ಮುಂಗಾರು ಬಿತ್ತನೆಗೆ ಅನುವುಗಾರರ ತರಬೇತಿ
ಲಿಂಗಸ್ಗೂರು: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಕೃಷಿ ಚಟುವಟಿಕೆ ಕುರಿತು ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ರೈತರ ಅನುವುಗಾರರಿಗೆ ಕೃಷಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳಿಂದ ಶನಿವಾರ ತರಬೇತಿ ನೀಡಲಾಯಿತು. ತಾಲೂಕಿನಲ್ಲಿ ಮುಂಗಾರು ಮಳೆ ಶುಭಾರಂಭಗೊಂಡಿದ್ದು, ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ. ಕೃಷಿ ಇಲಾಖೆಯಿಂದ ಭೂ ಚೇತನ ಯೋಜನೆಯಡಿ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಸುಮಾರು 24 ಜನರಂತೆ ಆಯ್ಕೆಗೊಂಡ ಅನುವುಗಾರರಿಗೆ ಮುಂಗಾರು ಹಂಗಾಮಿನ ಬೀಜಗಳ ಮಾಹಿತಿ, ಬೆಳೆಗಳ ನಿರ್ವಹಣೆ, ಬೀಜೋಪಚಾರ, ಲಘು ಪೋಷಕಾಂಶ, ರೋಗ ಮತ್ತು ಕೀಟ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದ್ದು, ಅನುವುಗಾರರು ಪಡೆದ ತರಬೇತಿಯಂತೆ ರೈತರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಾಗುವುದೆಂದು ಕೃಷಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣ ಶಿಕ್ಷಣ ಇಲಾಖೆ ಮುಖ್ಯಸ್ಥ ಉಪ್ಪೇರಿ, ಕೀಟ ತಜ್ಞ ಸುಜಯ ಹುರಳಿ, ಬೇಸಾಯ ತಜ್ಞ ಶ್ಯಾಮರಾವ್ ಕುಲ್ಕರ್ಣಿ ಸೇರಿದಂತೆ ಇದ್ದರು.
ಗುರುತಿನ ಚೀಟಿ, ವೈದ್ಯಕೀಯ ಪತ್ರ ಸರಳೀಕರಿಸಲು ಮನವಿ
ಸಿಂಧನೂರು: ಸಿಂಧನೂರು ತಾಲೂಕ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡುವ ವಿಧಾನವನ್ನು ಸರಳಿಕರಿಸಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ಧೇಶ ಗ್ರಾಮೀಣಾ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಹ್ಮದ್ ಹುಸೇನ್ ಸಾಬ್ ಪರಾಪೂರ್ ತಾಲೂಕ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ವ್ಯಾಪ್ತಿಗೆ ಬರುವ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗಳಗೆ ತಾಲೂಕಿನ ವಿಕಲಚೇತನರ ವಿವಿದೋದ್ಧೇಶ ಸಂಘ ಹಾಗೂ ಗ್ರಾಮೀಣಾ ಪುನರ್ರಾಸತಿ ಕಾರ್ಯಕರ್ತರ ಸಂಘದಲ್ಲಿ, ಗ್ರಾಮಪಂಚಾಯತಿಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಈ ಕುರಿತು ಒಂದು ದಿನದ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆ ನೀರಿನಲ್ಲಿ ಕೊಚ್ಚಿ ಹೋದ 56 ಕುರಿಗಳು
ರಾಯಚೂರು: ಲಿಂಗಸ್ಗೂರು ತಾಲೂಕಿನ ಉಪ್ಪಾರನಂದಿಹಾಳ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆ ವೇಳೆ ಹಳ್ಳದ ನೀರಿನಲ್ಲಿ 56 ಕುರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಹುಸೇನ್ ಸಾಬ್ ಎಂಬುವವರಿಗೆ ಸೇರಿದ ಕುರಿಗಳನ್ನು ಹೊಲದಲ್ಲಿ ಇರಿಸಿದ್ದು, ಆ ವೇಳೆ ಮಳೆ ಸುರಿದಿದ್ದರಿಂದ ಗಾಬರಿಗೊಂಡ ಕುರಿಗಳು ಹೊಲದ ಬದಿಯ ಹಳ್ಳದಲ್ಲಿ ಹರಿಯುತ್ತಿದ್ದ ನೀರಿಗೆ ಜಿಗಿದು ಕೊಚ್ಚಿಕೊಂಡು ಹೋಗಿದ್ದು ಅದರಿಂದ 3.25 ಲಕ್ಷ ಹಾನಿಯಾಗಿದೆ ಎಂದು ಪೊಲೀಸರಿಗೆ ದೂರಿದ್ದಾರೆ.
ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹೊಂಡದಲ್ಲಿ ಮುಳುಗಿ ವ್ಯಕ್ತಿ ಸಾವು
ರಾಯಚೂರು: ಮಾನವಿ ತಾಲೂಕಿನ ಅರೋಲಿ ಗ್ರಾಮದ ಜಾತ್ರೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ಹೊಂಡದಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಮೃತನನ್ನು ಗುಲ್ಬರ್ಗ ಜಿಲ್ಲೆ ವಾಡಿಯ ಅರ್ಜುನ್ ಎಂದು ಗುರುತಿಸಲಾಗಿದೆ. ಈತ ಅರೋಲಿ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರೆಗೆಂದು ಗ್ರಾಮಕ್ಕೆ ಆಗಮಿಸಿದ್ದು, ದೇವಸ್ಥಾನದ ಮುಂದಿನ ಹೊಂಡದಲ್ಲಿ ಸ್ನಾನಕ್ಕೆಂದು ಹೋಗಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹೊಟ್ಟೆನೋವು: ಮಹಿಳೆ ಆತ್ಮಹತ್ಯೆ
ರಾಯಚೂರು: ತಾಲೂಕಿನ ತಲಮಾರಿ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಭೀಮಕ್ಕ ಎಂದು ಗುರುತಿಸಲಾಗಿದೆ. ಈಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡದ್ದಾಳೆಂದು ತಿಳಿಸಿದ್ದಾರೆ. ಇಡಪನೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಕಸ್ಮಿಕ ವಿಷ ಸೇವನೆ: 1 ಸಾವು
ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಮದಲ್ಲಿ ಕ್ರಿಮಿನಾಶಕ ಆಕಸ್ಮಿಕ ದೇಹ ಸೇರಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ನರಸಿಂಹಲು ಎಂದು ಗುರುತಿಸಲಾಗಿದೆ. ಈತ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವಾಗ ಮೂಗು ಮತ್ತು ಬಾಯಿಯಿಂದ ವಿಷದ ಅಂಶವು ಹೊಟ್ಟೆಯಲ್ಲಿ ಹೋಗಿದ್ದರಿಂದ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆಂದು ತಿಳಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಾಗಲಾಪುರ ಹೊಸ ಸೇತುವೆ ಬಿರುಕು
ಮುದಗಲ್: ಪಟ್ಟಣದ ಸುತ್ತ ಮುತ್ತ ಭಾರಿ ಮಳೆ ಸುರಿದಿದ್ದರಿಂದ ಮುದಗಲ್ ತಾವರಗೇರೆ ರಸ್ತೆ ಮಧ್ಯದ ನಾಗಲಾಪುರ ಹಿರೇ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ನಿಮಾರ್ಣಕ್ಕೆ ಹಾಕಲಾಗಿದ್ದ ಸೇಂಟ್ರೀಂಗ್ ಕುಸಿದು ಸೇತುವೆ ಬಿರುಕು ಬಿಟ್ಟಿದೆ.
ಸಾಮಗ್ರಿಗಳು ನೀರಿನಲ್ಲಿ: ರಾತ್ರಿ ಹಿಡಿ ಸುರಿದ ಮಳೆಗೆ ಹಿರೆಹಳ್ಳ ತುಂಬಿ ಹರಿದಿದ್ದು, ಸೇತುವೆಗೆ ಹಾಕಲಾಗಿದ್ದ ಸೇಂಟ್ರೀಂಗ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಲ್ಲಲ್ಲಿ ಸೇತುವೆ ಬಿರುಕು ಬಿಟ್ಟಿದ್ದರಿಂದ ಗುತ್ತಿಗೆದಾರರು ಆತಂಕಗೊಂಡಿದ್ದಾರೆ. ಸ್ಥಳದಲ್ಲೇ ಇದ್ದ ಕಬ್ಬಿಣ ಮತ್ತು ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಕಾಮಗಾರಿ ಸ್ಥಳದಲ್ಲಿದ್ದ ಸಿಬ್ಬಂದಿ ವೆಂಕಟೇಶ ತಿಳಿಸಿದರು. ಹೊಸ ಸೇತುವೆ ಬಿರುಕು ಬಿಟ್ಟಿದ್ದು ಅದನ್ನು ಪುನಾ ನಿರ್ಮಿಸಲು ಸುಮಾರು 15 ಲಕ್ಷ ವೆಚ್ಚವಾಗಲಿದೆ. ಇದರಂತೆ ಆರು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ; ಆಗ್ರಹ
ರಾಯಚೂರು: ಕರ್ನಾಟಕ ಲೋಕ ಸೇವಾ ಆಯೋಗದಿಂದ ಕೈಗೊಳ್ಳಲಾಗುವ ನೇಮಕಾತಿಗಳಲ್ಲಿ ಅಕ್ರಮಗಳು ನಡೆಯುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಐಡಿವೈಒ ಸಂಘಟನೆಯು ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ಕೊನೆಗಾಣಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ ಹಾಗೂ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಅವರು, ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ವಿವಿಧ ಪರೀಕ್ಷೆ ಬರೆದಂಥ ಪ್ರತಿಭಾವಂತರಿಗೆ ಕೆಪಿಎಸ್ಸಿ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಸಹ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೆಪಿಎಸ್ಸಿ ವತಿಯಿಂದ ಲೋಪವಾಗಿರುವುದು ಸ್ಪಷ್ಟ. ಸಂಸ್ಥೆಯಿಂದ ಭ್ರಷ್ಟಾಚಾರ ನಿರ್ಮೂಲನೆಗೆ ರಾಜ್ಯ ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

