ಮಕ್ಕಳಲ್ಲಿ ಮೂಲ ವಿಜ್ಞಾನದ ಆಸಕ್ತಿ ಮೂಡಿಸಿ
ರಾಯಚೂರು: ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದತ್ತ ಆಸಕ್ತಿ ಮೂಡಿಸುವ ಕಾರ್ಯವಾಗಬೇಕಿದೆ. ಆ ಮೂಲಕ ದೇಶದ ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತೆ ರಾಯಚೂರು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಸಲಹೆ ನೀಡಿದರು.
ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಸ್ವಸಾಮರ್ಥ್ಯ ಅರಿತು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿಲ್ಲ. ಅದರಿಂದಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಮೂಲ ವಿಜ್ಞಾನದ ಅಧ್ಯಯನದತ್ತ ಎಲ್ಲ ವಿದ್ಯಾರ್ಥಿಗಳು ಗಮನಹರಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಲಹೆ ಪಡೆದು ಗುರಿ ಸಾಧಿಸಿ: ವಿದ್ಯಾರ್ಥಿಗಳು ಇನ್ನೊಬ್ಬರ ಒತ್ತಡಕ್ಕೆ ಸಿಲುಕಿ ಇಲ್ಲವೇ ಬೇರೊಬ್ಬರ ಅನುಕರಣೆ ಬಿಟ್ಟು ಸ್ವಂತ ಗುರಿಯಿಟ್ಟುಕೊಂಡು ಅಧ್ಯಯನ ಮಾಡುವ ಮೂಲಕ ಯಶಸ್ಸು ಕಾಣಬಹುದು. ಈ ಬಗ್ಗೆ ಶಿಕ್ಷಕರ ಹಾಗೂ ಪಾಲಕರ ಸಲಹೆ ಪಡೆದು ಮುಂದೆ ಸಾಗುವಂತೆ ತಿಳಿಸಿದರು.
ಮೂಲ ವಿಜ್ಞಾನವೇ ಇಂದಿನ ಜಾಗತಿಕ ಪ್ರಗತಿಗೆ ಕಾರಣವಾಗಿದೆ. ಎಲ್ಲ ಸಂಶೋಧನೆ, ತಂತ್ರಜ್ಞಾನ ಆವಿಷ್ಕಾರಕ್ಕೆ ಮೂಲ ವಿಜ್ಞಾನವೇ ತಳಹದಿಯಾಗಿದೆ ಎಂಬ ಸತ್ಯವನ್ನು ಎಲ್ಲರೂ ಮರೆತು ಕೇವಲ ತಂತ್ರಜ್ಞಾನ ಕ್ಷೇತ್ರದತ್ತಲೇ ಎಲ್ಲರೂ ಸಾಗುತ್ತಿದ್ದೇವೆ. ಮೂಲ ವಿಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗವಕಾಶಗಳಿದ್ದು, ಉತ್ತಮ ಸಾಧನೆ ಮಾಡಬಹುದಾಗಿದೆ ಎಂದರು.
ಕೃಷಿ ಕ್ಷೇತ್ರದಲ್ಲಿವೆ ವಿಫುಲ ಅವಕಾಶ: ಮೂಲ ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆಗೆ ಕೃಷಿ ಕ್ಷೇತ್ರದಲ್ಲಿಯೂ ವಿಫುಲ ಅವಕಾಶಗಳಿದ್ದು, ಜಾಗತಿಕ ತಾಪಮಾನದಲ್ಲಿನ ಬದಲಾವಣೆಯಿಂದ ಕೃಷಿ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ವಿಜ್ಞಾನಿಗಳಿಂದಲೇ ಸಂಶೋಧನೆ ಸಾಧ್ಯವಾಗಿದೆ ಎಂಬುದು ಕಟುಸತ್ಯ. ಅದಕ್ಕೆ ಮೂಲವಿಜ್ಞಾನ ಕಾರಣ ಎಂಬುದನ್ನು ಅರಿಯುವ ಅವಶ್ಯಕತೆಯಿದೆ ಎಂದರು.
