ಮಾನವ ನಿರ್ಮಿತ ವಿಕೋಪ ಆಘಾತಕಾರಿ: ಡಾ. ಶ್ರೀಧರ್
ಕ.ಪ್ರ.ವಾರ್ತೆ ಟಿ ರಾಯಚೂರು ಟಿ ಡಿ.26
ಮಾನವ ನಿರ್ಮಿತ ವಿಕೋಪಗಳು ಸಮಾಜಕ್ಕೆ ಆಘಾತಕಾರಿಯಾಗಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ. ನೈಸರ್ಗಿಕ ವಿಕೋಪಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಸುನಾಮಿಯಂಥ ವಿನಾಶ ಸಂಭವಿಸಿದಾಗ ಜನತೆ ಮಾನವೀಯತೆಯಿಂದ ಕಾರ್ಯಪ್ರವೃತ್ತರಾಗುವುದು ಸೂಕ್ತ ಎಂದು ಖ್ಯಾತ ವೈದ್ಯ ಡಾ. ಶ್ರೀಧರ ರೆಡ್ಡಿ ಸಲಹೆ ನೀಡಿದರು.ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾ ಅಗ್ನಿಶಾಮಕ ದಳ ಮತ್ತಿತರೆ ಇಲಾಖೆಗಳಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭಯ ನಿವಾರಣೆಗೆ ಜಾಗೃತಿ ಅವಶ್ಯ: ಬಳ್ಳಾರಿಯ ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ನರಸಿಂಹಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮುಂಜಾಗ್ರತೆ ವಹಿಸುವ ಕುರಿತು ಜಾಗೃತಿ ಮೂಡಿಸುವುದು ಅವಶ್ಯ. ಹಾಗೆಯೇ ಅವರಲ್ಲಿ ಆ ಕುರಿತು ಭಯ ನಿವಾರಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ ಎಂದು ಹೇಳಿದರು.
ಅಗ್ನಿ ಅವಘಡ ಹಾಗೂ ಪ್ರವಾಹ ಪರಿಸ್ಥಿತಿಯಂತ ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನದ ಅಂಗವಾಗಿ ಹಮ್ಮಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಗೃಹರಕ್ಷಕ ದಳಕ್ಕೆ ಮಾಹಿತಿ: ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠ ವಿಜಯಾನಂದ ಅಧ್ಯಕ್ಷತೆ ವಹಿಸಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಗೃಹರಕ್ಷಕ ದಳದವರು ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ಕಾರ್ಯನಿರ್ವಹಣೆಯ ಕುರಿತು ಮಾಹಿತಿ ನೀಡಿದರು.
ಅಣಕು ಪ್ರದರ್ಶನ: ಗೃಹರಕ್ಷಕ ದಳದ ಉಪಸಮಾದೇಷ್ಠ ಆರ್.ಬಿ. ದಂಡಿನವರ್ ಮಾತನಾಡಿದರು. ಈ ಸಂದರ್ಭದಲ್ಲಿ ಗೃಹ ರಕ್ಷಕದಳ ಮತ್ತು ಅಗ್ನಿಶಾಮಕ ದಳದಿಂದ ಅಗ್ನಿ ಆಕಸ್ಮಿಕ ಮತ್ತಿತರೆ ಅವಘಡಗಳ ಕುರಿತು ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.
ಇದಕ್ಕೂ ಮುನ್ನ ನಗರದಲ್ಲಿ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನದಂಗವಾಗಿ ನಗರದಲ್ಲಿ ಜನ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಗೆ ಬಳ್ಳಾರಿಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಆರ್. ನರಸಿಂಹಮೂರ್ತಿ ಚಾಲನೆ ನೀಡಿದರು.
ರ್ಯಾಲಿ ನಗರದ ಕ್ರೀಡಾಂಗಣದಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಡಿಸಿ ಕಚೇರಿ, ನಗರಸಭೆ, ಕೇಂದ್ರ ಬಸ್ ನಿಲ್ದಾಣದ ಮೂಲಕ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಕ್ರೀಡಾಂಗಣ ಸೇರಿತು. ಜಾಥಾದಲ್ಲಿ ಪೊಲೀಸ್, ಗೃಹರಕ್ಷಕದಳ, ಅಗ್ನಿಶಾಮಕ ದಳ, ಜಿಲ್ಲಾ ಯುವಜನ ಸೇವಾ ಅಧಿಕಾರಿ ಮತ್ತು ಸಿಬ್ಬಂದಿ, ರೆಡ್ ಕ್ರಾಸ್ ಪ್ರತಿನಿಧಿಗಳು ಸಾರ್ವಜನಿಕರು, ವೈದ್ಯರು ಇತರೆ ಇಲಾಖೆಯವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

