ರಾಯಚೂರು

ನಾಳೆ 25ನೇ ಸಂಗೀತ ಸಮ್ಮೇಳನ, ರಜತ ಮಹೋತ್ಸವ

Published On :

ಕ.ಪ್ರ.ವಾರ್ತೆ ಟಿ ರಾಯಚೂರು ಟಿ  ಡಿ.26
ಹೈ.ಕ.ಭಾಗಕ್ಕೆ 371ನೇ ವಿಧಿಗೆ ತಿದ್ದುಪಡಿ, ವಿಶೇಷ ಸ್ಥಾನಮಾನ ಹಿನ್ನೆಲೆಯ ಸಂಭ್ರಮ ಹಾಗೂ ಸಂಗೀತ ರತ್ನ, ಸಂಗೀತ ಸುಧಾಕರ, ಶ್ರೀ ಪಂ.ಸಿದ್ದರಾಮ ಜಂಬಲದಿನ್ನಿ ಅವರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಜತೆಗೂಡಿ ಇಲ್ಲಿನ ಸ್ವರಸಂಗಮ ಸಂಗೀತ ವಿದ್ಯಾ ಸಂಸ್ಥೆಯಿಂದ 25ನೇ ಸಂಗೀತ ಸಮ್ಮೇಳನ ಡಿ.28ರಂದು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಖ್ಯಾತ ಸಂಗೀತಗಾರ ಡಾ.ಪಂ.ನರಸಿಂಹಲು ವಡವಾಟಿ ಈ ವಿಷಯ ತಿಳಿಸಿ, ಡಿ.28ರಂದು ಸಂದೆ 6ಕ್ಕೆ ನಗರದ ಉದಯ ನಗರದ ಸ್ವರ ಸಂಗಮ ಸಂಗೀತ ವಿದ್ಯಾಸಂಸ್ಥೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಉದ್ಘಾಟನೆ: 25ನೇ ಸಂಗೀತ ಸಮ್ಮೇಳನವನ್ನು ತಮ್ಮ ಗುರುಗಳಾದ ಶ್ರೀಪಂ.ಸಿದ್ದರಾಮ ಜಂಬಲದಿನ್ನಿ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದು, ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ಲಿಲತಮ್ಮ ಪಾಟೀಲ್ ವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಹರವಿ ಶಂಕರ ಗೌಡ, ಅಯ್ಯಪ್ಪ ತುಕ್ಕಾಯಿ, ಹಿರಿಯ ಸಂಗೀತ ವಿಮರ್ಶಕ ಎಸ್.ಆರ್. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿರುವರು ಎಂದು ಹೇಳಿದರು.
ಸಮಾರಂಭದಲ್ಲಿ ಗುರುಮಾತೆ ಅನಸೂಯಮ್ಮ ಸಿದ್ದರಾಮ ಜಂಬಲದಿನ್ನಿ ಅವರನ್ನು ಸನ್ಮಾನಿಸಲಾಗುತ್ತದೆ. ಸಂಗೀತ ಸಮ್ಮೇಳನದಲ್ಲಿ ಕಲಾವಿದರಾದ ದೆಹಲಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಮಣಿಪ್ರಸಾದ್, ಮುಂಬೈ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ವೈಷ್ಣವಿ ಹಾನಗಲ್, ಪೂನಾದ ಪ್ರಮೋದ್ ಮರಾಠೆ ಅವರಿಂದ ಹಾರ್ಮೋನಿಯಂ ಸೋಲೋ, ಜಿಪಂ ಸಿಇಒ ಡಾ.ಮುದ್ದುಮೋಹನ್ ಬೆಂಗಳೂರಿನ ವಿದೂಷಿ ಸುಮಾ ಸುಧೀಂದ್ರ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವೀಣಾ ವಾದನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸಂಗೀತ ಕಾರ್ಯಕ್ರಮ: ಅದೇ ರೀತಿ ಕಾಶಿ ವಿಶ್ವೇಶ್ವರನ್ ಅವರಿಂದ ವಯಲಿನ್ ವಾದನ, ಬೆಂಗಳೂರಿನ ಪಂ.ವಿಶ್ವನಾಥ್ ನಾಕೋಡ್ ಅವರಿಂದ ತಬಲಾ ವಾದನ,  ರಾಯಚೂರಿನ ದಾದಾಪೀರ್ ಅವರಿಂದ ಗಾಯನ, ವಡವಾಟಿ ಶಾರದಾ ಭರತ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ಕಿರುತೆರೆ ಕಲಾವಿದ ಹರಿಕೃಷ್ಣ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸ್ವರಸಂಗಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಗುರುವಂದನೆ ಆಯೋಜಿಸಿದ್ದು, ಮಂಗಳ ಸಂಗೀತ ವಾದ್ಯವನ್ನು ತಾವೇ ನುಡಿಸುವುದಾಗಿ ಹೇಳಿದ ಅವರು, ಸ್ವರಸಂಗಮ ವಿದ್ಯಾಸಂಸ್ಥೆಯು ಕಳೆದ 1989ರಿಂದ ಪಂ.ಸಿದ್ದರಾಮ ಜಂಬಲದಿನ್ನಿ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಸಂಗೀತ ವಿದ್ಯಾ ಸಂಸ್ಥೆಯಲ್ಲಿ ಸಂಗೀತ ಕಲಿತವರು ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯ, ಧಾರವಾಡ ಸೇರಿ ವಿವಿಧೆಡೆ ಉನ್ನತ ವ್ಯಾಸಂಗ ಮತ್ತು ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ ಎಂದ ಅವರು, ಸ್ಥಳೀಯ ಸಂಗೀತಗಾರರಿಗೆ ಪ್ರೋತ್ಸಾಹ ನೀಡುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉತ್ಸವಗಳನ್ನು ಆಯೋಜಿಸುವುದು ಸೂಕ್ತ ಎಂದು ಸಲಹೆ ನೀಡಿದರು. ದೂರದರ್ಶನ ನಿರೂಪಕ ಕೆ. ಯೋಗ ರವೀಶ್ ಭಾರತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.