ಕೃಷ್ಣೆಯಲ್ಲಿ ಪ್ರವಾಹ; ನಡುಗಡ್ಡೆಯಲ್ಲಿ ಜನತೆ
ರಾಯಚೂರು/ದೇವದುರ್ಗ: ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿದೆ. ಜಿಲ್ಲೆಯ ಲಿಂಗಸ್ಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳಲ್ಲಿ ಇದರಿಂದ ಆತಂಕದ ಸ್ಥಿತಿಯಿದೆ. ಲಿಂಗಸ್ಗೂರು ತಾಲೂಕಿನ ಮ್ಯಾದರಗಡ್ಡಿ ನಡುಗಡ್ಡೆಯಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಆಡಳಿತ ಮುಂದಾಗಿದೆ. ದೇವದುರ್ಗ- ಗುಲ್ಬರ್ಗ ಮಧ್ಯೆ ಸಂಚಾರವನ್ನು ಮುಂಜಾಗ್ರತೆ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಕೃಷ್ಣಾ ನೀರು ಸುತ್ತುವರಿದಿದೆ.
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿಸಿದೆ. ಪರಿಣಾಮ 2.40 ಲಕ್ಷ ಕ್ಯುಸೆಕ್ಗೂ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ನದಿ ತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ನಡುಗಡ್ಡೆ ಬಿಟ್ಟುಬರಲು ನಕಾರ: ಈ ಮಧ್ಯೆ ಶುಕ್ರವಾರ ಮ್ಯಾದರಗಡ್ಡಿ ಗ್ರಾಮದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ತಾಲೂಕು ಆಡಳಿತ ಹರಸಾಹಸಪಡುತ್ತಿದೆ. ಯಾಂತ್ರಿಕ ಬೋಟ್ಗಳನ್ನು ಬೆಳಗ್ಗೆ ಆಡಳಿತ ತರಿಸಿದರೂ ನಡುಗಡ್ಡೆಯಲ್ಲಿ ಸಿಲುಕಿರುವವರು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಧಾವಿಸಲು ನಿರಾಕರಿಸಿದ್ದರಿಂದ ಅಧಿಕಾರಿಗಳು ಶುಕ್ರವಾರ ಸಂಜೆವರೆಗೆ ಮನವೊಲಿಕೆ ಕಾರ್ಯದಲ್ಲಿದ್ದರು.
ಇದೇ ವೇಳೆ ಸ್ಥಳದಲ್ಲಿ ಬೀಡುಬಿಟ್ಟಿರುವ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹೆಲಿಕಾಪ್ಟರ್ ತರಿಸುವ ಯೋಚನೆ ಮಾಡಿದ್ದರೂ ಜನತೆ ನಡುಗಡ್ಡೆಯನ್ನು ಬಿಟ್ಟು ಹೊರಬರಲು ನಿರಾಕರಿಸಿರುವುದು ಆಡಳಿತಕ್ಕೆ ಚಿಂತೆ ಹೆಚ್ಚಿಸಿತು.
40 ಕಿಮೀ ಸುತ್ತುಬಳಸಿ ಪ್ರಯಾಣ: ಲಿಂಗಸ್ಗೂರು ತಾಲೂಕಿನ ಕಡದರಗಡ್ಡೆ, ಯಳಗುಂದಿ, ಯರಗೋಡಿ, ಹಂಚಿನಾಳ ಗ್ರಾಮಗಳೊಂದಿಗೆ ಗುರುವಾರ ರಾತ್ರಿಯಿಂದಲೇ ಸಂಪರ್ಕ ಕಡಿತವಾಗಿದೆ. ಈ ನಾಲ್ಕು ಗ್ರಾಮಗಳ ಜನತೆ 40 ಕಿಮೀ ಸುತ್ತು ಬಳಸಿ ಪ್ರಯಾಣಿಸುವಂತಾಗಿದೆ.
ಮುಂಜಾಗ್ರತೆ: ಅಲ್ಲದೆ ಪ್ರವಾಹದಿಂದ ದೇವದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕ ನಿರ್ಮಾಣ ವಾಗಿದೆ. ದೇವದುರ್ಗ- ಗುಲ್ಬರ್ಗ ಮಧ್ಯೆ ಸಂಪರ್ಕ ಕೊಂಡಿಯಂತಿರುವ ಹೂವಿನಹೆಡಗಿ ಸೇತುವೆಯು ಮುಳುಗಡೆಯ ಭೀತಿಯಲ್ಲಿದ್ದು, ಮುಂಜಾಗ್ರತೆ ಕ್ರಮವಾಗಿ ಸೇತುವೆ ಮೇಲೆ ಸಂಚಾರ ನಿಷೇಧಿಸಲಾಗಿದೆ. ಅದರಿಂದ ಗುಲ್ಬರ್ಗಕ್ಕೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಅದೇ ರೀತಿ ದೇವದುರ್ಗ ತಾಲೂಕಿನ ಮ್ಯಾದರಗೋಳ, ಹಿರೇಕೂಡ್ಲಗಿ, ಅಪ್ರಾಳ, ಕರ್ಕಿಹಳ್ಳಿ, ಅಂಜಳ, ಅಂಚೆ ಸೂಗೂರು, ಹೂವಿನಹೆಡಗಿ, ಜೋಳದಹೆಡಗಿ ಮತ್ತಿತರ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದಿಂದ ಆತಂಕ ಸ್ಥಿತಿ ಎದುರಾಗಿದೆ. ತಾಲೂಕಿನ ಕೊಪ್ಪರ ಗ್ರಾಮದ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನವನ್ನು ಕೃಷ್ಣಾ ನದಿ ನೀರು ಸುತ್ತುವರಿದಿದೆ.
