ರಾಯಚೂರು

17ರಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಸಮಾವೇಶ

Published On :

ರಾಯಚೂರು: ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರ ಸಮಾವೇಶವನ್ನು ಫೆ. 17ರಂದು ಆಯೋಜಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಮಹಿಳಾ ಸಮಾವೇಶದಲ್ಲಿ ಫೆ. 17ರಂದು ಸಂಜೆ 4.30ಕ್ಕೆ ಸಮಾವೇಶ ಆಯೋಜಿಸಿದ್ದು, ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯ ನಾಯಕರಾದ ಜಮೀರ್ ಅಹ್ಮದ್ ಖಾನ್, ಇಕ್ಬಾಲ್ ಅನ್ಸಾರಿ, ಎಚ್.ಎನ್. ಶಕೀಲ್ ನವಾಜ್, ಸೈಯದ್ ಮುದೀರ್ ಆಗಾ, ಸುಲ್ತಾನಾಬೇಗಂ, ಜುಲ್ಫಿಕರ್ ಹಾಷ್ಮಿ, ಅಬ್ದುಲ್ ಅಜೀಂ, ಇಸ್ಮಾಯಿಲ್ ಸಾಬ್ ಕಾಲೆಬುಡ್ಡೆ, ಜಫ್ರುಲ್ಲಾಖಾನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಸಮಾಲೋಚನೆ: ಸಮಾವೇಶದಲ್ಲಿ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಏಳಿಗೆಗೆ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳು ಹಾಗೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚಿಸಲಾಗುತ್ತದೆ. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಅಲ್ಪಸಂಖ್ಯಾತರು ಭಾಗವಹಿಸುವರೆಂದು ಹೇಳಿದರು.
ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಫೆ. 15ರವರೆಗೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ಕ್ಷೇತ್ರಗಳಿಂದ ಅನೇಕ ಅರ್ಜಿಗಳು ಆಕಾಂಕ್ಷಿಗಳಿಂದ ಬಂದಿದ್ದು, ಪಕ್ಷದ ಹೈಕಮಾಂಡ್ ನಿರ್ಧರಿಸುವ ಅಭ್ಯರ್ಥಿಯನ್ನು ಇನ್ನುಳಿದ ಆಕಾಂಕ್ಷಿಗಳು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಟಿಕೆಟ್ ರೇಸ್‌ನಲ್ಲಿ..: ರಾಯಚೂರು ನಗರ ಕ್ಷೇತ್ರದಿಂದ ತಾವೂ ಸೇರಿದಂತೆ ಡಾ.ಶಿವರಾಜ್ ಪಾಟೀಲ್, ಕುಂಟ್ನಾಳ ವೆಂಕಟೇಶ್, ಯುಸೂಫ್ ಖಾನ್, ಜಾಫರ್ ಅಲಿ ಪಟೇಲ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಪಕ್ಷದಿಂದ ಸ್ಪರ್ಧೆ ಬಯಸಿ ರಾಜಾ ಅಮರೇಶ್ವರ ನಾಯಕ ಮತ್ತು ರಾಜಾ ರಂಗಪ್ಪ ನಾಯಕ ಅರ್ಜಿ ಸಲ್ಲಿಸಿದ್ದಾರೆಂದು ಹೇಳಿದರು. ಮಾನವಿ ಕ್ಷೇತ್ರದಿಂದ ಸರಸ್ವತಿ ನಾಯಕ, ರಾಜಾ ವೆಂಕಟಪ್ಪ ನಾಯಕ, ದೇವದುರ್ಗದಿಂದ ಹನುಮಂತ್ರಾಯ ಕೊತ್ತದೊಡ್ಡಿ, ವಿ.ಎಸ್. ಮೇಟಿ, ಸಿಂಧನೂರಿನಿಂದ ಹಾಲಿ ಶಾಸಕ ವೆಂಕಟರವಾ ನಾಡಗೌಡ, ಮಸ್ಕಿ ಕ್ಷೇತ್ರದಿಂದ ಅಮರೇಶ ನಾಯಕ ಬಲ್ಲಟಗಿ, ಲಿಂಗಸ್ಗೂರು ಕ್ಷೇತ್ರದಿಂದ ರಾಮಪ್ಪ ಎಂಬುವವರು ಇದುವರೆಗೆ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆಂದು ತಿಳಿಸಿದರು.
ಬಹುತೇಕ ಕ್ಷೇತ್ರ ಎಸ್ಟಿಗೆ ಮೀಸಲು: ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಗುರುತಿಸುವುದು ಎಲ್ಲ ರಾಜಕೀಯ ಪಕ್ಷಗಳಿಗೆ ಸವಾಲೇ ಸರಿ ಎಂದ ಅವರು, ಬಹುತೇಕ ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಯ ಚುನಾವಣೆಗೂ ಜೆಡಿಎಸ್ ಈಗಾಗಲೇ ಅಗತ್ಯ ಸಿದ್ಧತೆಗೆ ತೊಡಗಿದೆ. ಪೌರ ಸಂಸ್ಥೆಗಳಿಗೆ ಚುನಾವಣೆ ಮುಂದೂಡಿಕೆಯಾಗಬಹುದೆಂಬ ಲೆಕ್ಕಾಚಾರ ಸುಳ್ಳಾಗುವ ಎಲ್ಲ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ವಾರ್ಡು ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗಿದೆ.
 ಸ್ಥಳೀಯ ಕಾರ್ಯಕರ್ತರೊಂದಿಗೆ ಅನೇಕ ಬಾರಿ ಸಮಾಲೋಚನಾ ಸಭೆಗಳನ್ನು ನಡೆಸಿದ್ದು, ಜಿಲ್ಲಾದ್ಯಂತ ಎಲ್ಲ ವಾರ್ಡುಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಿದರು.
 ಈ ವೇಳೆ ಪಕ್ಷದ ಪ್ರಮುಖರಾದ ಯುಸೂಫ್ ಖಾನ್, ಖಲೀಲ್ ಪಾಷಾ, ಶಿವಶಂಕರ್ ವಕೀಲರು, ತಿಮ್ಮಾರೆಡ್ಡಿ, ಅಮ್ಜದ್ ಹುಸೇನ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.