ನೇಮಕಾತಿ ಅಕ್ರಮ: ನ್ಯಾಯಾಂಗ ನಿಂದನೆ ದೂರು ದಾಖಲು
ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿಯು ಅಕ್ರಮ ನೇಮಕಾತಿ ಕುರಿತು ಗುಲ್ಬರ್ಗ ಸಂಚಾರಿ ಪೀಠ ನೀಡಿದ ಮಧ್ಯಂತರ ಆದೇಶ ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಕಂಪನಿಯ ಎಂಡಿ ಎ.ಕೆ. ಮೊನ್ನಪ್ಪ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ ವಾಲ್ಮೀಕಿ ಮತ್ತಿತರೆ ಅಧಿಕಾರಿಗಳ ವಿರುದ್ಧ ಗುಲ್ಬರ್ಗದ ಹೈಕೋರ್ಟ್ ಸಂಚಾರಿ ಪೀಠದಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಹಂಗಾಮಿ ಕಾರ್ಮಿಕರ ಸಂಘದ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ಅವರು, ಫೆ.12ರಂದು ಸಂಬಂಧಿಸಿದವರ ವಿರುದ್ಧ ನ್ಯಾಯಾಂಗದ ನಿಂದನೆಯ ದೂರು ಸಲ್ಲಿಸಿದ್ದು, ಹಟ್ಟಿ ಚಿನ್ನದ ಗಣಿ ಹಂಗಾಮಿ ಕಾರ್ಮಿಕರ ಹೋರಾಟವನ್ನು ಜಿಲ್ಲೆಯ ಎಲ್ಲ ಕಾರ್ಮಿಕ ಸಂಘಟನೆಗಳು, ಜನತಂತ್ರವಾದಿಗಳು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.
498 ಜನ ಕಾರ್ಮಿಕರ ಕಡೆಗಣನೆ: ಹಟ್ಟಿ ಚಿನ್ನದ ಗಣಿಯಲ್ಲಿ ಕಳೆದ 10 ವರ್ಷಗಳಿಂದ ಹಂಗಾಮಿಗಳಾಗಿ ದುಡಿಯುತ್ತಿರುವ 498 ಜನ ಕಾರ್ಮಿಕರನ್ನು ಕಡೆಗಣಿಸಿದ ಆಡಳಿತ ಮಂಡಳಿಯು 150 ಜನರನ್ನು ಹೊಸದಾಗಿ ಕಾಯಂ ಹುದ್ದೆಗೆ ನೇಮಿಸಿದ್ದು, ಕಾನೂನು ಹಾಗೂ ಹುದ್ದೆ ಭರ್ತಿಯ ನೋಟಿಫಿಕೇಷನ್ಗೆ ವಿರುದ್ಧವಾಗಿ ಈ ಭರ್ತಿ ಪ್ರಕ್ರಿಯೆ ನಡೆದಿತ್ತು. ಇದನ್ನು ವಿರೋಧಿಸಿ 498 ಜನ ಹಂಗಾಮಿ ಕಾರ್ಮಿಕರ ಪರವಾಗಿ, ಸಂಘದ ಪದಾಧಿಕಾರಿಗಳು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಕ್ಕೆ ದೂರಲಾಗಿತ್ತು ಎಂದು ತಿಳಿಸಿದ್ದಾರೆ.
ವಿಚಾರಣೆ ನಡೆಸಿದ ನ್ಯಾಯಾಲಯವು ಫೆ. 1ರಂದು ಮಧ್ಯಂತರ ತೀರ್ಪು ನೀಡಿ, 150 ಜನರ ನೇಮಕಾತಿಯ ನೋಟಿಫಿಕೇಷನ್ಗೆ ತಡೆಯಾಜ್ಞೆ ನೀಡಿತು. ಈ ನೋಟಿಫೀಕೆಷನ್ ಅಡಿ ನೇಮಕಗೊಂಡವರ ಸೇವೆ ಮುಂದುವರಿಸದಂತೆ ಹಟ್ಟಿ ಕಂಪನಿಯ ಆಡಳಿತ ವರ್ಗಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು.
ನ್ಯಾಯಾಂಗ ನಿಂದನೆ ದೂರು: ನ್ಯಾಯಾಲಯದ ಈ ಆದೇಶ ಪ್ರತಿಯು ಫೆ. 6ರಂದು ಆಡಳಿತ ಮಂಡಳಿ ಕೈಸೇರಿದೆ. ಆದೇಶದ ಪ್ರತಿ ಸೇರಿ 13 ದಿನಗಳಾದರೂ ಆಡಳಿತವು ಕ್ರಮ ಕೈಗೊಳ್ಳದ್ದರಿಂದ ಗುಲ್ಬರ್ಗ ಸಂಚಾರಿ ಪೀಠದ ಆದೇಶ ಉಲ್ಲಂಘಿಸಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಫೆ.20 ಮತ್ತು 21ರಂದು ನಡೆಯಲಿರುವ ಸಾರ್ವತ್ರಿಕ ಮುಷ್ಕರಕ್ಕೆ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಬೆಂಬಲಿಸಿ ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

