ಪರಮಾತ್ಮನ ಅನುಗ್ರಹದಿಂದ ಯಶಸ್ಸು ಸಾಧ್ಯ: ಶ್ರೀಗಳು
ಕನ್ನಡಪ್ರಭ ವಾರ್ತೆ, ರಾಯಚೂರು, ಜು.31
ಪರಮಾತ್ಮನ ಅನುಗ್ರಹದಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಉಡುಪಿಯ ಫಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ರಾತ್ರಿ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ತಮ್ಮ 35ನೇ ಚಾತುರ್ಮಾಸ್ಯ ವ್ರತ ಉದ್ಘಾಟನೆ ನೆರವೇರಿಸಿ ಮಾತನಾಡಿ, ಧರ್ಮ ಮತ್ತು ಜ್ಞಾನ ಪ್ರಸಾರ ಕಾರ್ಯದಿಂದ ಮಾತ್ರ ಪ್ರಗತಿ ಸಾಧ್ಯ.ಧರ್ಮ, ಸಂಸ್ಕಾರಗಳ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಚಾತುರ್ಮಾಸ್ಯ ವ್ರತ ಅನುಷ್ಠಾನ ನೆರವಾಗಲಿದೆ ಎಂದರು.
ಭಗವಂತನ ಅನುಗ್ರಹ ಅವಶ್ಯ: ಭಗವಂತನ ಕರುಣೆಯಿಲ್ಲದೇ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು. ಜೀವನದಲ್ಲಿ ಸಾರ್ಥಕ್ಯ ಕಾಣಲು ಭಗದವಂತನ ಪ್ರೇರಣೆ ಬೇಕೇ ಬೇಕು. ಜೀವನದ ಪಯಣದಲ್ಲಿ ಭಗವಂತ ಪ್ರತಿಯೊಂದೂ ಹಂತದಲ್ಲಿ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸುತ್ತಾನೆ. ಭಗವಂತ ನೀಡಿದ ದೇಹವನ್ನು ಆತನ ಪೂಜೆಗೆ ಸಮರ್ಪಿಸುವಂತೆ ಸಲಹೆ ನೀಡಿದರು.
ದಾಸರು, ಯತಿಗಳು ನೆಲೆಸಿದ ಬೀಡು ರಾಯಚೂರು. ಇಂಥ ಜಿಲ್ಲೆಯಲ್ಲಿ ತಮ್ಮ ಚಾತುರ್ಮಾಸ್ಯ ವ್ರತ ಅನುಷ್ಠಾನ ಕೈಗೊಂಡಿದ್ದು ತಮಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿನ ನಿವಾಸಿಗಳು ಪುಣ್ಯವಂತರಾಗಿದ್ದು, ದಾಸರ ನಾಡಿನಲ್ಲಿ ವಾಸವಾಗಿರುವುದೇ ಬಹುದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.
ಧರ್ಮದ ಜಾಗೃತಿ ಮೂಡಿಸಬೇಕಿದೆ: ದೇವರು ನೀಡಿದ ಶರೀರವನ್ನು ದೇವರ ಸೇವೆಗೆ ಮುಡಿಪಾಗಿರಿಸುವಂತೆ ಸಲಹೆ ನೀಡಿದ ಅವರು, ನಿರ್ದಿಷ್ಟ ಗುರಿಯಿಟ್ಟುಕೊಂಡು ಬದುಕಿನಲ್ಲಿ ಭಗವಂತನ ನಾಮಸ್ಮರಣೆ ಮಾಡುತ್ತಾ ಮುಂದೆ ಸಾಗಿದರೆ ಗುರಿ ತಲುಪುವುದು ಕಷ್ಟವಾಗದು. ಜ್ಞಾನಸತ್ರ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸುವ ಮೂಲಕ ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಹ್ಲಾದಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜೋಡು ವೀರಾಂಜನೇಯ ದೇವಸ್ಥಾನದ ಪ್ರಗತಿಯಲ್ಲಿ ನೆರವಾದ ಎಲ್ಲರನ್ನೂ ಸ್ಮರಿಸಿದರು. ಸಮಾರಂಭದಲ್ಲಿ ವೇದಪಂಡಿತರು, ವಿದ್ವಾಂಸರು, ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಶೋಭಾಯಾತ್ರೆ: ಇದಕ್ಕೂ ಪೂರ್ವದಲ್ಲಿ ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಿಂದ ಜೋಡು ವೀರಾಂಜನೇಯ ದೇವಸ್ಥಾನದವರೆಗೆ ಉಡುಪಿಯ ಫಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರ ಶೋಭಾಯಾತ್ರೆ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

