ಭಾರಿ ಮಳೆ; ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಕನ್ನಡಪ್ರಭ ವಾರ್ತೆ , ಸಿಂಧನೂರು , ಜೂ.1
ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಗುಡಿಸಲು ಹಾಗೂ ಶೆಡ್‌ನ ಮನೆಗಳು ನೀರಿನಿಂದ ಆವೃತವಾದವು. ಇದರಿಂದಾಗಿ ಜನರು ರಾತ್ರಿಯಲ್ಲಾ ನಿದ್ದೆಯಿಲ್ಲದೆ ಜಾಗರಣೆ ಮಾಡುವ ಸ್ಥಿತಿ ನಿರ್ಮಾಣವಾಯಿತು.
ಶೆಡ್‌ಗಳಿಗೆ ನೀರು: ನಗರದ ಶಾದಿಮಹಲ್, ಖದಿರಿಯಾ ಕಾಲೋನಿ, ಸುಕಾಲಪೇಟೆ, ಜನತಾ ಕಾಲೋನಿ, ಹಳೆ ಬಜಾರ, ಬಪ್ಪೂರ ರಸ್ತೆ, ಶರಣಬಸವೇಶ್ವರ ನಗರ, ಮಹಿಬೂಬಿಯಾ ಕಾಲೋನಿ, ಉಪ್ಪಾರ ಓಣಿ ಮತ್ತಿತರ ಕಡೆಗಳಲ್ಲಿ ನೀರು ಹೋಗಿದೆ. ಕೋಟೆ ಬಡಾವಣೆಯಲ್ಲಿನ ಶಾದಿಮಹಲ್ ಹಿಂದೆ ಇರುವ 20ಕ್ಕೂ ಹೆಚ್ಚು ಶೆಡ್‌ಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯಿಡಿ ಪರದಾಡುವಂತಾಯಿತು.
ಭಾಲ್ಕಿ ಬಸ್ ಚರಂಡಿಗೆ: ಗಂಗಾನಗರದ ವಿವಿಧ ವಾರ್ಡ್‌ಗಳಲ್ಲಿನ ರಸ್ತೆಗಳಲ್ಲಿ ಚರಂಡಿ ನೀರು ಹರಿದು ಕೆಸರು ಗದ್ದೆಗಳಾಗಿದ್ದವು. ಕೆಲ ವಾರ್ಡ್‌ಗಳಲ್ಲಿ ಮಹಿಳಾ ಶೌಚಾಲಯಗಳ ಸುತ್ತಲು ಮಳೆ ನೀರು ಸುತ್ತುವರೆದಿದ್ದರಿಂದ ಮಹಿಳೆಯರು ಬಹಿರ್ದೆಸೆಗೆ ಹೋಗಲು ತೊಂದರೆ ಪಟ್ಟರು. ಬಸ್ ನಿಲ್ದಾಣದ ಬಳಿಯ ಬೃಹತ್ ಚರಂಡಿಯ ನೀರು ಮತ್ತು ಮಳೆಯ ನೀರು ರಸ್ತೆಯಲ್ಲಿ ಬೃಹದಾಕಾರವಾಗಿ ಹರಿದಿದ್ದರಿಂದ ಚಾಲಕನಿಗೆ ಚರಂಡಿ ಗೊತ್ತಾಗದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುಲ್ಬರ್ಗಾ- ಭಾಲ್ಕಿ ಬಸ್ ಚರಂಡಿಗೆ ನುಗ್ಗಿ ಸಿಕ್ಕಿಕೊಂಡಿತು. ಬಸ್ ಜಖಂಗೊಂಡಿದ್ದನ್ನು ಬಿಟ್ಟರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.
ಕೊಚ್ಚಿಹೋದ ರಸ್ತೆ: ದಿದ್ದಗಿ-ಪೋತ್ನಾಳ-ಬಳಗಾನೂರ ಗ್ರಾಮಕ್ಕೆ ಸಂಪರ್ಕಿಸುವ ಕಲ್ಪಿಸುವ ರಸ್ತೆ ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಬುದ್ದಿನ್ನಿ, ಬೆಳಗಿನೂರು, ಸಾಗರಕ್ಯಾಂಪ್, ರಾಮತ್ನಾಳ, ಜಾಲವಾಡಗಿ, ಬನ್ನಿಗನೂರ ಸೇರಿದಂತೆ ಮತ್ತಿತರರ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಈ ಮಾರ್ಗದಲ್ಲಿ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪರೀಕ್ಷೆ ಬರೆಯಲು ತೆರಳಬೇಕಾಗಿದ್ದ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ಹೊರಟಿದ್ದ ವೃದ್ಧರು, ಬಾಣಂತಿಯರು ಕೆಲ ಕಾಲ ಪರದಾಡಿದರು.
ಭೋರ್ಗರೆದ ಹಳ್ಳ: ಧಾರಕಾರವಾಗಿ ಸುರಿದ ಮಳೆಯಿಂದಾಗಿ ನಗರಕ್ಕೆ ಹೊಂದಿಕೊಂಡಿರುವ ಒಡೆಹಳ್ಳ ಮತ್ತು ಹಿರೇಹಳ್ಳಗಳು ಎರಡು ಶನಿವಾರ ಬೆಳಗಿನಿಂದ ಮಧ್ಯಾಹ್ನನದ ವರೆಗೆ ತುಂಬಿ ಭೋರ್ಗರೆದವು. ತುಂಬಿದ ಹಳ್ಳ ನೋಡಲು ಸಾರ್ವಜನಿಕರು ಸೇತುವೆ ಮೇಲೆ ತಿರುಗಾಡಿ ಸಂತಸ ಪಟ್ಟರು. ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಹೊಲದ ಒಡ್ಡುಗಳು, ನಾಲಾಗಳು, ಬಪ್ಪೂರ ಗ್ರಾಮದ ಸೇತುವೆ ಕುಸಿದಿರುವ ಬಗ್ಗೆ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

