ರಾಯಚೂರು

ಕಲಾ ಪ್ರತಿಭೆಗಳಿಗೆ ಸಮಾಜದ ಪ್ರೋತ್ಸಾಹ ಅವಶ್ಯ

Published On :

ಕ.ಪ್ರ.ವಾರ್ತೆ , ರಾಯಚೂರು ,  ಡಿ.26
ಸಂಗೀತ, ಚಿತ್ರ ಬಿಡಿಸುವುದರಂಥ ಕಲಾ ಪ್ರಕಾರಗಳನ್ನು ಹಣದಂತೆ ಗಳಿಸಲಾಗದು. ಅಂಥ ಕಲೆಗಳು ದೈವದತ್ತವಾಗಿಯೇ ಕರಗತವಾಗಿರುತ್ತವೆ. ಆದರೆ ಕಲಾಪ್ರತಿಭೆಗಳಿಗೆ ಸಮಾಜದಿಂದ ಸೂಕ್ತ ಪ್ರೋತ್ಸಾಹ ನೀಡುವುದು ತೀರಾ ಅಗತ್ಯ ಎಂದು ಖ್ಯಾತ ಸಂಗೀತಗಾರ ಡಾ.ಪಂ.ನರಸಿಂಹಲು ವಡವಾಟಿ ಹೇಳಿದರು.
ಪರಿಶ್ರಮ ಅಗತ್ಯ: ಅವರು ನಗರದ ಪತ್ರಿಕಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕದ ಗಿರಿಜನ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಸಮೂಹ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಹಣವನ್ನು ಗಳಿಸಿದಂತೆ ಕಲೆಯನ್ನು ಗಳಿಸುವುದು ಅಸಾಧ್ಯ. ಕಲೆಯ ಗಳಿಕೆಯ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ ಎಂದು ತಿಳಿಸಿದರು.
ಜಂಗಮರಿದ್ದಂತೆ: ಕಲಾವಿದರಿಗೆ ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಿಸುವುದು ಅವಶ್ಯಕ. ಕಲಾವಿದರು ಜಂಗಮರಿದ್ದಂತೆ. ಅವರು ಕೇವಲ ಒಂದೇ ಪ್ರದೇಶಕ್ಕೆ ಸೀಮಿತಗೊಳ್ಳದೇ ವಿವಿಧ ಪ್ರದೇಶಗಳಿಗೆ ತೆರಳಿ ಕಲಾ ಪ್ರದರ್ಶನ ನೀಡುವ ಮೂಲಕ ಸಮಾಜದ ಗಮನ ಸೆಳೆಯುವ ಮೂಲಕ ಉತ್ತಮ ಸಾಧನೆ ಮೆರೆಯುವಂತೆ ಸಲಹೆ ನೀಡಿದರು.
ಕಲಾವಿದರು ಯಾವಾಗಲೂ ಪ್ರಯತ್ನವಾದಿಗಳಾಗಿರಬೇಕು. ಆಗ ಮಾತ್ರ ಬದುಕಿನಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಾಗೆಯೇ ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಹೊಣೆಗಾರಿಕೆ ಎಂದು ಕರೆ ನೀಡಿದರು.
ಪ್ರೋತ್ಸಾಹ ಅಗತ್ಯ: ಸಮಾರಂಭ ಉದ್ಘಾಟಿಸಿದ ಹಿರಿಯ ಕಲಾವಿದ ಪಿ.ಎ.ಬಿ.ಈಶ್ವರ್ ಮಾತನಾಡಿ, ಜಿಲ್ಲೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹಿಸುವಂಥ ಕಾರ್ಯಚಟುವಟಿಕೆಗಳು ಹೆಚ್ಚೆಚ್ಚು ನಡೆಯಬೇಕು. ಆ ಮೂಲಕ ಕಲಾವಿದರಿಗೆ ಭವಿಷ್ಯ ರೂಪಿಸುವ ಕಾರ್ಯ ಎಲ್ಲರೂ ಮಾಡಬೇಕಿದೆ ಎಂದು ತಿಳಿಸಿದರು.
ಹಿರಿಯ ಚಿತ್ರಕಲಾವಿದ ಚಾಂದ್ ಪಾಷಾ ಮಾತನಾಡಿ, ಯುವ ಕಲಾವಿದರು ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಯುವಕರಿಗೆ ಬೆನ್ನುತಟ್ಟಿ ಹುರಿದುಂಬಿಸುವ ಕಾರ್ಯವಾಗಬೇಕಿದೆ. ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಹಾಗೂ ಬೆಂಬಲಿಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕಲಾಪ್ರದರ್ಶನಗಳನ್ನು ಆಯೋಜಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪತ್ರಕರ್ತ ಶಿವಮೂರ್ತಿ ಹಿರೇಮಠ ವಹಿಸಿ ಮಾತನಾಡಿದರು. ಪತ್ರಕರ್ತ ಕೆ. ಸತ್ಯನಾರಾಯಣ, ಚಿತ್ರಕಲಾವಿದರಾದ ದೇವೇಂದ್ರ ಹುಡಾ, ಮಲ್ಲಿಕಾರ್ಜುನ ಆಲೂರು, ವೆಂಕಟೇಶ ಕುಮಾರ್, ಅನೀಸ್ ಫಾತಿಮಾ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.