ರಾಯಚೂರು

'ವಿದ್ಯಾರ್ಥಿಗಳು ಜೈವಿಕ ಇಂಧನ ಸಸಿ ಬೆಳೆಸಲಿ'

Published On :

ಸಿಂಧನೂರು: ಭಾರತ ಜೈವಿಕ ಇಂಧನಕ್ಕೆ ಬೇರೆ ದೇಶಗಳ ಅವಲಂಬನೆಗೊಳಗಾಗಿದೆ. ಇಂಧನ ಖರೀದಿಸಲು ಸರ್ಕಾರ ಕೋಟ್ಯಂತರ ರುಪಾಯಿ ಧನಸಹಾಯ ನೀಡುವುದರಿಂದ ಆರ್ಥಿಕ ಹೊರೆ ಅನುಭವಿಸುತ್ತಿದೆ. ಶಾಲಾ ವಿದ್ಯಾರ್ಥಿಗಳು ಒಂದೊಂದು ಜೈವಿಕ ಸಸಿಯನ್ನು ನೆಡಲು ಸಂಕಲ್ಪ ಮಾಡಬೇಕು. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ದಡೇಸೂಗೂರು ಗ್ರಾಪಂ ಅಧ್ಯಕ್ಷ ಯುನಿಸ್ ಪಾಷಾ ಹೇಳಿದರು.
ದಡೇಸೂಗೂರು ಗ್ರಾಮದ ಎಚ್‌ಪಿಎಸ್ ಶಾಲೆಯಲ್ಲಿ ಜೈವಿಕ ಇಂಧನ ಯೋಜನೆಯಡಿ ಶಾಲಾ ಮಕ್ಕಳಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಿಡಿಒ ಮುರ್ತುಜಾ ಸಾಬ, ಗ್ರಾಪಂ ಸದಸ್ಯರಾದ ದುರುಗಪ್ಪ, ರಾಮಾ ನಾಯಕ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಎಂ.ಆರ್. ಮುದಗಲ್ ಮಾತನಾಡಿ, ಸರ್ಕಾರವು ಜೈವಿಕ ಇಂಧನ ಅಭಿವೃದ್ಧಿಗೆ ವಿವಿಧ ಎಣ್ಣೆ ಬೀಜಗಳ ಉತ್ಪಾದನೆಗೆ ಮುಂದಾಗಿದೆ. ಹೊಂಗೆ, ಬೇವು, ಜತ್ರೋಪ್, ನಾಗಸಂಪಿಗೆ ಇನ್ನಿತರ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. ರೈತರು ತಮ್ಮ ಮನೆ ಹಾಗೂ ಹೊಲಗಳಲ್ಲಿ ತಪ್ಪದೇ ಇಂತಹ ಸಸಿಗಳನ್ನು ಹಾಕಿದರೆ ಸ್ವಾವಲಂಬನೆ ಸಾಧಿಸಬಹುದು ಎಂದರು. ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜತ್ರೋಪ ಜೈವಿಕ ಇಂಧನದ ಖನಿಜ
ಸಿಂಧನೂರು: ಅರಣ್ಯ ಇಲಾಖೆಯ ಸಿಬ್ಬಂದಿ ಜತ್ರೋಪ ಮರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಸಬೇಕಾಗಿದೆ. ಏಕೆಂದರೆ ಜತ್ರೋಪ ಮರಗಳು ಜೈವಿಕ ಇಂಧನದ ಖನಿಜವಾಗಿವೆ ಎಂದು ಎನ್‌ಇಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಕರೇಗೌಡ ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿ ವರ್ಗಕ್ಕೆ ಜೈವಿಕ ಇಂಧನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯರು ಅತೀ ಹೆಚ್ಚು ವಾಹನಗಳನ್ನು ಅವಶ್ಯಕತೆ ಇಲ್ಲದಿದ್ದರೂ ಬಳಸಲು ಮುಂದಾಗಿದ್ದಾರೆ. ಇದರಿಂದ ಇಂಧನದ ಕೊರತೆ ಹೆಚ್ಚಾಗುತ್ತಿದೆ. ಇದನ್ನು ನೀಗಿಸಲು ಜೈವಿಕ ಇಂಧನದ ಉತ್ಪಾದನೆ ಒಂದೇ ಮಾರ್ಗವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶರಣು ಹಿರೇಮಠ ಮಾತನಾಡಿ, ಇಸ್ರೇಲ್ ದೇಶದ ಮಾದರಿಯಲ್ಲಿ ಜಗತ್ತಿನ ಜನತೆ ಜೈವಿಕ ಇಂಧನ ಬಳಸಲು ಇಚ್ಛಾಶಕ್ತಿ ಹೊಂದಬೇಕಾಗಿದೆ.
ಅಧ್ಯಕ್ಷತೆ ವಹಿಸಿದ್ದ ಸಾಧನಾ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ ಬರಸಿ ಮಾತನಾಡಿದರು. ಉಪಅರಣ್ಯ ಪಾಲಕ ಮುನಿಸ್ವಾಮಿ, ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಯೋಜನಾಧಿಕಾರಿ ಇಬ್ರಾಹಿಂ ಪಟೇಲ್ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.