ರಾಯಚೂರು

ತುಂಗಭದ್ರಾ: ಇಂದಿನಿಂದ ಕಾಲುವೆಗಳಿಗೆ ನೀರು

Published On :

ಕನ್ನಡಪ್ರಭ ವಾರ್ತೆ, ಮುನಿರಾಬಾದ್, ಜು.9
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜು.10ರಿಂದ ನಿತ್ಯ 3,200 ಕ್ಯುಸೆಕ್‌ನಂತೆ ನ.30ರವರೆಗೆ ನೀರು ಹರಿಸಲಾಗುವುದು. ತುಂಗಭದ್ರಾ ಬಲದಂಡೆ ಕೆಳಮಟ್ಟದ ಹಾಗೂ ಮೇಲ್ಮಟ್ಟದ ಕಾಲುವೆಯಲ್ಲಿ ಜು.10ರಿಂದ ನ.30ರವರೆಗೆ ನಿತ್ಯ 600 ಕ್ಯುಸೆಕ್ ಹಾಗೂ 1,000 ಕ್ಯುಸೆಕ್ ನೀರು ಹರಿಸಲಾಗುವುದು. ರಾಯಾ ಮತ್ತು ಬಸವಣ್ಣ ಕಾಲುವೆಯಲ್ಲಿ ಜು. 10ರಿಂದ ನ. 30ರ ವರೆಗೆ ಸರಾಸರಿ 180 ಕ್ಯುಸೆಕ್ ನೀರು ಹರಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿ ಮಂಗಳವಾರ 97ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಡದಂಡೆ ಮುಖ್ಯ ಕಾಲುವೆಯ ಅಡಿ ಬರುವ ಗಣೇಕಲ್ ಜಲಾಶಯದ ಸಂಧನೂರ ಕೆರೆ ಹಾಗೂ ಇತರ ಕೆರೆಗಳಿಗೆ ಕುಡಿಯುವ ನೀರು ತುಂಬಿಸಲು ಜು.20ರವರೆಗೆ ಕಾಲುವೆಯ ಮೇಲ್ಭಾಗದ ಎಲ್ಲ ಗೇಟ್‌ಗಳನ್ನು ನಿಯಂತ್ರಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಹೇಳಿದರು.
ಪ್ರತಿ ವರ್ಷ ಅಚ್ಚುಕಟ್ಟು ಪ್ರದೇಶದ ರೈತರು ಹಿಂಗಾರು ಬೆಳೆಗಳಿಗೆ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನವಲಿ ಗ್ರಾಮದ ಸಮೀಪ ಸಮತೋಲನ ಜಲಾಶಯ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಲ್ಲಿನ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯನ್ನು ಅಗಲ ಮಾಡಿ, ಈಗಿರುವ 3,200 ಕ್ಯುಸೆಕ್ ನೀರಿನ ಸಾಮರ್ಥ್ಯವನ್ನು 12,500 ಕ್ಯುಸೆಕ್‌ಗೆ ಹೆಚ್ಚಿಸಿ, ಮಳೆಗಾಲದಲ್ಲಿ ಬಂದ ಅಧಿಕ ನೀರನ್ನು ಕಾಲುವೆ ಮೂಲಕ ನವಲಿ ಗ್ರಾಮಕ್ಕೆ ಕೊಂಡೊಯ್ದು, ಅಲ್ಲಿ 55 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕೆ  ಸುಮಾರು 5,000-8,000 ಕೋಟಿ ವೆಚ್ಚ ತಗುಲಲಿದೆ ಎಂದು ತಿಳಿಸಿದರು.
ಇದಲ್ಲದೆ ಮಾನವಿ ಹಾಗೂ ರಾಯಚೂರು ತಾಲೂಕಿನಲ್ಲಿ 4 ಟಿಎಂಸಿ ಸಾಮರ್ಥ್ಯದ ಎರಡು ಚೆಕ್ ಡ್ಯಾಂಗಳನ್ನು  ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 12 ಟಿಎಂಸಿ ನೀರು ಶೇಖರಣೆ ಮಾಡಲು 3 ಸಮತೋಲನ ಜಲಾಶಯ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದರಾದ ಸಣ್ಣ ಫಕೀರಪ್ಪ, ಶಾಂತಾ, ಶಾಸಕರಾದ ಬಾದರ್ಲಿ ಹಂಪನಗೌಡ, ರಾಘವೇಂದ್ರ ಹಿಟ್ನಾಳ, ಶ್ರೀರಾಮುಲು, ಅನೀಲ್ ಲಾಡ್, ಆನಂದ ಸಿಂಗ್, ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ್, ಅಧೀಕ್ಷಕ ಅಭಿಯಂತರ ಮಂಜಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.