23ರಂದು ಅಕ್ಷಿತಾ ಜೈನ್ ದೀಕ್ಷೆ ಸ್ವೀಕಾರ
ರಾಯಚೂರು: ನಗರದ ಎಲ್ವಿಡಿ ಕಾಲೇಜು ಮೈದಾನದಲ್ಲಿ ಫೆ.23ರಂದು ಜೈನ್ ಭಗವತೀ ದೀಕ್ಷಾ ಮಹೋತ್ಸವ ಸಮಾರಂಭ ಆಯೋಜಿಸಿದ್ದು, ಸಮಾರಂಭದಲ್ಲಿ ಮುಮುಕ್ಷು ಸೋದರಿ ಅಕ್ಷಿತಾ ಜೈನ್ ಅವರು ಜೈನಮುನಿ ದೀಕ್ಷೆ ಸ್ವೀಕರಿಸಲಿದ್ದಾರೆಂದು ಶ್ರೀ ವರ್ಧಮಾನ್ ಸ್ಥಾನಕವಾಸಿ ಜೈನ್ ಶ್ರಾವಕ್ ಸಂಘದ ಮುಖಂಡ ಪಾರಸಮಲ್ ಸುಖಾಣಿ ಹೇಳಿದರು.
ನಗರದಲ್ಲಿ ಜೈನ್ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.23ರಂದು ಮ.12.30ಕ್ಕೆ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಜೈನಮುನಿ ದೀಕ್ಷೆಯನ್ನು ಅಕ್ಷಿತಾ ಜೈನ್ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ನಿಭಾವಣೆಗೆ ಸಂಯಮ ಅವಶ್ಯ: ರಾಯಚೂರು ನಗರದಲ್ಲಿ ಇದುವರೆಗೆ 1977, 1978, 1979, 1981, 2007ರಲ್ಲಿ ಜೈನಮುನಿ ದೀಕ್ಷೆಯನ್ನು ಅನೇಕರು ಸ್ವೀಕರಿಸಿದ ಸಮಾರಂಭಗಳು ನಡೆದಿವೆ. ಜೈನಮುನಿ ದೀಕ್ಷೆ ಸ್ವೀಕಾರ ಮತ್ತು ಪರಿಪಾಲನೆ ಬಹಳ ಕಷ್ಟಕರವಾದುದು. ದೀಕ್ಷೆ ಸ್ವೀಕರಿಸಿದ ನಂತರದಲ್ಲಿ ಅದರ ನಿಭಾವಣೆಗೆ ಸಂಯಮ ತೀರಾ ಅಗತ್ಯ ಎಂದು ತಿಳಿಸಿದರು.
ಫೆ.23ರಂದು ಜೈನಮುನಿ ದೀಕ್ಷೆ ಸ್ವೀಕರಿಸಲಿರುವ ಅಕ್ಷಿತಾ ಜೈನ್ ಅವರು ರಾಜಸ್ಥಾನದ ಅಜ್ಮೀರ್ ಬಳಿ ಕೇಕಡಿ ಗ್ರಾಮದವರಾಗಿದ್ದು, ಅವರ ಕುಟುಂಬದ ಎಲ್ಲರೂ ಈಗಾಗಲೇ ಜೈನಮುನಿಗಳಾಗಿ ದೇಶಾದ್ಯಂತ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಎ ಪದವೀಧರೆಯಾಗಿರುವ ಅಕ್ಷಿತಾ ಜೈನ್ ಅವರು, ಈಗಾಗಲೇ ಧಾರ್ಮಿಕ ಅಧ್ಯಯನವನ್ನೂ ಪೂರೈಸಿದ್ದಾರೆಂದು ಹೇಳಿದರು.
ಜೈನಮುನಿ ದೀಕ್ಷೆ: ನಗರದಲ್ಲಿ ನಡೆಯಲಿರುವ ಜೈನಮುನಿ ದೀಕ್ಷಾ ಸಮಾರಂಭದಲ್ಲಿ ದೇಶದ ವಿವಿಧೆಡೆಯ 2 ಸಾವಿರ ಜನ ಮತ್ತು ಸ್ಥಳೀಯ ಸಮಾಜದ 6 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನರೇಶ್ ಮುನಿಜೀ ಮಹಾರಾಜ್ ಅವರು ಜೈನ ಮುನಿ ದೀಕ್ಷೆಯನ್ನು ನೀಡಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಮುಕ್ಷು ಸೋದರಿ ಅಕ್ಷಿತಾ ಜೈನ್ ಅವರು, ತಮ್ಮ ಕುಟುಂಬದ ಎಲ್ಲರೂ ಜೈನಮುನಿಗಳಾಗಿ ದೀಕ್ಷೆ ಸ್ವೀಕರಿಸಿದ್ದು, ಅದೇ ಪ್ರೇರಣೆಯಿಂದ ದೀಕ್ಷೆ ಸ್ವೀಕರಿಸಲು ಯೋಚಿಸಿದ್ದಾಗಿ ತಿಳಿಸಿ, ಸಾಂಸಾರಿಕ ಜೀವನದಿಂದ ಮುಕ್ತಿ ಹೊಂದಿ ಮುನಿದೀಕ್ಷೆ ಪಡೆದು ಸನ್ಯಾಸತ್ವದ ಪರಿಪಾಲನೆಯಿಂದ ಬದುಕಿನಲ್ಲಿ ಮೋಕ್ಷ ಕಾಣುವುದು ಸಾಧ್ಯ ಎಂದರು. ಜೈನಮುನಿಗಳಾದ ನರೇಶ್ ಮುನಿಜೀ ಮಹಾರಾಜ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ದೇಹಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಜೈನಧರ್ಮದಲ್ಲಿ ಆತ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹೀಗಾಗಿ ಬದುಕಿನಲ್ಲಿ ಮೋಕ್ಷ ಕಾಣಲು ಸಂಯಮ, ಉನ್ನತ ವಿಚಾರಗಳನ್ನು ಹೊಂದುವುದು ಅವಶ್ಯ ಎಂದು ಹೇಳಿದರು.
ಚಿಕ್ಕವಯಸ್ಸಲ್ಲೇ ಸನ್ಯಾಸತ್ವ ಸ್ವೀಕಾರ ತಪ್ಪಲ್ಲ: ಅಹಿಂಸೆಯಿಂದಲೇ ಜೀವನದಲ್ಲಿ ಮೋಕ್ಷ ಪಡೆಯಲು ಸಾಧ್ಯ ಎಂಬುದು ಜೈನಧರ್ಮದ ಸಂದೇಶವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸುವುದು ತಪ್ಪಲ್ಲ. ಆ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ವಿಚಾರಗಳನ್ನು ಅಳವಡಿಸಿಕೊಂಡಲ್ಲಿ ಧರ್ಮದ ಏಳಿಗೆಗೆ ಶ್ರಮಿಸಲು ಸಾಧ್ಯ. ಸ್ವಆಸಕ್ತಿಯಿಂದಲೇ ಅಕ್ಷಿತಾ ಜೈನ್ ಸನ್ಯಾಸತ್ವ ಸ್ವೀಕರಿಸಲು ಮುಂದೆ ಬಂದಿದ್ದಾರೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

