ರಾಯಚೂರು

ರಾಜಕೀಯ ಕ್ಷೇತ್ರದಲ್ಲೂ ವೈದ್ಯರ ಸಾಧನೆ; ಶ್ಲಾಘನೆ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜು.8
ಇಂದಿನ ದಿನಮಾನದಲ್ಲಿ ವೈದ್ಯರು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ರಾಜಕೀಯ ಕ್ಷೇತ್ರದಲ್ಲಿಯೂ ಹೆಸರು ಮಾಡುತ್ತಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಅನೇಕ ವೈದ್ಯರು ಆಯ್ಕೆಯಾಗಿದ್ದು, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆಂದು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದರು.
ನಗರದಲ್ಲಿ ಭಾನುವಾರ ಸಂಜೆ ಐಎಂಎ ಹಾಲ್‌ನಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ವೈದ್ಯರಿಗಿದೆ. ಸಮಾಜದ ಆರೋಗ್ಯ ಕಾಪಾಡುವ ಮೂಲಕ ಪ್ರಗತಿಗೆ ಶ್ರಮಿಸುತ್ತಿರುವ ವೈದ್ಯರ ಸೇವೆ ಶ್ಲಾಘನೀಯ ಎಂದರು.
ಪ್ರಗತಿ: ಶಾಸಕರಾಗಿ ಆಯ್ಕೆಯಾಗಿರುವ ತಮ್ಮ ಮುಂದೆ ಹತ್ತಾರು ಸವಾಲುಗಳಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ನಗರ ಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿ, ನಗರದ ಎಲ್ಲ ನಿವಾಸಿಗಳ ಸಹಕಾರ ಈ ನಿಟ್ಟಿನಲ್ಲಿ ಅವಶ್ಯಕ ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ.ಎನ್. ಕುಲಕರ್ಣಿ ಸಮಾರಂಭ ಉದ್ಘಾಟಿಸಿ, ರೋಗಿಗಳು ಮತ್ತು ವೈದ್ಯರ ಮಧ್ಯೆ ಉತ್ತಮ ಬಾಂಧವ್ಯ ಮೂಡಿಸುವುದು ಅವಶ್ಯಕ. ವೈದ್ಯರೂ ಸಹ ತಾಳ್ಮೆಯಿಂದ ವರ್ತಿಸುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು.
ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರಿಗೆ ಡಾ.ಬಿ.ಸಿ. ರಾಯ್ ಅವರ ಆದರ್ಶಗಳೇ ಮಾದರಿಯಾಗಬೇಕು. ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ರಕ್ತಭಂಡಾರ: ಐಎಂಎ ಕಾರ್ಯದರ್ಶಿ ಡಾ.ರಾಜೇಶ್ ಕಕ್ಕೇರಿ ಮಾತನಾಡಿ, ಐಎಂಎ ಜಿಲ್ಲಾ ಘಟಕವು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೇ ನಗರದಲ್ಲಿ ಐಎಂಎ ವತಿಯಿಂದ ರಕ್ತಭಂಡಾರ ಸ್ಥಾಪಿಸಲಾಗಿದೆ. ರಕ್ತದ ಕಣಗಳ ಪ್ರತ್ಯೇಕಿಸುವ ಘಟಕ ಸ್ಥಾಪಿಸಲಾಗಿದೆ ಎಂದು ಹೇಳಿದರು.
ರಕ್ತಭಂಡಾರಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸುವ ಮೂಲಕ ಹಗಲು ಮತ್ತು ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಮೂಲಕ ತುರ್ತು ಸಂದರ್ಭದಲ್ಲೂ ರೋಗಿಗಳಿಗೆ ರಕ್ತ ದೊರೆಯುವಂತೆ ಮಾಡಲಾಗಿದೆ. ಹೀಗಾಗಿ ರೋಗಿಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸುವ ಕಾರ್ಯ ಐಎಂಎ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಯಶೋದಾ ಜೋಷಿ, ಪತ್ರಕರ್ತ ಜಗನ್ನಾಥ ದೇಸಾಯಿ, ವಿದ್ಯಾರ್ಥಿನಿಯರಾದ ಮಧುಶ್ರೀ, ದಿವ್ಯಾ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಎಂ.ಕೆ. ಮೊಹಿಯೂದ್ದೀನ್, ಮೇಘನಾ ಗದ್ದಿಕೇರಿ ಅವರನ್ನು ಗೌರವಿಸಲಾಯಿತು.
ಎಂಬಿಬಿಎಸ್ ಕಡೆಯ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡಲಾಗುವ ಶಂಕರಗೌಡ ಮೆಮೋರಿಯಲ್ ಪ್ರಶಸ್ತಿಯನ್ನು ರಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ.ದರ್ಶನ್ ಅವರಿಗೆ ಪ್ರದಾನ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ವೈದ್ಯರು ಮತ್ತು ಕುಟುಂಬದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.