ರಾಯಚೂರು

ಅತ್ಯುತ್ತಮ ಸಾಧನೆಗೆ 2025 ಗುರಿ: ಅಸಿಫೋದ್ದೀನ್

Published On :

ಬೀದರ್: ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರುವಂತಾಗಿಸಲು 2025 ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ವಿಜ್ಡಮ್ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಮಹ್ಮದ್ ಅಸಿಫೋದ್ದೀನ್ ತಿಳಿಸಿದರು.
  ನಗರದ ರಂಗಮಂದಿರದಲ್ಲಿ ವಿಜ್ಡಮ್ ಶಿಕ್ಷಣ ಸಂಸ್ಥೆಯ ದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬರುವ ವರ್ಷದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕ್ಯಾಂಪಸ್ ನಿರ್ಮಿಸಿ ಕೊಡಲಾಗುವ ಹಿನ್ನೆಲೆಯಲ್ಲಿ ಅಗತ್ಯ ಜಮೀನು ಖರೀದಿ ಮಾಡಲಾಗಿದೆ ಎಂದರು.
  ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ, ಟ್ಯಾಬ್ಲೆಟ್ ಕಂಪ್ಯೂಟರ್ ಅಳವಡಿಸುವುದರ ಮೂಲಕ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಾಹಿತಿ ತಂತ್ರಜ್ಞಾನವನ್ನು ಮತ್ತಷ್ಟು ಸಮೀಪ ತರುವ ಗುರಿ ಹೊಂದಲಾಗಿದೆ. ಈಗಾಗಲೇ ಶಾಲಾ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಶೇ. 95ರಿಂದ 98ರಷ್ಟು ಅಂಕ ಪಡೆದು ಉತ್ತೀರ್ಣರಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
  ಸಾಫ್ಟ್‌ವೇರ್‌ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಬರುವ ದಿನಗಳಲ್ಲಿ ಇಡೀ ವಿಶ್ವದ ಮುಂದಾಳತ್ವ ವಹಿಸಲಿದೆ. ಭಾರತ ಐಟಿ, ಟೆಕ್ನೋ, ಮೆಡಿಕೋಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಅಮೆರಿಕದಂತಹ ಮುಂದುವರೆದ ದೇಶಗಳು ಬೆಂಗಳೂರಿನತ್ತ ಮುಖ ಮಾಡುತ್ತಿವೆ. ಈ ನಿಟ್ಟಿನಲ್ಲಿ ಅಮೆರಿಕದ ರಾಷ್ಟ್ರಪತಿ ಒಬಾಮಾ ಭಾರತವನ್ನು ಮುಕ್ತ ಕಂಠದಿಂದ ಪ್ರಶಂಸಿರುವುದು ಎಲ್ಲರಿಗೂ ತಿಳಿದ ವಿಷಯ ಎಂದರು.
  ಮುಖ್ಯ ಅತಿಥಿಯಾಗಿದ್ದ ಶಾಸಕ ರಹೀಮ್‌ಖಾನ್ ಮಾತನಾಡಿ, ಅಲ್ಪಸಂಖ್ಯಾತರು ಅದರಲ್ಲಿಯೂ ಮುಸ್ಲಿಂ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದು ಅವಶ್ಯಕ. ಮುಸ್ಲಿಂ ಜನಾಂಗದವರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿ ಇರುವುದರಿಂದ ಅವರು ಉದ್ಯಮ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವುದು ಕಷ್ಟಕರ. ಅದಕ್ಕಾಗಿ ಎಷ್ಟೇ ಕಷ್ಟ ಬಂದರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಕರೆ ನೀಡಿದರು.
  ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಖಾಜಮ್ ಅಲೀ ಮಾತನಾಡಿ, ದೇಶ ಬಹು ಮುಂದುವರೆದಿದ್ದು ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಬೇಕೆಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ಮಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿಗೆ ಒತ್ತು ನೀಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಇದೇ ರೀತಿ ಎಲ್ಲಾ ಸಂಸ್ಥೆಗಳು ಕಾರ್ಯನಿರ್ವಹಿಸಿದರೆ ಶಿಕ್ಷಣದಲ್ಲಿ ಬೀದರ್ ಇಡೀ ರಾಜ್ಯಕ್ಕೆ ಮಾದರಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು.
  ಸೈಯದ್ ತನ್ವೀರ್ ಅಹ್ಮದ್, ಮಹ್ಮದ್ ಫೈಮೋದ್ದಿನ್, ಅಲ್‌ಅಮಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇಕ್ರಾಮೊದ್ದೀನ್, ಗುತ್ತಿಗೆದಾರರಾದ ಮಹ್ಮದ್ ಬಶೀರೋದ್ದೀನ್, ಮಿರ್‌ಅಜರ್ ಹುಸೇನ್ ಮತ್ತು ಸಹೋದರಿಯರು, ಬೀದರ್‌ನ ಎಎಂ ಇಕ್ಬಾಲ್, ಜಾಫರ್ ಅಹ್ಮದ್, ಸೈಯದ್ ಮಹೆಬೂಬ್ ಅಲಿ, ಟ್ರಸ್ಟಿ ಮಹ್ಮದ್ ಅನ್ವರುದ್ದೀನ್, ಸಂಸ್ಥಾಪಕ ಮಹ್ಮದ್ ಮುಕ್ರಮ್ ಸಿಂಧೆ, ರೇಣುಕಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ನಿಜಾಮೋದ್ದೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.