ಮಾರ್ಚ್ನಲ್ಲಿ ಕೃವಿವಿ ಘಟಿಕೋತ್ಸವ: ವಿದ್ಯಾರ್ಥಿಗಳು ಆಧುನಿಕ ಜಗತ್ತಿನ ಬೆಳವಣಿಗೆಗಳಿಗೆ ತಕ್ಕಂತೆ ಅಧ್ಯಯನದಲ್ಲಿ ಮಾರ್ಪಾಟು ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಸಲಹೆ ನೀಡಿದ ಅವರು, ಮಾರ್ಚ್ನಲ್ಲಿ ಕೃಷಿ ವಿವಿ 3ನೇ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಪಾಲ್ಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಮಕ್ಕಳೊಂದಿಗೆ ಕಲಾಂ ಅವರ ಸಂವಾದ ಆಯೋಜಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಡಿಡಿಪಿಐ ಪರಮೇಶ್ವರ್ ಮಾತನಾಡಿ, ಜ್ಞಾನದಿಂದಲೇ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ. ಹೀಗಾಗಿ ಜ್ಞಾನವನ್ನು ಅರಿತು ಸಾಧನೆಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸೂಕ್ತ. ಜಿಲ್ಲೆಯಲ್ಲಿ ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚು ಸಂತಸ ತಂದಿದೆ ಎಂದರು.
ಮಕ್ಕಳ ಪ್ರಶ್ನೆಗಳಿಗೆ ಸ್ಪಂದಿಸಿ: ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮಾತನಾಡಿ, ಪಾಲಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಮೂಲಕ ಅವರ ಆಶಯಗಳಿಗೆ ಸ್ಪಂದಿಸುವ ಗುಣ ರೂಢಿಸಿಕೊಳ್ಳಬೇಕು. ಆ ಮೂಲಕ ಅವರ ಜ್ಞಾನದ ದಾಹ ತಣಿಸಿದಾಗ ಮಾತ್ರ ಅವರು ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.
ಪಿಯುಸಿ ನಂತರದಲ್ಲಿ ಎಲ್ಲ ವಿದ್ಯಾರ್ಥಿಗಳು ವೈದ್ಯರಾಗುವ ಇಲ್ಲವೇ ಎಂಜಿನಿಯರ್ಗಳಾಗುವ ಬಯಕೆ ಹೊಂದುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದ ವಿಜ್ಞಾನಿಗಳು ಎಂಬುದನ್ನು ವಿದ್ಯಾರ್ಥಿಗಳು ಗಮನಿಸುತ್ತಿಲ್ಲ. ವಿಜ್ಞಾಯಾಗುವ ಆಸಕ್ತಿ ಎಲ್ಲರೂ ತೋರಬೇಕಿದೆ. ಅದಕ್ಕೆ ಮೂಲವಿಜ್ಞಾನದ ಆಯ್ಕೆ ಮಾಡಿಕೊಳ್ಳುವುದು ಅವಶ್ಯಕ ಎಂದರು.
ಪ್ರತಿಭಾನ್ವಿತರಿಗೆ ಸನ್ಮಾನ: ವಿಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭೆಗಳಾದ ರಾಯಚೂರಿನ ಶ್ರೀರಾಘವಿ, ದೇವಿಕಾ ಹೆಗಡೆ, ಮಟಮಾರಿ ಗ್ರಾಮದ ಚನ್ನಬಸವ, ಉಡುಮಗಲ್ ಖಾನಾಪೂರ ಗ್ರಾಮದ ಸವಿತಾ, ಮಾನವಿ ತಾಲೂಕಿನ ಬಸ್ಸಾಪುರ ಗ್ರಾಮದ ಸಣ್ಣ ಹನುಮಂತು ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿಎಲ್ಡಿಇ ವಿವಿ ಉಪಕುಲಪತಿ ಪ್ರೊ. ಬಿ.ಜಿ. ಮೂಲಿಮನಿ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಪ್ರೊ. ಸಿ.ಡಿ. ಪಾಟೀಲ್, ಕಾರ್ಯದರ್ಶಿ ಡಾ. ಕುಂಟೆಪ್ಪ ಗೌರೀಪುರ, ಅಮರೇಶ್, ಗಿರೀಶ್ ಕಡ್ಲೇವಾಡ ಮತ್ತಿತರರು ಇದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ವಿಜ್ಞಾನಿಗಳು ಹಾಗೂ ಶಾಲಾ ಮಕ್ಕಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

