ಜೆಸ್ಕಾಂ ಕಚೇರಿ ಮುಂದೆ ಧರಣಿ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.15
ತಾಲೂಕಿನ ಕೆಂಗಲ್ ಗ್ರಾಮದ ರೈತರ ಮೇಲೆ ಜೆಸ್ಕಾಂ ಅಧಿಕಾರಿಗಳು ಅನಗತ್ಯವಾಗಿ ಹೆಚ್ಚುವರಿ ವಿದ್ಯುತ್ ಬಿಲ್ ಹಾಕಿರುವುದನ್ನು ಖಂಡಿಸಿ ದಲಿತ ರಕ್ಷಣಾ ವೇದಿಕೆಯ ನಗರದ ಪಿಡಬ್ಲ್ಯೂಡಿ ಕ್ಯಾಂಪ್ನಲ್ಲಿರುವ ಜೆಸ್ಕಾಂ ಕಚೇರಿ ಮುಂದೆ ಸೋಮವಾರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿತು.
ಗ್ರಾಮದ ಹುಸೇನಸಾಬ ಬಾಷಾಸಾಬ ಎನ್ನುವ ರೈತ 2000ದಲ್ಲಿ 60ಎಚ್ಪಿ ಸಾಮರ್ಥ್ಯದ ಕೆಎಲ್ಪಿ 85 ಸಂಖ್ಯೆಯ 63ರ ಟ್ರಾನ್ಸ್ಫಾರ್ಮರ್ನು ಜೆಸ್ಕಾಂ ಇಲಾಖೆಯಿಂದ ಪಡೆದಿದ್ದರು. ಇದಕ್ಕೆ ಮೂವರು ರೈತರು ಎಚ್ಪಿ ಮೋಟಾರ್ಗಳನ್ನು ಅಳವಡಿಸಿ ವಿದ್ಯುತ್ ಪಡೆದುಕೊಂಡಿದ್ದಾರೆ. ನಂತರ 60ರ ಪರಿವರ್ತಕ ತೆಗೆದು 100ರ ಪರಿವರ್ತಕವನ್ನು ಜೆಸ್ಕಾಂ ಇಲಾಖೆ ಈ ರೈತನ ಹೆಸರಿನಲ್ಲಿ ಅಳವಡಿಸಿದೆ. ಇದರ ಬಿಲ್ನು ಹುಸೇನಸಾಬ್ 2006ರಲ್ಲಿ ಪಾವತಿ ಮಾಡಿದ್ದಾರೆ.
ಹೆಚ್ಚಿನ ಬಿಲ್: ಆದರೆ ಅನಂತರ ಈ ಪರಿವರ್ತಕಕ್ಕೆ ಹೆಚ್ಚುವರಿಯಾಗಿ ಇನ್ನೂ ನಾಲ್ಕು ಜನ ರೈತರು 10 ಎಚ್ಪಿ ಮೋಟಾರುಗಳನ್ನು ಅಳವಡಿಸಿಕೊಂಡಿದ್ದರೂ, ಒಂದೇ ಮೀಟರ್ ನೀಡಲಾಗಿದೆ. ಹೀಗಾಗಿ 2013ರ ವೇಳೆಗೆ ಇದರ ಬಿಲ್ ರು. 12,01,610 ಬಂದಿದೆ. ಅದರೆ ಪರಿವರ್ತಕಕ್ಕೆ ನೀಡಿದ ಪರವಾನಗಿಗಿಂತ ಹೆಚ್ಚುವರಿ ನಾಲ್ಕು ಮೋಟಾರ್ಗಳ ಬಿಲ್ ಸೇರಿ 10 ಎಚ್ಪಿಯ 7 ಮೋಟಾರ್ಗಳ ಬಿಲ್ ಒಟ್ಟಿಗೆ ಬಂದಿರುವುದರಿಂದ ಹುಸೇನಸಾಬ್ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಕಿರುಕುಳ ನಿಲ್ಲಿಸಿ: ಈ ಅಸಮರ್ಪಕ ವಿದ್ಯುತ್ ಬಿಲ್ ರದ್ದುಗೊಳಿಸಿ, ರೈತರು ಬಳಕೆ ಮಾಡಿದ ವಿದ್ಯುತ್ ಬಿಲ್ ನೀಡಬೇಕು. ಅಕ್ರಮ-ಸಕ್ರಮ ಯೋಜನೆಯಲ್ಲಿ ಮಂಜೂರಾದ ಮೋಟಾರುಗಳನ್ನು ಮುಂದುವರೆಸಬೇಕು. ಈ ಯೋಜನೆಯಡಿ ಜೆಸ್ಕಾಂ ಇಲಾಖೆಗೆ ಹಣ ಪಾವತಿಸಿರುವ ರೈತರಿಗೆ 10 ಎಚ್ಪಿ ಮೋಟಾರುಗಳನ್ನು ಪ್ರಾರಂಭಿಸಲು ಪರವಾನಗಿ ನೀಡಬೇಕು. ರೈತರಿಗೆ ನೀಡುತ್ತಿರುವ ಅನಗತ್ಯ ಕಿರುಕುಳವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಾಯಿತು. ನ್ಯಾಯ ದೊರೆವವರೆಗೆ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ವೇದಿಕೆಯ ಗುಲ್ಬರ್ಗ ವಿಭಾಗೀಯ ಅಧ್ಯಕ್ಷ ಹನುಮಂತ ಕೆ. ಹಂಚಿನಾಳ ಎಚ್ಚರಿಸಿದ್ದಾರೆ.
ಧರಣಿಯಲ್ಲಿ ಕೆ. ರಾಘವೇಂದ್ರ ಸೋಮಲಾಪುರ, ಸಂಗಮೇಶ ಮುಳ್ಳೂರು, ಹುಸೇನಪ್ಪ ಟಿ., ಬಸವರಾಜ ಭೋವಿ ಸಿದ್ರಾಂಪೂರ, ರಮೇಶ ಭೋವಿ, ಲಿಂಗರಾಜ ಗುಂಜಳ್ಳಿ, ವೀರೇಶ ಸಿದ್ರಾಂಪೂರ, ಹೊಳೆಯಪ್ಪ ದಿದ್ದಗಿ, ಯಮನೂರಪ್ಪ, ರಂಗಸ್ವಾಮಿ, ಅಡಿವೆಪ್ಪ, ಆರೋಗ್ಯರಾಜ ವಕೀಲ, ಕುಮಾರ ಬಸಾಪುರ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

