ಅತಿಕ್ರಮಣ ತೆರವು; ಕಟ್ಟಡ ನೆಲಸಮ
ಕನ್ನಡಪ್ರಭ ವಾರ್ತೆ ರಾಯಚೂರು ಜು.3
ನಗರದಲ್ಲಿ ಜಿಲ್ಲಾಡಳಿತದ ಜೆಸಿಬಿ ಯಂತ್ರಗಳು ಮತ್ತೊಮ್ಮೆ ಘರ್ಜಿಸಿದ್ದು, ನಗರದ ಮಂತ್ರಾಲಯಂ ರಸ್ತೆಯಲ್ಲಿನ ಆರ್‌ಟಿಒ ವೃತ್ತದ ಸುತ್ತಲಿನ ಪ್ರದೇಶದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ್ದ ಕಟ್ಟಡಗಳನ್ನು ಜಿಲ್ಲಾಡಳಿತ ಬುಧವಾರ ಬೆಳ್ಳಂಬೆಳಗ್ಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಆರ್‌ಟಿಒ ಕಚೇರಿವರೆಗೆ ನಿರ್ಮಿಸಲಾಗುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿ ಮುಂದುವರಿಕೆ ನಿಟ್ಟಿನಲ್ಲಿ ಅತಿಕ್ರಮಿಸಿಕೊಂಡು ನಿರ್ಮಿಸಿದ್ದ 8 ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಕಟ್ಟಡಗಳ ಮಾಲೀಕರ ವಿರೋಧದ ಮಧ್ಯೆಯೂ ಕಾರ್ಯಾಚರಣೆಯನ್ನು ಅಧಿಕಾರಿಗಳು ಕೈಗೊಂಡರು.
ರಸ್ತೆ ಅಭಿವೃದ್ಧಿಗಾಗಿ..: ನಗರದಲ್ಲಿ ಕೈಗೊಳ್ಳಲಾಗುತ್ತಿರುವ 36 ಕೋಟಿ ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಈ ಕಟ್ಟಡಗಳು ಅಡ್ಡಿಯಾಗಿದ್ದರಿಂದ ಸಹಾಯಕ ಆಯುಕ್ತೆ ಮಂಜುಶ್ರೀ ಹಾಗೂ ಎಎಸ್ಪಿ ಡಾ. ದಿವ್ಯಾ ಗೋಪಿನಾಥ್ ಅವರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಭೀಮರೆಡ್ಡಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ಕಟ್ಟಡಗಳು ಹಾಗೂ ಆವರಣ ಗೋಡೆಗಳನ್ನು ಜಿಲ್ಲಾಡಳಿತದ ಜೆಸಿಬಿ ಯಂತ್ರಗಳು ಕೆಡವಿ ಹಾಕಿದವು. ಈ ಸಂದರ್ಭದಲ್ಲಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದ್ದ ಹೊಟೇಲ್‌ಗಳ ಮಾಲೀಕರು ಯಾವುದೇ ಮುನ್ಸೂಚನೆ ನೀಡದೇ ಆಡಳಿತ ಬೆಳಗ್ಗೆಯೇ ತೆರವು ಕಾರ್ಯಕ್ಕೆ ಮುಂದಾಗಿದ್ದರಿಂದ ಗೊಂದಲಕ್ಕೆ ಸಿಲುಕಿದರು.
ಆತಂಕ: ಬೆಳಗ್ಗೆ ವಾಣಿಜ್ಯ ವಹಿವಾಟು ನಡೆಸುವ ಉದ್ದೇಶದಿಂದ ಹೊಟೇಲ್‌ನ ಕೆಲಸ ಕಾರ್ಯ ಆರಂಭಿಸಿದ್ದ ಮಾಲೀಕರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಟ್ಟಡ ತೆರವು ಕಾರ್ಯ ಕೈಗೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಆತಂಕ ಸೃಷ್ಟಿಸಿತು. ಇದರಿಂದ ವಿಚಲಿತರಾದ ಕೆಲವರು ಮರುಮಾತನಾಡದೇ ತಾವು ಬಾಡಿಗೆ ಪಡೆದು ನಡೆಸುತ್ತಿದ್ದ ಹೊಟೇಲ್‌ನಲ್ಲಿನ ಎಲ್ಲ ಸಾಮಾನುಗಳನ್ನು ಹೊರತಂದು ಸಂಗ್ರಹಿಸುತ್ತಿದ್ದ ದೃಶ್ಯ ಕಂಡುಬಂದಿತು.
ರಸ್ತೆ ಅಗಲೀಕರಣಕ್ಕೆ ಅನುಕೂಲ: ಸದ್ಯ ಜಿಲ್ಲಾಡಳಿತ ಕೈಗೊಂಡ ಅತಿಕ್ರಮಣ ತೆರವು ಕಾರ್ಯಾಚರಣೆಯಿಂದಾಗಿ ರಸ್ತೆ ಅಗಲೀಕರಣ ಕಾಮಗಾರಿಗೆ ಅನುಕೂಲವಾಗಿದೆ. ಈ ಮಧ್ಯೆ ಆರ್‌ಟಿಒ ವೃತ್ತದಲ್ಲಿ ತೆರವು ಕಾರ್ಯಾಚರಣೆ ನಂತರ ನಗರದ ಸ್ಟೇಷನ್ ವೃತ್ತದ ಬಳಿಯ ಕಟ್ಟಡಗಳ ತೆರವು ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಯಿತು.
ಬಿಗಿ ಬಂದೋಬಸ್ತ್: ಆದರೆ ಈ ವೇಳೆ ಕಟ್ಟಡಗಳ ಮಾಲೀಕರು ಎರಡು ದಿನಗಳ ಕಾಲವಕಾಶ ನೀಡಿದಲ್ಲಿ ತಾವೇ ಸ್ವಯಂಪ್ರೇರಣೆಯಿಂದ ಎಲ್ಲ ಕಟ್ಟಡ ತೆರವುಗೊಳಿಸಿಕೊಳ್ಳುವ ಭರವಸೆ ನೀಡಿದ್ದರಿಂದ ಜಿಲ್ಲಾಡಳಿತ ಮಾಲೀಕರಿಗೆ ಅವಕಾಶ ನೀಡಿತು. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ವಿವಿಧ ಠಾಣೆಗಳ ಅನೇಕ ಅಧಿಕಾರಿಗಳು ಸಿಬ್ಬಂದಿಯನ್ನು ಬಿಗಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

