ರಾಯಚೂರು

ಬಾಲಾಜಿ ಕ್ಯಾಂಪ್ ತಾಂಡಾ: ಮೂಲ ಸೌಲಭ್ಯಕ್ಕೆ ಒತ್ತಾಯ

Published On :

ರಾಯಚೂರು: ಮಾನವಿ ತಾಲೂಕಿನ ಕಲ್ಲೂರು ಗ್ರಾಪಂ ವ್ಯಾಪ್ತಿಯ ಬಾಲಾಜಿ ಕ್ಯಾಂಪಿನ ಲಂಬಾಣಿ ಜನಾಂಗದವರಿರುವ ಪ್ರದೇಶಕ್ಕೆ ಮೂಲಸೌಲಭ್ಯ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ(ಸಮತಾವಾದ)ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಜಿಲ್ಲಾ ಘಟಕದ ಸಮಿತಿಯ ಮುಖಂಡರು, ಜಿಲ್ಲಾ ಕೇಂದ್ರದಿಂದ ಕೇವಲ 15-20 ಕಿಮೀ ದೂರದಲ್ಲಿರುವ ಬಾಲಾಜಿ ಕ್ಯಾಂಪಿನ ಲಂಬಾಣಿ ತಾಂಡಾದ ನಿವಾಸಿಗಳಿಗೆ ಆಡಳಿತ ಮೂಲಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ತಾಂಡಾದಲ್ಲಿ ಸಮರ್ಪಕ ರಸ್ತೆ, ಕುಡಿವ ನೀರು, ಶೌಚಾಲಯ ಸೌಲಭ್ಯಗಳಿಲ್ಲ. ಇದರಿಂದ ನಿವಾಸಿಗಳು ಪರದಾಡು ವಂತಾಗಿದೆ. ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಇಲ್ಲಿನ ನಿವಾಸಿಗಳಿಗೆ ಸರ್ಕಾರ ಸೌಲಭ್ಯ ಒದಗಿಸಿಲ್ಲ ಎಂದು ದೂರಿದ್ದಾರೆ.
ಕತ್ತಲಲ್ಲಿ ತಾಂಡಾ:ತಾಂಡಾಕ್ಕೆ ವಿದ್ಯುತ್ ಸಂಪರ್ಕವಿಲ್ಲದ್ದರಿಂದ ಕತ್ತಲಿನಲ್ಲಿಯೇ ಜೀವನ ಸಾಗಿಸುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಕಲ್ಲೂರು ಗ್ರಾಪಂ.ನಿಂದ ಯಾವುದೇ ಪ್ರಯೋಜನವಾಗಿಲ್ಲ. ವಸತಿ ಯೋಜನೆ ಅಡಿ ದೊರೆತ ಮನೆಗಳನ್ನು ಗ್ರಾಮಸಭೆ ನಡೆಸದ ಕಾರಣ ರದ್ದಾಗಿವೆ ಎಂದು ಆರೋಪಿಸಿದ್ದಾರೆ.
ಕೂಡಲೇ ಲಂಬಾಣಿ ತಾಂಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ವಸತಿ ಯೋಜನೆಯಡಿ ನಿವಾಸಿಗಳಿಗೆ ಮನೆ ಹಂಚಿಕೆ ಮಾಡಬೇಕು. ಮೂಲಸೌಲಭ್ಯ ಕಲ್ಪಿಸಬೇಕು. ಮಹಿಳೆಯರಿಗೆ ಶೌಚಾಲಯವನ್ನು ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.
ಭೂರಹಿತರಿಗೆ ಜಮೀನು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಡ್ಯಾನಿಯೇಲ್ ಕೊಲಿಮಿ, ಜಿಲ್ಲಾ ಖಜಾಂಚಿ ಅಜಪ್ಪ ತಳವಾರ, ಉಪಪ್ರಧಾನ ಸಂಚಾಲಕ ವೆಂಕಟೇಶ್ ಎದ್ದಲದಿನ್ನಿ, ಮಾನವಿ ತಾಲೂಕು ಪ್ರಧಾನ ಸಂಚಾಲಕ ಯೇಸು ಜಗ್ಲಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.