ರಾಯಚೂರು

ಪಠ್ಯೇತರ ಚಟುವಟಿಕೆಯಿಂದ ಮಕ್ಕಳಲ್ಲಿ ಕ್ರಿಯಾಶೀಲತೆ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.14
ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯಸ್ವಾಮಿ ಹೇಳಿದರು.
ಅವರು ಜಿ.ಪಂ. ರಾಯಚೂರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾ ಆಡಳಿತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಗರದ ಸಂಗಮೇಶ್ವರ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಅಂಶ ಅಳವಡಿಸಿಕೊಳ್ಳಿ: 4 ರಿಂದ 10ನೇ ತರಗತಿಯ ಮಕ್ಕಳು ಚಲನಚಿತ್ರ ವೀಕ್ಷಿಸಬಹುದು. ಚಲನಚಿತ್ರವನ್ನು ನೋಡುವುದರ ಜೊತೆಗೆ ಅದರಲ್ಲಿ ಬರುವ ಉತ್ತಮ ಸನ್ನಿವೇಶಗಳನ್ನು, ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಿಇಒ ಕಚೇರಿ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎನ್.ಬಿ. ಕರಂಡಿ, ಶಿಕ್ಷಣ ಸಂಯೋಜಕ ಬಾಲಪ್ಪ ದಾಸರ, ಸಿಂಧನೂರು-ಕನಕನಗರ ಸಿಆರ್‌ಪಿ ವೀರೇಶ ಗೋನವಾರ, ಟಿ.ಬಿ.ಪಿ. ಕ್ಯಾಂಪ್ ಸಿಆರ್‌ಪಿ ಚನ್ನಬಸಪ್ಪ ಕುಂಬಾರ ಹೊಸಳ್ಳಿ(ಇಜೆ) ಸಿಆರ್‌ಪಿ ರಾಮದಾಸ, ಶಿಕ್ಷಕರಾದ ಅನಂತರಾವ್, ನಾರಾಯಣಾಚಾರ್ ಜೋಷಿ, ತಹಸೀಲ್ದಾರ್ ಕಾರ್ಯಾಲಯದ ಬಸಪ್ಪ ಮಾಂಡ್ರೆ, ಭಾರತೀಶ ಕೆ.ಆರ್. ಪಾಲ್ಗೊಂಡಿದ್ದರು.  
ಮಕ್ಕಳ ದಂಡು: ಮೊದಲನೇ ದಿನವೇ ಚಲನಚಿತ್ರ ವೀಕ್ಷಿಸಲು ಸಂಗಮೇಶ್ವರ ಹಾಗೂ ಶರಣಬಸವೇಶ್ವರ ಚಿತ್ರ ಮಂದಿರಗಳಲ್ಲಿ ಮಕ್ಕಳು ಬೆಳಗ್ಗೆ 8 ಗಂಟೆಗೆ ತಂಡೋಪತಂಡವಾಗಿ ಆಗಮಿಸಿದ್ದರು.
ಚಲನಚಿತ್ರೋತ್ಸವದ ವಿವರ: ಕರ್ನಾಟಕ ಸರಕಾರದ ಚಲನಚಿತ್ರಮಂಡಳಿ ಕೋರಿಕೆ ಮೇರೆಗೆ ಜುಲೈ-13ರಿಂದ ಜುಲೈ-18ರವರೆಗೆ ತಾಲೂಕಿನಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಯುತ್ತಿದ್ದು, ನಗರದ 2 ಚಿತ್ರಮಂದಿರಗಳಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಎರಡು ಮಕ್ಕಳ ಚಲನ ಚಿತ್ರಗಳು ಪ್ರದರ್ಶನವಿರುತ್ತದೆ.
ನಗರದ ಸಂಗಮೇಶ್ವರ ಚಿತ್ರಮಂದಿರದಲ್ಲಿ 'ಮ್ಯಾಜಿಕ್ ಅಜ್ಜಿ' ಚಲನಚಿತ್ರ ಶರಣಬಸವೇಶ್ವರ ಚಿತ್ರಮಂದಿರದಲ್ಲಿ, '106 ಕನಸು' ಎನ್ನುವ ಎರಡು ಮಕ್ಕಳ ಚಲನಚಿತ್ರ ಪ್ರದರ್ಶನವಾಗುತ್ತವೆ. ಜು. 18ರವರೆಗೆ ತಾಲೂಕಿನ 7000ಕ್ಕೂ ಹೆಚ್ಚು ಮಕ್ಕಳಿಗೆ ಚಲನಚಿತ್ರ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಯಾವ ಶಾಲೆಗಳ ಮಕ್ಕಳು ಯಾವ ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರ ವೀಕ್ಷಿಸಬೇಕು ಎನ್ನುವ ಕುರಿತಾದ ವಿಸ್ತೃತ ವೇಳಾಪತ್ರಿಕೆಯನ್ನು ಸಿಆರ್‌ಪಿಗಳ ಮೂಲಕ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ. ನಗರದ ಹಾಗೂ ತಾಲೂಕಿನ ಮುಖ್ಯೋಪಾಧ್ಯಾಯರು ತಮ್ಮ ಶಾಲಾ ಮಕ್ಕಳು ಚಲನಚಿತ್ರ ವೀಕ್ಷಿಸಲು ಅನುವು ಮಾಡಿಕೊಡಬೇಕು. ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪಾಲಕರು ಮತ್ತು ಮುಖ್ಯೋಪಾಧ್ಯಾಯರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯಸ್ವಾಮಿ ಮನವಿ ಮಾಡಿದರು.
ಮಕ್ಕಳ ಚಲನಚಿತ್ರೋತ್ಸವ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ಶಿಕ್ಷಣ ಸಂಯೋಜಕ ಬಾಲಪ್ಪ ದಾಸರ (99721 24144), ಕನಕನಗರ ಸಿಆರ್‌ಪಿ ವೀರೇಶ ಗೋನವಾರ (96200 91050)ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.