ದಲಿತರ ನಿವೇಶನ ಒತ್ತುವರಿ ತೆರವಿಗೆ ಆಗ್ರಹ
ರಾಯಚೂರು: ಮಾನವಿ ತಾಲೂಕಿನ ಕಪಗಲ್ ಗ್ರಾಪಂ.ನ ಕಪಗಲ್ ನವಗ್ರಾಮ ಯೋಜನೆ ಅಡಿ ನಿವೇಶನಗಳು ಮಂಜೂರಾಗಿದ್ದು, ಎಸ್ಸಿ ಜನಾಂಗದವರಿಗೆ ನೀಡಿದ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಧರಣಿ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಪಂ ಸಿಇಒ ಗೆ ದೂರು ಸಲ್ಲಿಸಿ, ಮಾನವಿ ತಾಲೂಕಿನ ನವಗ್ರಾಮ ಯೋಜನೆ ಅಡಿ ವಿತರಿಸಲಾದ ನಿವೇಶನಗಳಲ್ಲಿ ಪರಿಶಿಷ್ಟರಿಗೆ ನಿವೇಶನ ಒದಗಿಸಲಾಗಿದೆ. ಆದರೆ ಗ್ರಾಮದ ಬೇರೆ ಜಾತಿಯವರು ಐದು ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಟೀಕಿಸಿದರು.
ಅತಿಕ್ರಮಣ ನಿವೇಶನದಲ್ಲಿ ಮನೆ: ಈಗಾಗಲೇ ಗ್ರಾಮದ ಚಾಂದಪಾಷಾ ಎಂಬುವವರು ಅತಿಕ್ರಮಣ ಮಾಡಿಕೊಂಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು ಆಡಳಿತ ಅದಕ್ಕೆ ತಡೆಯೊಡ್ಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಗ್ರಾಮದ ಕೆಲ ಪ್ರಭಾವಿಗಳು ದಲಿತರಿಗೆ ನೀಡಿದ ನಿವೇಶನಗಳಲ್ಲಿ ಮೇವಿನ ಬಣವೆಗಳನ್ನು ಇರಿಸಿದ್ದು, ದಲಿತರಿಗೆ ನಿವೇಶನವೇ ಇಲ್ಲವಾಗಿದೆ ಎಂದು ದೂರಿದರು.
ಗ್ರಾಮದಲ್ಲಿ ದಲಿತರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾನವಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳಿಗೆ ದೂರಿತ್ತಿದ್ದರೂ ಕ್ರಮ ಮಾತ್ರ ಜರುಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ನವಗ್ರಾಮ ಯೋಜನೆ ಅಡಿ ಕಪಗಲ್ ಗ್ರಾಮದಲ್ಲಿ ದಲಿತರಿಗೆ ನೀಡಿದ ನಿವೇಶನಗಳ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ಹಿಂದಿರುಗಿಸುವಂತೆ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.
ಮೂಲ ಸೌಕರ್ಯಕ್ಕೆ ಆಗ್ರಹ: ಗ್ರಾಮದಲ್ಲಿ ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ಕುಡಿಯುವ ನೀರಿನ ಸೌಲಭ್ಯವನ್ನು ಎಸ್ಸಿಗಳು ವಾಸವಾಗಿರುವ ಪ್ರದೇಶದಲ್ಲಿ ಒದಗಿಸಬೇಕು. ಚರಂಡಿ, ಸಿಸಿ ರಸ್ತೆಗಳನ್ನು ಪರಿಶಿಷ್ಟರು ವಾಸವಾಗಿರುವ ಕಾಲನಿಯಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಪರಶುರಾಮ ಅರೋಲಿ, ಶಿವಗೇನಿ ಕಪಗಲ್, ಅಶೋಕ ಕಪಗಲ್, ಪ್ರದೀಪ್ ಕಪಗಲ್, ಚನ್ನಬಸವ ಯಕ್ಲಾಸಪೂರು ಸೇರಿದಂತೆ ಗ್ರಾಮದ ದಲಿತ ಕುಟುಂಬಗಳವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

