ರಾಯಚೂರು

ರಾಷ್ಟ್ರೀಯ ಪಕ್ಷಗಳಿಂದ ಶೋಷಿತರ ಕಡೆಗಣನೆ

Published On :

ರಾಯಚೂರು: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎಸ್ಸಿ, ಎಸ್ಟಿ ವರ್ಗದವರನ್ನು ಕೇವಲ ಮತಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿವೆ. ಶೋಷಿತ ವರ್ಗದವರನ್ನು ರಾಷ್ಟ್ರೀಯ ಪಕ್ಷಗಳು ಕಡೆಗಣಿಸಿರುವುದರಿಂದ ರಾಜ್ಯದಲ್ಲಿ ಶೋಷಿತ ವರ್ಗದ ಹಿತ ಕಾಯುವ ಪ್ರಾದೇಶಿಕ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದಾಗಿ ಬಿಎಸ್ಸಾರ್ ಕಾಂಗ್ರೆಸ್‌ನ ಶ್ರೀರಾಮುಲು ಹೇಳಿದರು.
ನಗರದ ಹೊರವಲಯದ ಏಳು ಮೈಲ್ ಕ್ರಾಸ್‌ನಲ್ಲಿ ಬುಧವಾರ ಎಸ್ಸಿ, ಎಸ್ಟಿ ವರ್ಗದವರ ರಾಜ್ಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಕೇವಲ ಶ್ರೀಮಂತರ ಹಾಗೂ ಮೇಲ್ವರ್ಗದವರ ಪರವಾದ ನಿಲುವು ತಳೆದಿರುವುದರಿಂದ ಶೋಷಿತ ವರ್ಗಕ್ಕೆ ಅನ್ಯಾಯವಾಗಿದೆ ಎಂದು ದೂರಿದರು.
ರಾಜಕೀಯವಾಗಿ ಬೆಳೆಯಲು ಬಿಡುತ್ತಿಲ್ಲ: ರಾಷ್ಟ್ರೀಯ ಪಕ್ಷಗಳು ಅನೇಕ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಶೋಷಿತ ವರ್ಗದವರನ್ನು ರಾಜ್ಯದ ಸಿಎಂ ಆಗುವ ಅವಕಾಶ ಕಲ್ಪಿಸಿಲ್ಲ. ಇದು ರಾಷ್ಟ್ರೀಯ ಪಕ್ಷಗಳ ಮುಖವಾಡ ಬಯಲು ಮಾಡಿದೆ ಎಂದು ಟೀಕಿಸಿದ ಅವರು, ಕಳೆದ ಅನೇಕ ವರ್ಷಗಳಿಂದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್ ಅವರಂಥ ಶೋಷಿತ ಸಮುದಾಯದವರಿದ್ದರೂ ಅವರಿಗೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.
ಇಂದಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರನ್ನು ರಾಜಕೀಯವಾಗಿ ಬೆಳೆಯಲು ರಾಷ್ಟ್ರೀಯ ಪಕ್ಷಗಳು ಅವಕಾಶ ನೀಡುತ್ತಿಲ್ಲ. ಜನಾರ್ದನ ರೆಡ್ಡಿ ಮತ್ತು ತಮ್ಮನ್ನು ಅಧಿಕಾರಕ್ಕೇರಲು ಬಳಸಿಕೊಂಡ ಬಿಜೆಪಿ ತಮ್ಮನ್ನೇ ಕಡೆಗಣಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಇನ್ನು ಶೋಷಣೆ ಸಹಿಸೆವು: ಶೋಷಿತ ವರ್ಗದವರ ರಾಜಕೀಯ ಶಕ್ತಿಯನ್ನು ಕಡೆಗಣಿಸದಿರುವಂತೆ ಎಚ್ಚರಿಸಿದ ಅವರು, ಶೋಷಿತ ವರ್ಗದ ಎಲ್ಲರೂ ತಮ್ಮ ಶಕ್ತಿ ಪ್ರದರ್ಶನದ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಬೇಕಿದೆ. ದಲಿತರ ಮೇಲೆ ದೌರ್ಜನ್ಯವನ್ನು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
ಕಳೆದ 65 ದಶಕಗಳಲ್ಲಿ ಅಂಬೇಡ್ಕರ್ ಅವರ ಸಮಾನತೆಯ ಕನಸಿಗೆ ಅಪಮಾನ ಮಾಡಲಾಗಿದೆ. ಸಂವಿಧಾನದ ನೀತಿಗಳಿಗೆ ವಿರುದ್ಧವಾಗಿ ಸಮಾಜದಲ್ಲಿ ಶೋಷಣೆ ಮುಂದುವರಿದಿದೆ. ದಲಿತರು ಮುಟ್ಟಿದ್ದು ಮೈಲಿಗೆ ಎಂಬ ಸಂಪ್ರದಾಯ ಈಗಲೂ ಜೀವಂತವಾಗಿದೆ. ಐತಿಹಾಸಿಕ ಘಟನೆಗಳಲ್ಲಿ ದೇಶಕ್ಕಾಗಿ ದಲಿತರು ಹೋರಾಡಿ ಪ್ರಾಣ ತ್ಯಾಗ ಮಾಡಿದ್ದನ್ನು ಮರೆಮಾಚಲಾಗಿದೆ ಎಂದು ಆರೋಪಿಸಿದರು.
ಹಾಸ್ಟೆಲ್‌ಗಳಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ: ರಾಜ್ಯದಲ್ಲಿ ಅಧಿಕಾರ ನಡೆಸಿದವರಿಂದ ದಲಿತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯವಾಗಿಲ್ಲ. ಹಿಂದುಳಿದ ವರ್ಗಗಳ ಹಾಗೂ ಎಸ್ಸಿ- ಎಸ್ಟಿಗಳ ವಸತಿ ನಿಲಯಗಳಲ್ಲಿ ಶೋಷಿತ ವರ್ಗದವರ ಮಕ್ಕಳಿರುವುದರಿಂದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ವಸತಿ ನಿಲಯಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ನಿರ್ಲಕ್ಷಿಸಿವೆ ಎಂದು ಟೀಕಿಸಿದರು.
