ರಾಯಚೂರು

ಅಕ್ರಮ ಕಾಂಪೌಂಡ್ ನಿರ್ಮಾಣಕ್ಕೆ ವಿರೋಧ

Published On :

ಕನ್ನಡಪ್ರಭ ವಾರ್ತೆ   ಸಿಂಧನೂರು   ಜು.30
ನಗರದ ಆದರ್ಶ ಕಾಲೋನಿಯ ಸಹನಾ ಆಸ್ಪತ್ರೆಯ ಹತ್ತಿರ ತೋಟಗಾರಿಕೆ ಇಲಾಖೆಯವರು ಇರುವ ರಸ್ತೆಯನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಈ ಭಾಗದ ಜನತೆಗೆ ತೀವ್ರ ತೊಂದರೆಯಾಗುತ್ತದೆ ಎಂದು ಆದರ್ಶ ಕಾಲೋನಿಯ ನಿವಾಸಿಗಳಾದ ನಿವೃತ್ತ ಎಂಜಿನಿಯರ್ ಕೆ. ಗೋವಿಂದರೆಡ್ಡಿ, ರೈತ ಮುಖಂಡ ನಾಗರೆಡ್ಡಪ್ಪ ಸಾಹುಕಾರ, ಡಾ. ಸುಧೀರ ರಾಧಾಕೃಷ್ಣ, ಸಂಸ್ಕಾರ ಭಾರತಿ ಗೌರವಾಧ್ಯಕ್ಷ ವೆಂಕಣ್ಣ ಜೋಷಿ, ಕೆ. ರಾಜಶೇಖರ ರೆಡ್ಡಿ, ಕೆ.ಆರ್. ರೆಡ್ಡಿ, ಎಸ್. ಬಸವರಾಜ ಮತ್ತಿತರರು ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಪತ್ರ ಬರೆದು ಕಾಂಪೌಂಡ್ ಕಟ್ಟುವುದನ್ನು ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಮೊದಲು ಬಂಡಿ ದಾರಿ: ಕುಷ್ಟಗಿ ರಸ್ತೆಯಿಂದ ಈ ಆದರ್ಶ ಕಾಲೋನಿಗೆ ಹೋಗುವ ರಸ್ತೆ ಈ ಮೊದಲು ಬಂಡಿ ದಾರಿಯಾಗಿತ್ತು. ಸುಮಾರು 20 ಅಡಿ ಅಗಲದ ಜಾಗೆಯನ್ನು ಸಾರ್ವಜನಿಕರು ರಸ್ತೆಗಾಗಿ ಬಿಟ್ಟಿದ್ದಾರೆ. ಕಾಡಾ ಹಾಗೂ ತಾಪಂ ಕಚೇರಿಯವರು ತಮ್ಮ ಜಾಗವನ್ನು ರಸ್ತೆಗೆ ಬಿಟ್ಟಿದ್ದಾರೆ. ತೋಟಗಾರಿಕೆ ಇಲಾಖೆಯವರು ತಮ್ಮ ಸ್ವಲ್ಪ ಜಮೀನನ್ನು ಎಪಿಎಂಸಿ ಯವರಿಗೆ ಹಣ್ಣಿನ ಮಾರುಕಟ್ಟೆ ನಿರ್ಮಿಸಲು ಮಾರಾಟ ಮಾಡಿರುತ್ತಾರೆ. ಅವರು ಪಶ್ಚಿಮಕ್ಕೆ ಗೇಟ್ ಇಟ್ಟುಕೊಂಡು ಇದೇ ರಸ್ತೆಯನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ರಸ್ತೆಯೂ ಸಹನಾ ಆಸ್ಪತ್ರೆವರೆಗೆ ಉತ್ತರದಿಂದ ದಕ್ಷಿಣಕ್ಕೆ ಮುಗಿಯುತ್ತದೆ. ಸಹನಾ ಆಸ್ಪತ್ರೆಯಿಂದ 30 ಅಡಿ ರಸ್ತೆ ಇರುತ್ತದೆ. ಆದರೆ ತೋಟಗಾರಿಕೆ ಇಲಾಖೆಯವರು ಈ ರಸ್ತೆಯನ್ನು ಅತಿಕ್ರಮಣ ಮಾಡಿ ಕಾನೂನುಗಳನ್ನು ಉಲ್ಲಂಘನೆ ಮಾಡಿ ಕಾಂಪೌಂಡ್ ಕಟ್ಟಲು ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ರಸ್ತೆ ಬಿಟ್ಟು ಕಾಂಪೌಂಡ್ ನಿರ್ಮಾಣಕ್ಕೆ ನೋಟಿಸ್: ಈ ಹಿಂದೆ ಈ ರಸ್ತೆಯನ್ನು ಇಲಾಖೆಯವರು ಅತಿಕ್ರಮಣ ಮಾಡಿದಾಗ ಇಲ್ಲಿಯ ನಾಗರಿಕರು ಪ್ರತಿಭಟಿಸಿದರು. ಆಗ ಅಂದಿನ ಪೌರಾಯುಕ್ತರು, ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸ್ಥಳಕ್ಕೆ ಬಂದು ರಸ್ತೆ ಅತಿಕ್ರಮಣ ಬಂದ್ ಮಾಡಿ ಒಂಬತ್ತು ಮೀಟರ್ ಅಗಲದ ರಸ್ತೆ ಬಿಟ್ಟು ಕಾಂಪೌಂಡ್ ನಿರ್ಮಾಣ ಮಾಡಲು ನೋಟಿಸ್ ನೀಡಿದ್ದರು. ನಗರಯೋಜನಾ ಪ್ರಾಧಿಕಾರದವರು ತಮ್ಮ ಪರವಾನಗಿ ಇಲ್ಲದೆ ರಸ್ತೆ ನಿರ್ಮಾಣ ಮಾಡಬಾರದೆಂದು ನೋಟಿಸ್ ನೀಡಿದ್ದರು. ಆದರೆ ಜು.22 ರಂದು ತೋಟಗಾರಿಕೆ ಇಲಾಖೆಯವರು ಯಾವುದೇ ಪರವಾನಗಿ ಇಲ್ಲದೆ, ಯಾರಿಗೂ ತಿಳಿಸದೆ ರಸ್ತೆಯಲ್ಲಿ ಪಿಲ್ಲರ್ಗಳನ್ನು ಕಡಿದು, ನೀರಿನ ಪೈಪ್ಗಳನ್ನು ಒಡೆದು ಹಾಕಿ ನಾಗರಿಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈ ರಸ್ತೆಯಿಂದಲೇ ಡಾ. ರಾಧಾಕೃಷ್ಣ ಆಸ್ಪತ್ರೆ, ಸಹನಾ ಮಕ್ಕಳ ಆಸ್ಪತ್ರೆ, ಆಕ್ಸ್ಫರ್ಡ್, ಸಂಕೇತ ಕಾಲೇಜ್, ಕ್ರೈಸ್ತ ಪ್ರಾರ್ಥನ ಮಂದಿರ, ಅಂಬಾದೇವಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪಗಳಿಗೆ ಸಾರ್ವಜನಿಕರು ತಿರುಗಾಡುತ್ತಾರೆ. ಪ್ರತಿನಿತ್ಯ ಸಾವಿರಾರು ವಾಹನಗಳು, ನಾಗರಿಕರು ಸಂಚರಿಸುತ್ತಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಶಾಸಕರು ಸಂಬಂಧಪಟ್ಟವರಿಗೆ ಕಾಂಪೌಂಡ್ ಕಾಮಗಾರಿ ನಿಲ್ಲಿಸಲು ಕೂಡಲೇ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.