ಟಿಬಿ ಫ್ಲಡ್ ಫ್ಲೋರ್ ನಾಲೆ: ಇಚ್ಛಾಶಕ್ತಿ ಕೊರತೆ
- ಪಂಪಯ್ಯ ಮಠ
ಮುದಗಲ್: ರಾಜ್ಯ ಸರ್ಕಾರವೇನೋ ನೀರಾವರಿ ಯೋಜನೆಗೆ ಇಚ್ಛಾಶಕ್ತಿ ತೋರಿ ತುಂಗಭದ್ರಾ ಫ್ಲಡ್ ಫ್ಲೋರ್ ನಾಲೆ ಸರ್ವೆಗೆ ಸೂಚಿಸಿದ ಹಿನ್ನೆಲೆ ಸಮೀಕ್ಷಾ ವರದಿ ಸಿದ್ಧವಾಗಿದೆ. ಆದರೆ ಈ ಯೋಜನೆ ಲಾಭ ಪಡೆಯುವ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳು ಕಾಮಗಾರಿ ಆರಂಭಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ.
2010- 11ನೇ ಸಾಲಿನಲ್ಲಿ 'ನೀರಾವರಿ ದಶಕ' ಎಂದು ಘೋಷಿಸಿದ್ದ ರಾಜ್ಯ ಸರ್ಕಾರ, ತುಂಗಭದ್ರಾ ಅಣೆಕಟ್ಟೆಯ ಹೆಚ್ಚುವರಿ ನೀರನ್ನು ಬಳಸಿಕೊಂಡು ಹೊಸದಾಗಿ 2 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ನಿರ್ಧರಿಸಿತ್ತು. ಅದರಂತೆಈಗಾಗಲೇ ತುಂಗಭದ್ರಾ ಫ್ಲಡ್ ಫ್ಲೋರ್ ನಾಲೆ ಸರ್ವೆ ಪೂರ್ಣಗೊಂಡು ವರದಿ ಸರ್ಕಾರದ ಕೈ ಸೇರಿದೆ.
ಈ ಯೋಜನೆಯಿಂದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಲಿಂಗಸ್ಗೂರು, ಸಿಂಧನೂರು, ತಾಲೂಕಿನ ಕೆರೆ ಮತ್ತು ಚಿಕ್ಕ ಡ್ಯಾಂಗಳಿಗೆ ನೀರು ಸಂಗ್ರಹ ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಘಟಕಗಳನ್ನು ನಿರ್ಮಿಸಲಾಗುವುದು. ವಿದ್ಯುತ್ ಸಮಸ್ಯೆ ನಿವಾರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಇದಕ್ಕೆ ಸುಮಾರು 5,800 ಕೋಟಿ ವೆಚ್ಚವಾಗಲಿದೆ ಎಂದು ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.
ನೀರು ಸಂಗ್ರಹ: 15 ಜಲಾಶಯಗಳು ಮಳೆಗಾಲದಲ್ಲಿ ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಈ ಯೋಜನೆಯಿಂದ 15 ಸಣ್ಣ ಜಲಾಶಯಗಳಿಗೆ ನೀರು ಸಂಗ್ರಹ ಮಾಡಿಕೊಂಡು, ಕವಿತಾಳ ಬಳಿಯ ತುಂಗಭದ್ರಾ ನಾಲೆಗೆ ಜೋಡಣೆ ಮಾಡುವ ಉದ್ದೇಶ ಹೊಂದಿದೆ. ಕಾರ್ಯನಿರ್ವಾಹಕ ಸಜ್ಜನ್, ಎಂಜನಿಯರ್ ನಟರಾಜ, ಸೂಪರಿಂಟೆಂಡೆಂಟ್ ಎಂಜನಿಯರ್ ಸೈಯದ್ ಇಸ್ಮಾಯಿಲ್ ಆಪ್ಸರ್ ಮೇಲುಸ್ತುವಾರಿಯಲ್ಲಿ ಯೋಜನೆ ಸಿದ್ಧಗೊಂಡಿದೆ. ಕೊಪ್ಪಳ ಜಿಲ್ಲೆಯ ಹಿರೇಬದಿನಾಳ, ಗುಡ್ಡನಹಳ್ಳಿ, ಗಬ್ಬೂರು, ಕೆರೆ ಹಳ್ಳಿ, ಇಂದರಗಿ, ವಿಠ್ಲಾಪುರ, ಕನಕಗಿರಿ, ನವಲಿ, ಕಿಲ್ಲಾರಹಟ್ಟಿ, ಸಿಂಧನೂರು, ತಾಲೂಕಿನ ಕನಕನಾಲಾ, ಹೊಕ್ರಾಣಿ, ಲಿಂಗಸ್ಗೂರು ತಾಲೂಕಿನ ಕುಮಾರಖೇಡ, ದೇಸಾಯಿಬೋಗಾಪುರ, ಮೇದಕಿನಾಳ, ಮಾರಲದಿನ್ನಿ (ಮಸ್ಕಿ ನಾಲಾ) ಯೋಜನೆಗೆ ಜೋಡಣೆ ಮಾಡಲಾಗುತ್ತದೆ.
