ರೈತರಿಗೆ ಹೆಚ್ಚಿನ ದರ; ರಾಯಚೂರಿಗೆ 2ನೇ ಸ್ಥಾನ
ಕ.ಪ್ರ. ವಾರ್ತೆ , ರಾಯಚೂರು , ಜೂ.1
ಕೆಎಂಎಫ್ನ ರಾಯಚೂರು- ಕೊಪ್ಪಳ- ಬಳ್ಳಾರಿ ಹಾಲು ಒಕ್ಕೂಟದಿಂದ ರೈತರಿಗೆ ಪ್ರತಿ ಲೀಟರ್ಗೆ ಅತೀ ಹೆಚ್ಚಿನ ಹಣ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಕ್ಕೂಟವು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಿತ್ಯ ಒಕ್ಕೂಟದಿಂದ 1.50 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ಒಕ್ಕೂಟದ ನಿರ್ದೇಶಕ ಸತ್ಯನಾರಾಯಣ ತಿಳಿಸಿದರು.
ನಗರದಲ್ಲಿ ಶನಿವಾರ ವಿಶ್ವಹಾಲು ದಿನದ ಅಂಗವಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಒಕ್ಕೂಟವು 1.50 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಅದರಲ್ಲಿ 1.25 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಸರಬರಾಜು ಮಾಡುತ್ತಿದೆ. ಗುಣಮಟ್ಟದ ಮತ್ತು ಆರೋಗ್ಯಕರ ಹಾಲು ನೀಡುವುದು ಒಕ್ಕೂಟದ ಉದ್ದೇಶವಾಗಿದೆ ಎಂದು ಹೇಳಿದರು.
ರೈತರ ಪರ ಕಾರ್ಯನಿರ್ವಹಣೆ: ಒಕ್ಕೂಟವು ರೈತರ ಪರ ಕಾರ್ಯನಿರ್ವಹಿಸುವುದರಲ್ಲಿ ಯಾವತ್ತೂ ಮುಂದಿದೆ. ರೈತರಿಗೆ ಪ್ರತಿ ಲೀಟರ್ಗೆ 22 ಹಣ ಪಾವತಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ಹೆಚ್ಚಿನ ಮೊತ್ತ ಪಾವತಿಸುವ ಒಕ್ಕೂಟದಲ್ಲಿ ರಾಯಚೂರು- ಕೊಪ್ಪಳ- ಬಳ್ಳಾರಿ ಒಕ್ಕೂಟವು 2ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಯಚೂರು ಹಾಲು ಸಂಸ್ಕರಣೆ ಘಟಕದ ಆಧುನೀಕರಣ ಕಾರ್ಯ ಜಾರಿಯಲ್ಲಿದೆ. ಕೊಪ್ಪಳದಲ್ಲಿಯೂ ಶೀಘ್ರದಲ್ಲಿಯೇ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಅದೇ ರೀತಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಈಗಾಗಲೇ ಆಧುನಿಕ ಹಾಲು ಸಂಸ್ಕರಣ ಘಟಕದ ನಿರ್ಮಾಣ ಬಹುತೇಕ ಮುಕ್ತಾಯ ಹಂತದಲ್ಲಿದೆ ಎಂದು ಹೇಳಿದರು.
ಹಾಲು ಪೂರೈಸಲು ಸಶಕ್ತ: ಅಂಗನವಾಡಿ ಶಾಲೆಯ ಮಕ್ಕಳಿಗೆ ದಿನವೂ ಹಾಲು ಸರಬರಾಜು ಮಾಡುವ ಯೋಚನೆ ಸರ್ಕಾರದ್ದಾಗಿದೆ. ಆದರೆ ಆ ಬಗ್ಗೆ ಸರ್ಕಾರದಿಂದ ತಮಗೆ ಯಾವುದೇ ಆದೇಶ ಬಂದಿಲ್ಲ. ಹಾಗೊಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಸೂಚಿಸಿದಲ್ಲಿ ಕೆಎಂಎಫ್ ಅಂಗನವಾಡಿ ಮಕ್ಕಳಿಗೆ ಸಮರ್ಪಕವಾಗಿ ದಿನವೂ ಹಾಲು ಪೂರೈಸಲು ಸಶಕ್ತವಾಗಿದೆ ಎಂದು ತಿಳಿಸಿದರು.
ರಾಸಾಯನಿಕ ಬೆರೆಸುವ ಶಂಕೆ: ಸಾಮಾನ್ಯವಾಗಿ ಹಾಲನ್ನು ಐದರಿಂದ ಆರು ಗಂಟೆಗಳವರೆಗೆ ಮಾತ್ರ ಸಾಮಾನ್ಯ ಸ್ಥಿತಿಯಲ್ಲಿ ಸಂಗ್ರಹಿಸಿಡಬಹುದಾಗಿದೆ. ಆದರೆ ಖಾಸಗಿ ಹಾಲು ಉತ್ಪಾದಕರು ಹಾಲಿಗೆ ರಾಸಾಯನಿಕ ವಸ್ತುಗಳನ್ನು ಬೆರೆಸುವ ಮೂಲಕ ಹೆಚ್ಚಿನ ಅವಧಿಗೆ ಸಂಗ್ರಹಿಸಿಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಂಥ ಹಾಲಿನ ಬಗ್ಗೆ ಸರ್ಕಾರ ಪ್ರಯೋಗಾಲಯಗಳಲ್ಲಿ ತಪಾಸಣೆ ನಡೆಸಬೇಕಿದೆ.
ರಾಸಾಯನಿಕ ಮಿಶ್ರಿತ ಹಾಲಿನ ಸೇವನೆಯಿಂದ ಮಾನವನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂಬುದನ್ನು ಗ್ರಾಹಕರು ಅರಿಯಬೇಕಿದೆ ಎಂದು ಸಲಹೆ ನೀಡಿದರು. ಗ್ರಾಹಕರು ಗುಣಮಟ್ಟದ ಹಾಗೂ ಆರೋಗ್ಯಕರ ಹಾಲು ಒದಗಿಸುವ ಕೆಎಂಎಫ್ನ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನೇ ಬಳಕೆ ಮಾಡುವಂತೆ ಅವರು ಮನವಿ ಮಾಡಿದರು.
ಒಕ್ಕೂಟದ ರಾಯಚೂರು ವಿಭಾಗದ ಮಾರುಕಟ್ಟೆ ಘಟಕದ ಉಪ ವ್ಯವಸ್ಥಾಪಕ ರಾಮಚಂದ್ರ, ರಾಮು ಪೆರಿಟಾಲ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

