ರಾಯಚೂರು

ಗಡಿ ಮಕ್ಕಳಿಗೆ ಕನ್ನಡ ಭಾಷೆ ಪುಸ್ತಕದ ಕೊರತೆ

Published On :

ವಿಶೇಷ ವರದಿ
ರಾಯಚೂರು:
ರಾಜ್ಯದ ಗಡಿಯಾಚೆಗೆ ಆಂಧ್ರದಲ್ಲಿ ಕನ್ನಡ ವಿಷಯದ ವ್ಯಾಸಂಗಕ್ಕೆ ಕರ್ನಾಟಕ ಸರ್ಕಾರವೇ ಮುಳುವಾಗಿದೆ. ಕನ್ನಡ ಕಲಿಸುವ ಶಾಲೆಗಳು ಆರಂಭಗೊಂಡು ತಿಂಗಳಾದರೂ ಕನ್ನಡ ಭಾಷಾ ಪಠ್ಯಪುಸ್ತಕದ ಕೊರತೆ ಕಾಡುತ್ತಿದೆ. ಅಗತ್ಯ ಪುಸ್ತಕಗಳು ದೊರೆಯದೇ ಕನ್ನಡ ಕಲಿಯಲು ಆಸಕ್ತ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಆಂಧ್ರದ ಮಹೆಬೂಬ್ ನಗರ ಜಿಲ್ಲೆಯ ಕೃಷ್ಣಾ ಗ್ರಾಮ ಮತ್ತು ಅದರ ಸುತ್ತಲಿನ ಗ್ರಾಮಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯುವ ಪ್ರದೇಶದ ಕನ್ನಡಿಗರ ಮಕ್ಕಳಿಗೆ ಇಂಥ ಸ್ಥಿತಿ ಒದಗಿದೆ. ಕರ್ನಾಟಕದಲ್ಲಿ ಜೂ.1ಕ್ಕೆ ಶಾಲೆಗಳು ಕಾರ್ಯಾರಂಭ ಮಾಡಿದರೆ ಆಂಧ್ರದಲ್ಲಿ ಶಾಲೆಗಳು ಜೂ.12ಕ್ಕೆ ತೆರೆದಿವೆ. ಆಂಧ್ರದ ಶಾಲೆಗಳಲ್ಲಿ ಅಧ್ಯಯನ ಮಾಡುವ ಕನ್ನಡಿಗರ ಮಕ್ಕಳು ಮೊದಲಿನಿಂದಲೂ ಕನ್ನಡ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಕಲಿಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರ ಪ್ರತಿ ವರ್ಷ ಆಂಧ್ರದ ಗಡಿಯಲ್ಲಿ ಕನ್ನಡಿಗರು ವ್ಯಾಸಂಗ ಮಾಡುವ ಶಾಲೆಗಳು ಕಾರ್ಯಾರಂಭ ಮಾಡುವ ಹೊತ್ತಿಗೆ ಕನ್ನಡ ಭಾಷೆಯ ಪಠ್ಯಪುಸ್ತಕ ಮುದ್ರಿಸಿ ಒದಗಿಸುತ್ತಿತ್ತು. ಆದರೆ ಪ್ರಸಕ್ತ ವರ್ಷ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಿಲ್ಲೆಯ ಮಕ್ಕಳಿಗೆ ಪಠ್ಯಪುಸ್ತಕಗಳು ಶಾಲೆ ಆರಂಭವಾದ ವಾರದೊಳಗೇ ಹಂಚಲಾಗಿದೆ. ರಾಜ್ಯದ ಗಡಿಯಾಚೆಯ ಆಂಧ್ರದ ಶಾಲೆಗಳಿಗೆ ಕನ್ನಡ ಮೊದಲ ಭಾಷೆಯ ಪುಸ್ತಕ ಈಗಲೂ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗಿಲ್ಲ ಎಂಬುದು ಶಿಕ್ಷಕರ ಆರೋಪ.
ಕಲಿಕೆಗೆ ತೊಂದರೆ: ಕೃಷ್ಣಾ ಗ್ರಾಮದ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೆ ಸುಮಾರು 300ಕ್ಕೂ ಹೆಚ್ಚಿನ ಕನ್ನಡ ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಆದರೆ, ಅವರಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಕನ್ನಡ ಪ್ರಥಮ ಭಾಷೆಯ ಪಠ್ಯಪುಸ್ತಕ ದೊರೆತಿದ್ದು, ಇನ್ನುಳಿದವರು ಕನ್ನಡ ಕಲಿಯಲು ತೊಂದರೆ ಎದುರಿಸುತ್ತಿದ್ದಾರೆ.
ಮುದ್ರಣದಲ್ಲಿ ವಿಳಂಬ: ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಪ್ರಸಕ್ತ ವರ್ಷ 6, 7 ಮತ್ತು 8ನೇ ತರಗತಿಯ ಪಠ್ಯದಲ್ಲಿ ಮಾರ್ಪಾಟು ಮಾಡಿರುವುದರಿಂದಲೇ ಪುಸ್ತಕ ಮುದ್ರಣ ವಿಳಂಬವಾಗಿದೆ ಎಂದು ಇಲಾಖೆ ಹೇಳಿದೆ. ಆದರೆ, ಶಾಲೆ ಆರಂಭವಾಗಿ ತಿಂಗಳು ಕಳೆದಿದೆ. ಮತ್ತಷ್ಟೂ ತಡವಾಗಿ ಪಠ್ಯ ಪುಸ್ತಕಗಳು ಮಕ್ಕಳ ಕೈ ಸೇರಿದರೆ ಕಲಿಕೆಗೆ ತೊಂದರೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.