ನಗರಸಭೆ ನಿರ್ಲಕ್ಷ್ಯಕ್ಕೆ ಮಳೆ ನೀರು ಅವಾಂತರ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.16
ನಗರಸಭೆಯ ಕಾರ್ಯವೈಖರಿಗೆ ಮಂಗಳವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದಾದ ಅವಾಂತರಗಳು ಸಾಕ್ಷಿಯಾದವು.
ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡರೆ, ವಾಹನ ಸವಾರರು ರಸ್ತೆಗಿಳಿದಿದ್ದೇ ತಪ್ಪಾಯಿತು ಎಂಬಂತೆ ಬೇಸರಗೊಂಡಿದ್ದು ಕಂಡುಬಂದಿತು.
ನಗರದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸುರಿದ ಮಳೆಯಿಂದಾಗಿ ಕೊಳೆ ತುಂಬಿಕೊಂಡಿದ್ದ ನಗರದ ಚರಂಡಿಯ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದರಿಂದ ಜನತೆ ಆತಂಕಕ್ಕೆ ಒಳಗಾದರು. ಅದೇ ರೀತಿ ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚಿನ ಎತ್ತರದಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪ್ರಯಾಸಪಡುತ್ತಲೇ ಸಾಗುವಂತಾಯಿತು.
ಅಸ್ತವ್ಯಸ್ತ: ಶಾಲೆಗೆ ತೆರಳಿದ್ದ ಮಕ್ಕಳು ಕೊಳಚೆ ನೀರಿನಲ್ಲಿಯೇ ಏಳುತ್ತಾ ಬೀಳುತ್ತಾ ಮನೆಗೆ ತಲುಪಿದ್ದು ಕಂಡುಬಂದಿತು. ನಗರದ ಹನುಮಾನ್ ಟಾಕೀಸ್‌ನಿಂದ ನೇತಾಜಿ ನಗರ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಸಿಯಾತಲಾಬ್, ಬಂಗೀಕುಂಟಾ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ನಗರದಲ್ಲಿ ವಿದ್ಯುತ್ ಕೈಕೊಟ್ಟಿದ್ದರಿಂದ ನಾಗರಿಕರು ಪರದಾಡಿದರು. ಆಳೆತ್ತರದ ನೀರಿನಲ್ಲಿ ಪಾದಚಾರಿಗಳು ಪ್ರಯಾಸಪಟ್ಟು ನಗರಸಭೆಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುತ್ತಲೇ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಿರ್ಲಕ್ಷ್ಯ: ನಗರಸಭೆಯು ಕಾಲದಿಂದ ಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು ಅಲ್ಪ ಮಳೆ ಸುರಿದರೂ ಚರಂಡಿಗಳು ಉಕ್ಕಿ ಹರಿಯಲು ಕಾರಣವಾಗುತ್ತಿದೆ. ಅದರಿಂದ ರಸ್ತೆಗೆ ಹರಿಯುವ ಕೊಳಚೆ ನೀರು ವಾಹನ ಸವಾರರಿಗೆ ಹಾಗೂ ದಾರಿಹೋಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ.
ಭಾರೀ ಮಳೆ ಸುರಿದರೆ ರಸ್ತೆಗಳು ಕಾಣದಷ್ಟು ನೀರು ಉಕ್ಕಿ ಹರಿಯುವ ಮೂಲಕ ತಗ್ಗು ಪ್ರದೇಶದ ನಿವಾಸಿಗಳಿಗೆ ಸಂಕಷ್ಟ ಸೃಷ್ಟಿಯಾಗುತ್ತದೆ. ಮಂಗಳವಾರವೂ ಇಂಥದ್ದೇ ಪರಿಸ್ಥಿತಿ ಕಂಡುಬಂದಿತು. ಕೇವಲ ಒಂದೆರಡು ಗಂಟೆ ಸುರಿದ ಮಳೆಗೆ ಎಲ್ಲೆಡೆಯ ಚರಂಡಿಗಳಿಂದ ಉಕ್ಕಿ ಹರಿದ ನೀರು ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನುಗ್ಗಿದರೆ, ಮತ್ತೊಂದೆಡೆ ರಸ್ತೆಗಳಲ್ಲಿ ಉಕ್ಕಿ ಹರಿಯುವ ಮೂಲಕ ಜನತೆಗೆ ಆತಂಕ ತಂದಿತು.
ನಗರಸಭೆ ಆಡಳಿತದ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಮಳೆಗಾಲದ ಸಂದರ್ಭದಲ್ಲಿ ಇಂಥ ಪರಿಸ್ಥಿತಿ ತೀರಾ ಸಾಮಾನ್ಯ ಎಂಬ ಆರೋಪ ವ್ಯಾಪಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