ಭಕ್ತರಲ್ಲಿ ಆತಂಕ: ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ದೇವಸ್ಥಾನದ ಅರ್ಚಕರಾದ ತಿರುಮಲಾಚಾರ್ಯ ಅವರು ಕೃಷ್ಣಾ ನದಿ ಪ್ರವಾಹದಿಂದಾಗಿ ದೇವಾಲಯದಲ್ಲಿ ಶುಕ್ರವಾರ ಪ್ರಯಾಸದಿಂದಲೇ ಪೂಜಾ ಕೈಂಕರ್ಯ ಪೂರ್ಣಗೊಳಿಸಲಾಗಿದೆ. ದೇವಸ್ಥಾನ ಜಲಾವೃತಗೊಂಡಿದ್ದರಿಂದ ಭಕ್ತರು ಹಾಗೂ ಕೊಪ್ಪರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಜುರಾಲಾ ಅಣೆಕಟ್ಟೆ ಹಿನ್ನೀರಿಂದಲೂ ತೊಂದರೆ: ಈ ಮಧ್ಯೆ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿಯೂ ಕೃಷ್ಣಾದಲ್ಲಿನ ಪ್ರವಾಹ ಜನರಲ್ಲಿ ಭೀತಿ ಮೂಡಿಸಿದೆ. ಆಂಧ್ರದ ಮಹೆಬೂಬ್ ನಗರ ಜಿಲ್ಲೆಯ ಗದ್ವಾಲ್ ಬಳಿ ನಿರ್ಮಿಸಿರುವ ಜುರಾಲಾ ಅಣೆಕಟ್ಟೆಯ ಹಿನ್ನೀರಿನಿಂದಾಗಿ ತಾಲೂಕಿನ ಆತ್ಕೂರು, ಬುರ್ದಿಪಾಡ ಗ್ರಾಮಗಳ ರೈತರು ಆತಂಕಕ್ಕೆ ಸಿಲುಕಿದ್ದಾರೆ.
ನಾರಾಯಣಪುರ ಜಲಾಶಯದಿಂದ ಲಕ್ಷಾಂತರ ಕ್ಯುಸೆಕ್ ನೀರು ಹೊರಹರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಈ ಗ್ರಾಮಗಳ ರೈತರು ನದಿ ತೀರದಲ್ಲಿ ಅಳವಡಿಸಿದ್ದ ಕೃಷಿಗೆ ಬಳಸುತ್ತಿದ್ದ ಪಂಪ್ಸೆಟ್ಗಳನ್ನು ಮುಂಚಿತವಾಗಿಯೇ ಸ್ಥಳಾಂತರಿಸಿದ್ದು ಹೆಚ್ಚಿನ ಹಾನಿ ತಪ್ಪಿಸಿದೆ. ಅದೇ ರೀತಿ ಆಂಧ್ರವು ಜುರಾಲಾ ಅಣೆಕಟ್ಟೆಯ 11 ಗೇಟುಗಳಿಂದ ನೀರು ಹೊರಹರಿಸುತ್ತಿರುವುದು ಹಿನ್ನೀರಿನಿಂದ ಬಾಧಿತ ಗ್ರಾಮಗಳ ಜನತೆಗೆ ಕೊಂಚ ಮಟ್ಟಿಗಿನ ನಿರಾಳತೆ ತಂದಿದೆ.
ಎಚ್ಚರಿಕೆಯಿಂದಿರಲು ಸೂಚನೆ: ಮುಂದಿನ ದಿನಗಳಲ್ಲಿ ನಾರಾಯಣಪುರ ಜಲಾಶಯದಿಂದ ಮತ್ತಷ್ಟು ನೀರು ಹೊರಹರಿಸಿದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಯಿದ್ದು, ಜನತೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಈಗಾಗಲೇ ಸೂಚಿಸಿದೆ. ಎಲ್ಲ ತಾಲೂಕುಗಳ ಪ್ರಮುಖ ಅಧಿಕಾರಿಗಳು ಪೂರ್ವಾನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

