ರಾಯಚೂರು

ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.1
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸೋಮವಾರ ನಗರದ ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿತು.
ನಂತರ ಮಾತನಾಡಿದ ಫೆಡರೇಷನ್ ಜಿಲ್ಲಾಧ್ಯಕ್ಷ ಶೇಕ್ಷಾಖಾದ್ರಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಹಾಗೂ ಸಿಐಟಿಯುನ ಹಲವಾರು ಹೋರಾಟಗಳ ಫಲವಾಗಿ ಕಟ್ಟಡ ಕಾರ್ಮಿಕರಿಗೆ ಕೇಂದ್ರ- ರಾಜ್ಯ ಸರ್ಕಾರಗಳು ಕಲ್ಯಾಣ ಮಂಡಳಿಗಳ ಮೂಲಕ ಸೌಲಭ್ಯ ದೊರೆಯುವಂತೆ ಮಾಡಿವೆ. ಆದರೆ ಅವು ಕಾರ್ಮಿಕರಿಗೆ ದೊರೆಯಲು ಹಲವಾರು ಸಮಸ್ಯೆಗಳಿದ್ದು, ರಾಜ್ಯದಲ್ಲಿ ಮಂಡಳಿಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಿಸದಿರುವುದು ಅಸಮಾಧಾನ ತಂದಿದೆ ಎಂದರು.
ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ: ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ಸುಸ್ಥಿರ ಕಚೇರಿಗಳನ್ನು ಸ್ಥಾಪಿಸಿ ಕಾರ್ಮಿಕರಿಗೆ ತ್ವರಿತವಾಗಿ ಸೌಲಭ್ಯ ನೀಡುವಲ್ಲಿ ಕಲ್ಯಾಣ ಮಂಡಳಿ ಮುಂದಾಗುತ್ತಿಲ್ಲ. ಹಲವಾರು ಹೋರಾಟಗಳನ್ನು ಈಗಾಗಲೇ ನಡೆಸಿದರೂ ಕಾರ್ಯ ಉತ್ತಮಗೊಳ್ಳುತ್ತಿಲ್ಲ. ಅರ್ಜಿಗಳು ವಿತರಣೆಯಾಗದೆ ವಿಳಂಬವಾಗಿರುವುದು ಇದಕ್ಕೆ ಉದಾಹರಣೆಯಾಗಿದೆ.
ದೇಶದಲ್ಲಿ ಇಂದು ಪ್ರತಿನಿತ್ಯ ಅಗತ್ಯ ವಸ್ತುಗಳಾದ ಅಕ್ಕಿ, ಗೋದಿ, ಸಕ್ಕರೆ, ಪೆಟ್ರೋಲ್, ಡೀಸೆಲ್, ಗ್ಯಾಸ್, ಕಟ್ಟಡ ಸಾಮಾಗ್ರಿಗಳಾದ ಸಿಮೆಂಟ್, ಕಬ್ಬಿಣ ಮುಂತಾದ ವಸ್ತುಗಳ ಬೆಲೆ ಗಗನಕ್ಕೆ ಏರಿ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಹೇಳಿದರು.
ಅಲೆಮಾರಿಗಳಾದ ಕಾರ್ಮಿಕರು: ತಾಲೂಕು ಕಾರ್ಯದರ್ಶಿ ಕೆ.ಮುತ್ತಣ್ಣ ಮಾತನಾಡಿ, ಕಟ್ಟಡ ಕಾರ್ಮಿಕರು ಭವ್ಯ ಕಟ್ಟಡಗಳನ್ನು ಕಟ್ಟಿದರೂ ಅವರಿಗೆ ಸ್ವಂತ ಮನೆ ಇಲ್ಲದೆ ನಿರಂತರ ಅಲೆಮಾರಿಗಳಾಗುತ್ತಿದ್ದಾರೆ. ಆರೋಗ್ಯ ರಕ್ಷಣೆ ದುಬಾರಿಯಾಗುತ್ತಿದ್ದು ಕಟ್ಟಡ ಕಾರ್ಮಿಕರು ತಮ್ಮ ಅವಲಂಬಿತರಿಗೆ ಆರೋಗ್ಯ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇವರ ಅವಲಂಬಿತರಿಗೆ ಸ್ವಸ್ಥ ಭೀಮಾ ಯೋಜನೆ ಜಾರಿಗೊಳಿಸಲು ಒತ್ತಾಯ ಸೇರಿದಂತೆ ಕೆಳಕಂಡ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸಮಿತಿಯ ಕರೆಯ ಮೇರೆಗೆ ಈ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
ಬೇಡಿಕೆಗಳು: ಕಟ್ಟಡ ಕಾರ್ಮಿಕರು ಸೌಲಭ್ಯಗಳಿಗಾಗಿ ಸಲ್ಲಿಸಿರುವ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಸೌಲಭ್ಯದ ಹಣ ವಿತರಿಸಲು ಕ್ರಮ ಜರುಗಿಸಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ನೋಂದಣಿ, ನವೀಕರಣ ಸೌಲಭ್ಯದ ಅರ್ಜಿಗಳನ್ನು ಸ್ವೀಕರಿಸಲು ಅಗತ್ಯ ಸಿಬ್ಬಂದಿ ಮತ್ತು ಸುಸ್ಥಿರ ಕಚೇರಿಗೆ ವ್ಯವಸ್ಥೆ ಮಾಡಬೇಕು. ಸೌಲಭ್ಯಗಳು ತ್ವರಿತವಾಗಿ ಕಾರ್ಮಿಕರಿಗೆ ಸಿಗುವಂತಾಗಲು ಕಲ್ಯಾಣ ಮಂಡಳಿಯಲ್ಲಿ ಪೂರ್ಣಾವಧಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಲಾಯಿತು.
ತಾಲೂಕಾಧ್ಯಕ್ಷ ಅಖ್ತರ್ ಪಾಷ, ಉಪಾಧಕ್ಷ ನನ್ನುಮೇಸ್ತ್ರಿ, ಪಿಡಬ್ಯ್ಲೂಡಿ ಕ್ಯಾಂಪ್ ಅಧ್ಯಕ್ಷ ಹನುಮಂತಪ್ಪ ಬಳಗಾನೂರು, ಉಪಾಧ್ಯಕ್ಷ ಅಲಿಸಾಬ, ಖಜಾಂಚಿ ರಾಜು ಮೇಸ್ತ್ರಿ, ಪಿಡಬ್ಯ್ಲೂಡಿ ಕ್ಯಾಂಪ್ ಕಾರ್ಯದರ್ಶಿ ಖಾದರಬಾಷಾ, ತುರ್ವಿಹಾಳ ಅಧ್ಯಕ್ಷ ಮಹಿಬೂಬ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.