ಅಲ್ಲದೆ ಇನ್ನೊಂದು ನಾಲೆ ಕೆರೆಹಳ್ಳಿಯಿಂದ ಚಂದ್ರಗಿರಿ, ಶಿವಪುರ ಕೆರೆಗಳಿಗೆ ಸಂಪರ್ಕ ಹೊಂದಿ ಕೆರೆಗಳಿಗೆ ನೀರು ಸಂಗ್ರಹ ಮಾಡಲಾಗುವುದು. ಇದೇ ಯೋಜನೆಯಿಂದ ಮಾನವಿ ತಾಲೂಕಿನ ಕವಿತಾಳ ಬಳಿ ದೊಡ್ಡ ಕೆರೆ ನಿರ್ಮಿಸಿ ನೀರು ಸಂಗ್ರಹ ಮಾಡುವ ಉದ್ದೇಶ ಹೊಂದಿದೆ.
ಜಲವಿದ್ಯುತ್ ಯೋಜನೆ: ಕೊಪ್ಪಳ ಜಿಲ್ಲೆಯ ಶಿವಪುರ ಜಲವಿದ್ಯುತ್ ಯೋಜನೆ ಈಗಾಗಲೇ ಇದ್ದು, ಅಲ್ಲೇ ಇನ್ನೊಂದು ಹೊಸ ವಿದ್ಯುತ್ ಯೋಜನೆ ಆರಂಭಿಸಬಹುದಾಗಿದೆ. ಸುಮಾರು 4 ಟಿಎಂಸಿ ನೀರು ಸಂಗ್ರಹ ಮಾಡಬಹುದಾದ ಚಿಕ್ಕ ಜಲಾಶಯವನ್ನು ನಿರ್ಮಿಸಲು ಯೋಗ್ಯವಾಗಿದೆ. ಯಾವುದೇ ಹಳ್ಳಿ, ಜಮೀನು ಮುಳುಗಡೆಯಾಗದ ರೀತಿಯಲ್ಲಿ ಯೋಜನೆ ಸಿದ್ಧಗೊಂಡಿದೆ. ನವಲಿ ಬಳಿ ವಿದ್ಯುತ್ ಘಟಕವನ್ನು ನಿರ್ಮಿಸುವ ಈ ಯೋಜನೆಯಿಂದ ಕೊಪ್ಪಳ, ಜಮೀನು ನೀರಾವರಿಗೆ ಒಳಪಡುವುದು. ಮಳೆಗಾಲದಲ್ಲಿ ಆಂಧ್ರದ ಪಾಲಾಗುತ್ತಿರುವ ನೀರನ್ನು ಉಳಿಸಿಕೊಂಡು ಎರಡು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವಂಥ ಯೋಜನೆ ಇದಾಗಿದೆ.
ಇಚ್ಛಾಶಕ್ತಿ: ತುಂಗಭದ್ರಾ ಪ್ರವಾಹದ ನೀರನ್ನು ಬಳಸಿಕೊಂಡು ಲಕ್ಷಾಂತರ ಎಕರೆ ಜಮೀನು ನೀರಾವರಿಗೆ ಒಳಪಡುವ ಈ ಯೋಜನೆಯನ್ನು ಜಾರಿಗೆ ತರಲು ರಾಯಚೂರು, ಕೊಪ್ಪಳ ಜಿಲ್ಲೆಯ ರಾಜಕೀಯ ಮುಖಂಡರು, ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಘ ಸಂಸ್ಥೆಗಳು, ರೈತ ಸಂಘಟನೆಗಳು ಇಚ್ಛಾಶಕ್ತಿ ತೋರಿಸಬೇಕಾಗಿದೆ.
ಪಕ್ಷಭೇದ ಮರೆತು ಹೋರಾಟ ನಡೆಸಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು ಅಗತ್ಯವಾಗಿದೆ. ಈ ಯೋಜನೆ ಆಂಧ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಸ್ವಾಮ್ಯಕ್ಕೆ ಒಳಪಡುತ್ತಿದ್ದು, ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೆ ತಂದು ಜಿಲ್ಲೆಯ ಜನರು ಪ್ರತಿವರ್ಷ ಬರಗಾಲದಿಂದ ಗುಳೆ ಹೋಗುವುದನ್ನು ತಪ್ಪಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

