ಅಕ್ರಮ ಕಲ್ಲು ಗಣಿ; ಕಾನೂನು ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆ ರಾಯಚೂರು ಡಿ.29
ಮಾನವಿ ಪಟ್ಟಣದಲ್ಲಿ ಡಿ.26ರಂದು ಭೂಮಿ ಕಂಪಿಸಿದ ಅನುಭವವಾಗಿದ್ದು ಅದಕ್ಕೆ ಪಟ್ಟಣದ ಬಳಿಯ ಗುಡ್ಡದಲ್ಲಿ ಭಾರೀ ಸ್ಫೋಟಕ ಬಳಕೆ ಮಾಡಿದ್ದು ಕಾರಣ ಎಂದು ಆರೋಪಿಸಿರುವ ಕರ್ನಾಟಕ ರೈತ ಸಂಘವು, ಈ ಘಟನೆಗೆ ಕಾರಣವಾಗಿರುವ ಮಾನವಿಯ ಹಿಂದುಸ್ತಾನ್ ಕ್ರಷರ್ ಮಷಿನ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗೆ ಸಂಘದ ಜಿಲ್ಲಾಧ್ಯಕ್ಷ ನಾಗಲಿಂಗಸ್ವಾಮಿ ಮತ್ತಿತರರು ಮನವಿ ಸಲ್ಲಿಸಿ, ಡಿ.26ರಂದು ರಾತ್ರಿ 7.30ರಿಂದ 10.30ರವರೆಗೆ ಕಲ್ಲು ಗಣಿಯಲ್ಲಿ ಭಾರೀ ಸ್ಫೋಟಕ ಬಳಸಿದ್ದರಿಂದ ಭೂಮಿ ಕಂಪಿಸಿದ ಅನುಭವ ಮಾನವಿ ಪಟ್ಟಣದ ನಿವಾಸಿಗಳಿಗಾಗಿದೆ. ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಹಿಂದೂಸ್ತಾನ್ ಕ್ರಷರ್ ಮಷಿನ್ ಮಾಲೀಕರು ಈ ಘಟನೆಗೆ ಕಾರಣರಾಗಿದ್ದಾರೆಂದು ದೂರಿದ್ದಾರೆ.
ಹೋರಾಟ ನಡೆದಿತ್ತು: ಕರ್ನಾಟಕ ರೈತ ಸಂಘವು ಕಳೆದೊಂದು ವರ್ಷದಿಂದ ಅಕ್ರಮ ಕಲ್ಲಿನ ಗಣಿಗಾರಿಕೆ ವಿರೋಧಿಸಿ ಹೋರಾಟ ನಡೆಸಿತ್ತು. ಅದರಿಂದಾಗಿ ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಕೊರೆಯುವ ಯಂತ್ರಗಳ ಬಳಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸಂಬಂಧಿಸಿದ ಅಕ್ರಮದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳಿಂದಾಗಿ ಭಾರಿ ಸ್ಫೋಟಕಗಳನ್ನು ಈಗಲೂ ಬಳಕೆ ಮಾಡಲಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ: ಕೂಡಲೇ ಮಾನವಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭಾರೀ ಸ್ಫೋಟಕ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಪರಿಶೀಲಿಸಿ ಕೂಡಲೇ ಕಂಪನಿ ಮಾಲೀಕರ ವಿರುದ್ಧ ಸ್ಫೋಟಕ ಕಾಯ್ದೆಯಡಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಸಂಘಟನೆ ಪ್ರಮುಖರಾದ ವಿ.ಮುದುಕಪ್ಪ ನಾಯಕ, ಅಶೋಕ ನಿಲೋಗಲಕರ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

