ರಾಯಚೂರು

16ರಂದು ಸಿಂಧನೂರಿಗೆ ವಿವೇಕಾನಂದರ ರಥಯಾತ್ರೆ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.8
ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಮತ್ತು ರಾಮಕೃಷ್ಣ ಭಾವಪ್ರಚಾರ ಪರಿಷತ್ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಜು. 16ರಂದು ವಿವೇಕಾನಂದರ ರಥಯಾತ್ರೆ ಆಗಮಿಸಲಿದೆ ಎಂದು ಸ್ವಾಮಿ ವಿವೇಕಾನಂದ ರಥಯಾತ್ರೆ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಈರೇಶ ಇಲ್ಲೂರು ವಕೀಲರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 36 ಲಕ್ಷ ವೆಚ್ಚದ 28 ಅಡಿ ಉದ್ದ, 14 ಅಡಿ ಎತ್ತರ, 10 ಅಡಿ ಅಗಲದ ವಿಶೇಷ ರಥ ಲಿಂಗಸ್ಗೂರಿನಿಂದ ಆಗಮಿಸಲಿದೆ. ಮಾ.13ರಂದು ರಾಮಕೃಷ್ಣ ಜಯಂತಿಯಂದು ವಿವೇಕಾನಂದ ರಥಯಾತ್ರೆಗೆ ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ್ ಜೀ ಚಾಲನೆ ನೀಡಿದ್ದಾರೆ. ಈ ಭವ್ಯ ರಥ ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಸಂಚರಿಸುತ್ತಿದೆ. ಬಹಿರಂಗ ಸಭೆ, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಸತ್ಸಂಗ ಕಾರ್ಯಕ್ರಮಗಳ ಮೂಲಕ ವಿವೇಕಾನಂದರ ಸಾಹಿತ್ಯ ಮತ್ತು ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸಮಿತಿ ರಚನೆ: ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ ರಚಿಸಲಾಗಿದ್ದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಗೌರವಾಧ್ಯಕ್ಷರಾಗಿ, ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷರಾಗಿ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುವರು. ಹಣಕಾಸು, ಮೆರವಣಿಗೆ, ವೇದಿಕೆ, ಪ್ರಸಾದ, ಪ್ರಚಾರ, ಮೇಲುಸ್ತುವಾರಿ ಮತ್ತು ಮಹಿಳಾ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳ ಸದಸ್ಯರು ರಥಯಾತ್ರೆಯ ಯಶಸ್ವಿಗೆ ಈಗಾಗಲೇ ತೊಡಗಿದ್ದಾರೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಎಲ್ಲ ಪಕ್ಷಗಳ ಮುಖಂಡರು ಪಕ್ಷ ಭೇದ ಮರೆತು ಸಹಕರಿಸುವಂತೆ ಮನವಿ ಮಾಡಿದರು.
ನಗರದಲ್ಲಿ ಬೃಹತ್ ಮೆರವಣಿಗೆ: ಜೂ. 16ರಂದು ಲಿಂಗಸ್ಗೂರಿನಿಂದ ಆಗಮಿಸುವ ರಥವು ನಗರಸಭೆಯಿಂದ ಸಂಜೆ 4ಕ್ಕೆ ಬೃಹತ್ ಮೆರವಣಿಗೆ ಆರಂಭಿಸಲಿದೆ. ಮೆರವಣಿಗೆಯಲ್ಲಿ ಬಂಗಾಲಿ ಕ್ಯಾಂಪಿನ ಕಲಾವಿದರ ಡ್ರಮ್ ಸೆಟ್, ಡೊಳ್ಳು, ವಿವಿಧ ವಾದ್ಯಗಳ ತಂಡಗಳು ಭಾಗವಹಿಸಲಿವೆ. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷಧಾರಿಗಳಾಗಿ ಭಾಗವಹಿಸುವರು.
ಮೆರವಣಿಗೆ ನಗರಸಭೆಯಿಂದ ಬಸ್ ನಿಲ್ದಾಣ, ಬಸವವೃತ್ತ, ಹಳೆ ಬಜಾರ್ ಮೂಲಕ ವಾಸವಿ ಕಲ್ಯಾಣ ಮಂಟಪ ತಲುಪುವುದು. ನಂತರ ಬಹಿರಂಗ ಸಭೆ ಜರುಗುವುದು. ಸಭೆಯ ಸಾನ್ನಿಧ್ಯವನ್ನು ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ ವಹಿಸುವರು. ಮುಖ್ಯ ಭಾಷಣಕಾರರಾಗಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಆಗಮಿಸುವರು ಎಂದು ಇಲ್ಲೂರು ವಿವರಿಸಿದರು.
ವಿವಿಧ ಸ್ಪರ್ಧೆ: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ವೇಷಭೂಷಣ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ವಿಜೇತರಾದವರಿಗೆ ಜು.16ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಪ್ರಚಾರ ಸಮಿತಿ ಸದಸ್ಯ ಬೀರಪ್ಪ ಶಂಭೋಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸದಸ್ಯರಾದ ಬಸವರಾಜ ನಾಡಗೌಡ, ಶರಣೇಗೌಡ ವಿರುಪಾಪುರ, ಶರಣಪ್ಪ ಬರಸಿ, ಶರಣೇಗೌಡ ಗಿಣಿವಾರ, ಸತ್ಯನಾರಾಯಣ ಶೆಟ್ಟಿ, ಗೌತಮ ಮೆಹ್ತಾ, ಎನ್.ಅಮರೇಶ, ಗೌತಮಚಂದ್ ಶೇಠ್, ದುರುಗಪ್ಪ ಕಟಾಲಿ, ಎನ್.ಕೃಷ್ಣಮೂರ್ತಿ, ಪ್ರವೀಣ ಜೈನ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.