'ಶೋಷಣೆ ಮುಕ್ತ ಸಮಾಜ ನಿರ್ಮಾಣವೇ ಶರಣರ ಆಶಯ'
ರಾಯಚೂರು: ಶರಣರು ಸಮಾಜದಲ್ಲಿನ ಅನಿಷ್ಠಗಳು, ಮೂಢನಂಬಿಕೆಗಳನ್ನು ವಿರೋಧಿಸುತ್ತಲೇ ಶೋಷಣೆ ರಹಿತ ಮುಕ್ತ ವಿಚಾರಗಳಿಗೆ ಅವಕಾಶ ನೀಡುವ ಸಂಸ್ಕೃತಿಯನ್ನು ಜಾರಿಗೆ ತರಲು ಯತ್ನಿಸಿದ್ದರೆಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
ನಗರದ ಎಲ್ವಿಡಿ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಶರಣರದು ಪರ್ಯಾಯ ಸಂಸ್ಕೃತಿಯೇ ಎಂಬ ವಿಷಯದ ಕುರಿತ ಗುಲ್ಬರ್ಗ ವಿಭಾಗ ಮಟ್ಟದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಕಳವಳ: ಶರಣರು ಕಟ್ಟಿದ ಪರ್ಯಾಯ ಸಂಸ್ಕೃತಿಗೆ ವಿರುದ್ಧವಾಗಿ ಇಂದಿನ ದಿನಮಾನದಲ್ಲಿ ಅನೇಕ ಘಟನೆಗಳು ಜರುಗುತ್ತಿವೆ. ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಳ್ಳುವುದು, ಅಂಗವಿಕಲರನ್ನು ಉಪೇಕ್ಷಿಸುವುದರಂಥ ಘಟನೆಗಳು ಸಮಾಜವೇ ತಲೆತಗ್ಗಿಸುವಂಥ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದಲ್ಲಿರುವ ಎಲ್ಲರಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಯನ್ನು ಮೂಡಿಸುವ ನಿಟ್ಟಿನಲ್ಲಿ ಶರಣರು ಪ್ರಗತಿ ಪರ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಅಜ್ಞಾನದಲ್ಲಿ ಮುಳುಗಿರುವ ಸಮಾಜವನ್ನು ಸರಿದಾರಿಯತ್ತ ಮುನ್ನಡೆಸುವುದೇ ಶರಣರ ಪರ್ಯಾಯ ಸಂಸ್ಕೃತಿಯ ಆಶಯ ಎಂದು ಹೇಳಿದರು.
ಯುಗಗಳೇ ಕಳೆದರೂ ವಾಸ್ತುಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಪೌರೋಹಿತ್ಯದಂಥ ಮೌಢ್ಯಗಳಿಂದ ಜನತೆ ಈಗಲೂ ಹೊರಬಂದಿಲ್ಲ ಎಂದ ಅವರು, ರಾಜ್ಯ ಸರ್ಕಾರ 12ನೇ ಶತಮಾನದಲ್ಲಿ ರಚಿಸಿದ 13 ಸಂಪುಟಗಳ ಒಟ್ಟು 23 ಸಾವಿರ ವಚನಗಳನ್ನು ಸಂಗ್ರಹಿಸಿದ್ದು, ಅಧ್ಯಯನದ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರ. ಕಾರ್ಯದರ್ಶಿ ನಾಗರಾಜ್ ಮಸ್ಕಿ ವಕೀಲರು ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಶಸಾಪ ಅಧ್ಯಕ್ಷ ಬಸಪ್ಪ ತಿಪ್ಪಾರೆಡ್ಡಿ ವಹಿಸಿದ್ದರು.ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ, ಚಿಕ್ಕಕರಿಯಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

