ರಾಯಚೂರು

ಪಡಿತರ ಚೀಟಿಗಾಗಿ ಮನೆ ಕರ ವಸೂಲು; ವಿರೋಧ

Published On :

ರಾಯಚೂರು: ತಾಲೂಕಿನ ಯಾಪಲದಿನ್ನಿ ಗ್ರಾಪಂ ವ್ಯಾಪ್ತಿಯ 9 ಗ್ರಾಮಗಳಲ್ಲಿ ಪಡಿತರ ಚೀಟಿ ನವೀಕರಣಕ್ಕೆ ಮತ್ತು ಹೊಸ ಪಡಿತರ ಚೀಟಿ ಪಡೆಯಲು ತೆರಳುವ ಗ್ರಾಮಸ್ಥರಿಂದ ಗ್ರಾಪಂಗಳು ಮನೆ ಕರ ವಸೂಲು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
ಈ ಕುರಿತು ಜಿಪಂ ಸಿಇಒಗೆ ಇತ್ತೀಚೆಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ರಂಗಪ್ಪ ಯಾಪಲದಿನ್ನಿ, ಕಾರ್ಯದರ್ಶಿ ಕೆ.ಜಿ. ವೀರೇಶ್ ಮತ್ತಿತರರು, ಗ್ರಾಮೀಣ ಭಾಗದಲ್ಲಿ ನಿವಾಸಿಗಳು ಪಡಿತರ ಚೀಟಿಗಳನ್ನು ಪಡೆಯಲು ತೆರಳಿದರೆ ಮನೆ ಕರ ಪಾವತಿಸಿದ ನಂತರದಲ್ಲಿಯೇ ಭಾವಚಿತ್ರ ಮತ್ತು ಬಯೋವುಟ್ರಿಕ್ ಪಡೆಯುವಂಥ ಕಾರ್ಯ ಮಾಡಲಾಗುತ್ತಿದೆ. ಅದರಿಂದ ಜನತೆಗೆ ತೊಂದರೆಯಾಗಿದೆ ಎಂದು ದೂರಿದರು.
ಕಳೆದ ಎರಡು ವರ್ಷ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯಿಂದ ಗ್ರಾಮೀಣ ಭಾಗದ ಜನತೆ ಕಂಗೆಟ್ಟಿದ್ದಾರೆ. ಆರ್ಥಿಕವಾಗಿ ನಷ್ಟದಲ್ಲಿದ್ದು ಗ್ರಾಪಂಗಳು ಈ ವೇಳೆ ಮನೆ ಕರ ಪಾವತಿಸಿದರೆ ಪಡಿತರ ಚೀಟಿ ಪ್ರಕ್ರಿಯೆಯಲ್ಲಿ ಹೆಸರು ನೋಂದಾಯಿಸುವಂಥ ಕಾರ್ಯಕ್ಕೆ ತೊಡಗಿದ್ದು, ಕೂಡಲೇ ಆಡಳಿತ ಮಧ್ಯಪ್ರವೇಶಿಸಿ ಬಡವರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಕೂಡಲೇ ಜಿಪಂ ಆಡಳಿತ ಗ್ರಾಪಂಗಳಿಗೆ ಸೂಕ್ತ ನಿರ್ದೇಶನ ನೀಡಿ ಕನಿಷ್ಠ 100 ಮನೆ ಕರ ಪಡೆದು ಪಡಿತರ ಚೀಟಿ ಪಡೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಯವರ್ಧನ್, ಹನಮಂತು, ನರಸಿಂಹಲು, ಜಂಗ್ಲೆಪ್ಪ ಸೇರಿ ಅನೇಕರಿದ್ದರು.


ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ; ಆರೋಪ
ರಾಯಚೂರು: ನಗರದ ಬ್ರೇಸ್ತವಾರಪೇಟೆಯ ಮಹಿಳಾ ಗ್ರಾಹಕರ ಸಹಕಾರಿ ಸಂಘದಿಂದ ನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರಧಾನ್ಯ ವಿತರಣೆಯಲ್ಲಿ ಭಾರೀ ಅಕ್ರಮ ಎಸಗಲಾಗಿದೆ ಎಂದು ಪ್ರಗತಿಪರ ಕನ್ನಡಿಗರ ಸಮಿತಿ ಆರೋಪಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ದೂರು ಸಲ್ಲಿಸಿರುವ ಸಂಘಟನೆಯ ಪ್ರಮುಖರು, ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು 904 ವಿವಿಧ ಪಡಿತರ ಕಾರ್ಡುಗಳಿದ್ದು ಮಾಲೀಕರು ಎಲ್ಲ ಪಡಿತರದಾರರಿಗೆ ಸಮರ್ಪಕವಾಗಿ ಆಹಾರಧಾನ್ಯ ವಿತರಿಸುತ್ತಿಲ್ಲ. ಬದಲಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದೆ.
ಸರ್ಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಯನ್ನು ತೆರೆಯದೇ ಮನಬಂದಾಗ ತೆರೆಯಲಾಗುತ್ತದೆ. ಅದರಿಂದಾಗಿ ಬಡವರಿಗೆ ಸೂಕ್ತ ಸಮಯದಲ್ಲಿ ಪಡಿತರ ಧಾನ್ಯ ದೊರೆಯುತ್ತಿಲ್ಲ. ಕಾರಣ ಕೂಡಲೇ ಆಡಳಿತವು ಅಕ್ರಮದಲ್ಲಿ ತೊಡಗಿರುವ ನ್ಯಾಯಬೆಲೆ ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಈರೇಶ್, ಪಿ.ಬೋಳಬಂಡಿ, ರಾಮು, ವಿಜಯಕುಮಾರ್, ಶಿವಪ್ಪ, ರವಿ, ಉರುಕುಂದಾ, ಚಂದ್ರಶೇಖರ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.