹೆಲಿಪ್ಯಾಡ್‌ನಿಂದ ಮಾನವಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆಯೇ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಆದರೆ ಅದೇ ವೇಳೆ ಕಾಂಗ್ರೆಸ್ ಪಕ್ಷದ ನಾಯಕರು ಆಯೋಜಿಸಿದ್ದ ಬೈಕ್‌ರ್ಯಾಲಿ ಕಾರಣಕ್ಕೆ ಎಲ್ಲರೂ ತೊಂದರೆ ಎದುರಿಸುವಂತಾಯಿತು. ಎರಡು ಗಂಟೆಗೂ ಹೆಚ್ಚು ಕಾಲ: ಪ್ರವಾಸಿ ಮಂದಿರದ ಬಳಿಯ ವೃತ್ತದಿಂದ ಸಮಾರಂಭ ಆಯೋಜಿಸಿದ್ದ ಕರಡಿಗುಡ್ಡ ರಸ್ತೆಯವರೆಗೆ ಮಾರ್ಗದುದ್ದಕ್ಕೂ ಪೊಲೀಸರು ಸಂಚಾರ ನಿಯಂತ್ರಿಸಿದರು. ಎರಡು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ನಿಲುಗಡೆ ಮಾಡಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡಿದರು.
ಕಾರು ತೀವ್ರ ಜಖಂ: ಈ ವೇಳೆ ಸಾರಿಗೆ ಸಂಸ್ಥೆಯ ಬಸ್‌ಗಳು ಗಂಟೆಗಟ್ಟಲೇ ಮಾರ್ಗದಲ್ಲಿಯೇ ನಿಂತಿದ್ದರಿಂದ ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಅನೇಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ಕೆಳಗಿಳಿದು ಕಾಲ್ನಡಿಗೆಯಲ್ಲಿಯೇ ನಿಲ್ದಾಣಕ್ಕೆ ತೆರಳಿದರೆ, ಇದೇ ವೇಳೆ ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದ್ದರಿಂದ ಕಾರು ತೀವ್ರ ಜಖಂಗೊಂಡಿತು. ಇದು ಕಾರು ಚಾಲಕರು ಮತ್ತು ಲಾರಿಯಲ್ಲಿದ್ದವರ ಮಧ್ಯೆ ಜಗಳಕ್ಕೆ ಕಾರಣವಾಯಿತು. ಬೈಕ್ ರ್ಯಾಲಿ ವೇಳೆ ಯುವಕರಿದ್ದ ಬೈಕ್‌ಗಳು ಯರ್ರಾಬಿರ್ರಿ ಸಂಚರಿಸಿದ್ದರಿಂದ ರಸ್ತೆಯಲ್ಲಿ ಸಾಗುವ ಪಾದಚಾರಿಗಳು ಭಯದಲ್ಲಿಯೇ ತೆರಳುವಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.