ರಾಯಚೂರು

ಫೆ.3ರಂದು ಜನತಾಂತ್ರಿಕ ಮುಸ್ಲಿಂ ಸಮ್ಮೇಳನ

Published On :

ಸಿಂಧನೂರು: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ವಿರೋಧ ಪಕ್ಷದಲ್ಲಿರುವ ಎನ್‌ಡಿಎ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಜನ ಸಂಗ್ರಾಮ ಪರಿಷತ್ ಸಂಚಾಲಕ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ದೇಶ ಆಳಿದ ಎರಡು ಸರ್ಕಾರಗಳು ಜನರನ್ನು ಭಾವನಾತ್ಮಕವಾಗಿ ಹಾಗೂ ಕೋಮುವಾದ ಬೆಳೆಸುವ ಸಂಚಿನ ರಾಜಕಾರಣ ಮಾಡುತ್ತ ಬಂದಿವೆ. ಇವೆರಡು ಪರಸ್ಪರ ವಿರೋಧಿಗಳಂತೆ ವರ್ತಿಸಿದರೂ ಬೆಲೆ ಏರಿಕೆ, ಭ್ರಷ್ಟಾಚಾರ, ಅನ್ಯಾಯದ ಭೂ ಸ್ವಾಧೀನ, ಅಕ್ರಮ ಗಣಿಗಾರಿಕೆ ಮತ್ತಿತರ ವಿಷಯಗಳಲ್ಲಿ ಹೊಂದಾಣಿಕೆ ರಾಜಕೀಯವನ್ನು ಈಗಲೂ ನಡೆಸುತ್ತಿವೆ ಎಂದು ಟೀಕಿಸಿದರು.
ಮತ ಬ್ಯಾಂಕ್ ರಾಜಕೀಯ: ಯುಪಿಎ ಮುಸ್ಲಿಂ ಪರವೆಂದು, ಎನ್‌ಡಿಎ ಮುಸ್ಲಿಂ ವಿರೋಧಿ ಎಂದು ನಾಟಕವಾಡುತ್ತಾ ಮತಬ್ಯಾಂಕ್ ರಾಜಕೀಯ ಮಾಡುತ್ತಿವೆ. ಪ್ರಭುತ್ವ ಈ ದೇಶದಲ್ಲಿ ಇಂದು ಅದೃಶ್ಯವಾಗಿದೆ. ಆಳುವ ವರ್ಗ ಈ ಎರಡು ಬಲಾಢ್ಯ ಪಕ್ಷಗಳನ್ನು ಆಟವಾಡಿಸುತ್ತಿವೆ. ಮುಸ್ಲಿಂ ಯುವಕರನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆ ಕೋಮುವಾದಿ ಪಕ್ಷಗಳು ಕುತಂತ್ರ ನಡೆಸಿವೆ. ಇಂತಹ ಕೋಮುವಾದಿ, ಜಾತಿವಾದಿಗಳ ಮುಖವಾಡವನ್ನು ಕಳಚುವುದಕ್ಕಾಗಿ ಜನ ಸಂಗ್ರಾಮ ಪರಿಷತ್ ರಾಯಚೂರು ಘಟಕ ಸಾಂಪ್ರದಾಯಿಕ ಸದ್ಭಾವನೆಗಾಗಿ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಜನತಾಂತ್ರಿಕ ಮುಸ್ಲಿಂ ಸಮ್ಮೇಳನವನ್ನು ಫೆ.3ರಂದು ರಾಯಚೂರಿನಲ್ಲಿ ಹಮ್ಮಿಕೊಂಡಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ನರಸಿಂಹರಾವ ಅವರ ಅವಧಿಯಲ್ಲಿ ಹಣಕಾಸು ಇಲಾಖೆಯಲ್ಲಿ ನಿವೃತ್ತ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಶುಕ್ಲಾ, ಜನ ಸಂಗ್ರಾಮ ಪರಿಷತ್ ರಾಜ್ಯ ಸಂಚಾಲಕ ಎಸ್.ಆರ್. ಹಿರೇಮಠ ಸೇರಿದಂತೆ ದೇಶದ ವಿದ್ವಾಂಸರು, ಬುದ್ಧಿಜೀವಿಗಳು ಪಾಲ್ಗೊಳ್ಳುವರು.
ವಿವಿಧ ವಿಷಯ ಮಂಡನೆ: ಸಾಂಪ್ರದಾಯಿಕ ಸದ್ಭಾವನೆಯ ತೊಡಕುಗಳ ಕುರಿತು ನವದೆಹಲಿಯ ಫೈಝಲ್ಖಾನ್, ಇಸ್ಲಾಮೋಫೋಬಿಯಾ ಇನ್‌ಸೆಕ್ಯೂಲರ್ ಇಂಡಿಯಾ ಕುರಿತು ಲಖನೌ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಮಹ್ಮದ್ ಶೋಯೆಬ್, ಮುಸ್ಲಿಮರ ಸಾಮಾಜಿಕ ಸಮಸ್ಯೆಗಳುಹಾಗೂ ಪರಿಹಾರದ ದಾರಿ ಬಗ್ಗೆ ಬಿಜಾಪುರದ ಸಾಮಾಜಿಕ ಕಾರ್ಯಕರ್ತ ರಿಯಾಜ್ ಫಾರೂಕೀ, ಶಿಕ್ಷಣದ ಮಹತ್ವ ಕುರಿತು ಹೈದ್ರಾಬಾದ್ ಶಿಕ್ಷಣ ತಜ್ಞ ಡಾ. ಮೌಲಾನಾ ಅಖ್ಲಾಖ್ ಶರ್ಫಿ ಉಪನ್ಯಾಸ ನೀಡುವರು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್ ಜಿಲ್ಲಾ ಸಂಚಾಲಕ ರಜಾಕ್ ಉಸ್ತಾದ ಮಾತನಾಡಿ, ನ್ಯಾ. ರಂಗನಾಥ ಮಿಶ್ರಾ ಹಾಗೂ ನ್ಯಾ. ಸಾಚಾರ್ ಸಮಿತಿ ವರದಿಗಳು ಧೂಳು ಹಿಡಿದಿವೆ. ಕೇಂದ್ರ ಸರ್ಕಾರ ಈ ವರದಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ದೂರಿದರು.
ಅಲ್ಪಸಂಖ್ಯಾತರಿಗೆ ಅನ್ಯಾಯ: ಯಾರೋ ಒಬ್ಬ ಕಿಡಿಗೇಡಿ ಮುಸ್ಲಿಂ ಯುವಕ ಗಲಾಟೆ ಮಾಡಿದರೆ ಇಡೀ ಸಮುದಾಯವನ್ನೇ ಟೀಕಿಸುವ ಮೇಲ್ವರ್ಗದಿಂದಾಗಿ ಅಲ್ಪಸಂಖ್ಯಾತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಜನ ತಾಂತ್ರಿಕ ಮುಸ್ಲಿಂ ಸಮ್ಮೇಳನ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ವಸತಿ ಯೋಜನೆಯನ್ನು ಮಾಜಿ ಮಂತ್ರಿ ಅಬ್ದುಲ್ ನಜೀರ್‌ಸಾಬ ಅವರ ಹೆಸರಿನಲ್ಲಿ ಸ್ಥಾಪಿಸುವುದು ಸೇರಿದಂತೆ ಏಳು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜನ ಸಂಗ್ರಾಮ ಪರಿಷತ್ ಸದಸ್ಯ ಮಹ್ಮದ್ ಮಮ್ತಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.