ದಲಿತ ವರ್ಗದ ಯುವಕರು ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಶಿಕ್ಷಣದಲ್ಲೂ ತೀರಾ ಹಿಂದುಳಿಯುವಂಥ ಸ್ಥಿತಿಯಿದೆ. ದಲಿತರು ಕೊಳಚೆ ಪ್ರದೇಶಗಳಿಗೇ ಸೀಮಿತ ಎಂಬಂತೆ ಬಿಂಬಿಸಲಾಗುತ್ತಿದೆ. ಸೌಲಭ್ಯಗಳಿಂದ ದೂರವಿಡಲಾಗುತ್ತಿದೆ. ಆ ಮೂಲಕ ಶೋಷಣೆ ನಿರಂತರವಾಗಿ ಮುಂದುವರಿದಿದೆ ಎಂದು ದೂರಿದರು.
ರಾಜ್ಯದಲ್ಲಿ 25 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಎಸ್ಸಿ, ಎಸ್ಟಿಗಳಿಗೆ ರೂಪಿಸಿದ ಯೋಜನೆಗಳ ಸಮರ್ಪಕ ಜಾರಿಯಲ್ಲಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ದಲಿತರಿಗೆ ಜಮೀನು ವಿತರಣೆಯಲ್ಲೂ ಅನ್ಯಾಯ ಆಗಿದೆ ಎಂದು ಆರೋಪಿಸಿದರು.
2 ಎಕರೆ ಕೃಷಿ ಜಮೀನು ಹಂಚಿಕೆ ಭರವಸೆ: ರಾಜ್ಯದಲ್ಲಿನ ಎಲ್ಲ ದಲಿತರು ತಮ್ಮ ಭವಿಷ್ಯ ನಿರ್ಧರಿಸುವ ಕಾಲವಿದು. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಒಂದಾಗಿ ಬಿಎಸ್ಸಾರ್ ಕಾಂಗ್ರೆಸ್‌ಗೆ ಬೆಂಬಲಿಸಿ ಅಧಿಕಾರಕ್ಕೆ ತಂದಲ್ಲಿ ರಾಜ್ಯದಲ್ಲಿ ದಲಿತರ ಪರ ಸರ್ಕಾರ ಕಾರ್ಯ ನಿರ್ವಹಿಸಲಿದೆ. ಎಲ್ಲ ದಲಿತರಿಗೆ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 2 ಎಕರೆ ಕೃಷಿ ಜಮೀನನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಪಕ್ಷ ಅಧಿಕಾರಕ್ಕೆ ಬಂದರೆ ದೇಶಕ್ಕಾಗಿ ಹೋರಾಡಿದ ದಲಿತರಿದ್ದ ಸೈನ್ಯ ಮಹಾರೆಜಿಮೆಂಟ್ ದಿನವನ್ನು ಜ.1ರಂದು ಆಚರಿಸಲಾಗುತ್ತದೆ. ಪಡಿತರ ವ್ಯವಸ್ಥೆ ಅಡಿ ಎಲ್ಲ ಬಡವರು, ಶೋಷಿತರಿಗೆ ಎಲ್ಲ ರೀತಿಯ ಆಹಾರಧಾನ್ಯ ವಿತರಿಸಲಾಗುತ್ತದೆ. ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನತೆಗೆ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಅಧಿಕಾರಕ್ಕೆ ಬಂದ್ರೆ ಮಾಸಾಶನ ಹೆಚ್ಚಿಸುವೆ: ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವು, ಅಂಗವಿಕಲರು, ವೃದ್ಧರಿಗೆ ಹೆಚ್ಚಿನ ಮಾಸಾಶನ, 108 ಆ್ಯಂಬುಲನ್ಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ, ಮಕ್ಕಳಿಗೆ ಶಿಕ್ಷಣ ಕೊಡಿಸುವ ತಾಯಂದಿರಿಗೆ ಪ್ರತಿ ತಿಂಗಳು 500ರಿಂದ ಸಾವಿರವರೆಗೆ ಪ್ರೋತ್ಸಾಹ ಧನ, ಗುಣಮಟ್ಟದ ಉಚಿತ ಶಿಕ್ಷಣ, ಗುಣಮಟ್ಟದ ಉಚಿತ ಆರೋಗ್ಯ ಸೇವೆಗಳನ್ನು ಎಲ್ಲ ಬಡವರಿಗೆ ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಅಕ್ರಮ ಗಣಿಗಾರಿಕೆ ಹೆಸರಿನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಆಂಧ್ರದಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ವೈ.ಎಸ್. ರಾಜಶೇಖರ್ ರೆಡ್ಡಿ ಪುತ್ರ ಜಗನಮೋಹನ್ ರೆಡ್ಡಿ ಅವರನ್ನು ಜೈಲಿಗೆ ಕಳಿಸಿರುವುದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕೈವಾಡವಿದೆ. ಆ ಪಕ್ಷಗಳಿಗೆ ಪಾಠ ಕಲಿಸಲು ಮತದಾರರು ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.