ರಾಯಚೂರು

ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ

Published On :

ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಬಿಎಚ್ಇಎಲ್ನ ತಜ್ಞರ ತಂಡವು 8ನೇ ಘಟಕದ ಇಎಸ್ಪಿ ಘಟಕದ ಕುಸಿತ ಕಂಡ ಭಾಗವನ್ನು ಪರಿಶೀಲಿಸಿತು.
ತಮಿಳುನಾಡಿನ ರಾಣಿಪೇಟೆಯಿಂದ ಆಗಮಿಸಿರುವ ಬಿಎಚ್ಇಎಲ್ನ ತಂಡದ ಸದಸ್ಯರು, ಬೆಳಗ್ಗೆ ಆರ್ಟಿಪಿಎಸ್ನ 8ನೇ ಘಟಕದಲ್ಲಾಗಿರುವ ಅವಘಡದ ಬಗ್ಗೆ ವಸ್ತುಸ್ಥಿತಿ ಅವಲೋಕಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕೆಪಿಸಿ ತಾಂತ್ರಿಕ ನಿರ್ದೇಶಕ ನಾರಾಯಣಪ್ರಸಾದ್ ಮತ್ತು ಆರ್ಟಿಪಿಎಸ್ ಇಡಿ ಭಾಸ್ಕರ್ ಅವರು ಘಟನೆಯ ಕುರಿತು ಮಾಹಿತಿ ನೀಡಿದರು. ಯಂತ್ರದ ಕುಸಿತಕ್ಕೆ ಕಾರಣ ಸೇರಿದಂತೆ ವಿವಿಧ ಅಂಶಗಳನ್ನು ತಜ್ಞರು ಪರಿಶೀಲಿಸಿದ್ದು, ನಂತರ ಶಕ್ತಿನಗರದ ಅತಿಥಿ ಗೃಹದಲ್ಲಿ ಕೆಪಿಸಿ ಅಧಿಕಾರಿಗಳ ಜತೆ ಸಭೆ ನಡೆಸಿದ ತಂಡವು, ಎಲ್ಲ ಮಾಹಿತಿ ಕಲೆ ಹಾಕಿತು. ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿ ತಾಂತ್ರಿಕ ನಿರ್ದೇಶಕ ನಾರಾಯಣ ಪ್ರಸಾದ್, 8ನೇ ಘಟಕದಲ್ಲಿ ಇತ್ತೀಚೆಗೆ ನಡೆದ ಅವಘಡಕ್ಕೆ ಸಂಬಂಧಿಸಿ ಸದ್ಯಕ್ಕೆ ಘಟಕವನ್ನು ವಿದ್ಯುತ್ ಉತ್ಪಾದನೆಗೆ ತೊಡಗಿಸುವ ಬಗ್ಗೆ ಮಾತ್ರ ಚಿಂತನೆ ನಡೆದಿದೆ ಎಂದರು.
ವಿದ್ಯುತ್ ಉತ್ಪಾದನೆಗೆ ಮೊದಲಾದ್ಯತೆ: ಘಟನೆಗೆ ಕಾರಣ, ಲೋಪಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಆನಂತರವೇ ಕೆಪಿಸಿ ನಿರ್ಧರಿಸಲಿದೆ. ರಾಜ್ಯವು ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ಮೊದಲಾದ್ಯತೆ ವಿದ್ಯುತ್ ಉತ್ಪಾದನೆಯಾಗಿದೆ. ಹೀಗಾಗಿ 8ನೇ ಘಟಕವನ್ನು ಪುನಾ ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಈಗಾಗಲೇ 8ನೇ ಘಟಕದ ಕುಸಿತ ಕಂಡಿರುವ ಯಂತ್ರದ ಭಾಗದ ಅವಶೇಷಗಳ ತೆರವು ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುತ್ತದೆ. ಜಾಗರೂಕತೆಯಿಂದ ಈ ಕಾರ್ಯ ಮಾಡಬೇಕಿದ್ದು, ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಮಸ್ಯೆಗೆ ಪರಿಹಾರ: ಸದ್ಯ ಕುಸಿತ ಕಂಡಿರುವ ಭಾಗದ ಸಂಪೂರ್ಣ ನಿರ್ಮಾಣಕ್ಕೆ ಕನಿಷ್ಠ 4 ತಿಂಗಳು ಬೇಕಾಗುತ್ತದೆ. ಆದರೆ ಅಲ್ಲಿಯವರೆಗೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸುವುದು ಅಸಾಧ್ಯ ಎಂದ ಅವರು, ಬಿಎಚ್ಇಎಲ್ ತಜ್ಞರೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದರು.
ಸೂಕ್ತ ತನಿಖೆ: 8ನೇ ಘಟಕದಲ್ಲಿ ಸಂಭವಿಸಿದ ಬೂದಿ ಸಾಗಣೆ ಮಾರ್ಗ ಕುಸಿತದ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ತನಿಖೆ ನಡೆಸಲಾಗುತ್ತದೆ. ಕಠಿಣ ಕ್ರಮವನ್ನೂ ಕೈಗೊಳ್ಳಲಾಗುತ್ತದೆ. ಆ ಬಗ್ಗೆ ಈಗಾಗಲೇ ತನಿಖೆಗೆ ಚಾಲನೆ ನೀಡಿದ್ದು, ಮೊದಲಿಗೆ ವಿದ್ಯುತ್ ಉತ್ಪಾದನೆ 8ನೇ ಘಟಕದಲ್ಲಿ ಪುನಾರಂಭಿಸುವುದು ಕೆಪಿಸಿಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಯರಮರಸ್ ಥರ್ಮಲ್ ಘಟಕವು ಸದ್ಯದ ನಿರೀಕ್ಷೆಯಂತೆ 2014ರ ಅಂತ್ಯಕ್ಕೆ ಕಾರ್ಯಾರಂಭ ಮಾಡಬೇಕಿದೆ. ಈಗಾಗಲೇ ಅಗತ್ಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.