ರಾಯಚೂರು

ಧರ್ಮ ಪಾಲನೆ, ಪ್ರಚಾರಕ್ಕೆ ಹೆಚ್ಚಿನ ಮಹತ್ವ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.2
ವಿದ್ಯಾಮಠದ ಶೈಕ್ಷಣಿಕ ಅಭಿವೃದ್ಧಿಯ ಆಶಯ. ಧರ್ಮ ಪಾಲನೆ ಮತ್ತು ಪ್ರಚಾರಕ್ಕೆ ಹೆಚ್ಚಿನ ಮಹತ್ವ. ಮತಾಂತರ ಬೇಡ ಎಂಬ ಸ್ಪಷ್ಟ ಸೂಚನೆ. ಜತೆಗೆ ಸರ್ವಜಾತಿ ಜನಾಂಗದವರ ಕಲ್ಯಾಣದ ಭರವಸೆ. ಶ್ರೀಮಠದ ಸಮಗ್ರ ಪ್ರಗತಿಯ ಕನಸು.
ಮಂತ್ರಾಲಯದಲ್ಲಿ ಶನಿವಾರ ರಾತ್ರಿ ನೂತನ ಉತ್ತರಾಧಿಕಾರಿಗಳಿಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನೂತನ ಉತ್ತರಾಧಿಕಾರಿಗಳಾದ ಶ್ರೀಸುಬುಧೇಂದ್ರ ತೀರ್ಥರ ಅನುಗ್ರಹ ಸಂದೇಶದ ಪ್ರಮುಖಾಂಶಗಳಿವು.
ಅನುಗ್ರಹ ಸಂದೇಶ: ನೂತನ ಉತ್ತರಾಧಿಕಾರಿಗಳ ಮಂತ್ರಾಲಯ ಪುರಪ್ರವೇಶದ ಸಂದರ್ಭದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಮಂತ್ರಾಲಯವು ಮೊದಲಿನಿಂದಲೂ ವಿದ್ಯಾಮಠ ಎಂಬ ಹೆಸರು ಗಳಿಸಿದೆ. ವಿದ್ಯೆಯನ್ನು ಪಸರಿಸುವ ಕಾರ್ಯ ನಿರಂತರ ಮುಂದುವರಿಯಲಿದೆ ಎಂದು ನುಡಿದರು.
ಧರ್ಮದ ರಕ್ಷಣೆ ಇಂದು ಎಲ್ಲರ ಕಾರ್ಯವಾಗಬೇಕಿದೆ. ಅದರಲ್ಲೂ ಯುವಕರಲ್ಲಿ ಧರ್ಮ ಪ್ರಜ್ಞೆ ಬೆಳೆಯಬೇಕಿದೆ. ಬೇರೆ ಧರ್ಮಗಳತ್ತ ಆಕರ್ಷಿತರಾಗದೇ ವಿವಿಧ ಆಸೆ, ಆಮಿಷಗಳಿಗೊಳಗಾಗದೇ ಧರ್ಮವನ್ನು ಪಾಲಿಸುವಂತೆ ಸಲಹೆ ನೀಡಿದ ಅವರು, ಸಮಾಜದಲ್ಲಿ ಪರಸ್ಪರ, ಪ್ರೀತಿ, ವಿಶ್ವಾಸ ಬೆಳೆಸುವ ಮೂಲಕ ಮತಾಂತರಕ್ಕೆ ಕಡಿವಾಣ ಹಾಕುವುದು ಅವಶ್ಯಕ ಎಂದು ಹೇಳಿದರು.
ಅವಶ್ಯಕತೆಗಳಿಗೆ ಸ್ಪಂದಿಸುವ ಕಾರ್ಯ: ಶ್ರೀರಾಯರ ಮಠವು ಭಕ್ತರ ಅವಶ್ಯಕತೆಗಳಿಗೆ ಸ್ಪಂದಿಸುವ ಕಾರ್ಯ ನಿರಂತರ ಸಾಗಲಿದೆ. ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀಮಠ ಕಾರ್ಯನಿರ್ವಹಿಸಲಿದೆ. ಶ್ರೀರಾಯರ ಮಠದ ಅನುಯಾಯಿಗಳು ದೇಶಾದ್ಯಂತ ವಾಸವಾಗಿದ್ದು, ಅವರೆಲ್ಲರ ಮನೆಗೆ ತೆರಳಿ ಧರ್ಮ ಪ್ರಚಾರ ಕಾರ್ಯ ಮಾಡುವುದಾಗಿ ಹೇಳಿದರು.
ಶ್ರೀಮಠವು ಎಲ್ಲ ಜಾತಿ ಜನಾಂಗದವರ ಧಾರ್ಮಿಕ ಕೇಂದ್ರವಾಗಿದೆ. ಹೀಗಾಗಿ ಎಲ್ಲರ ಹಿತ ಕಾಯಲು ಬದ್ಧ. ನಿರಂತರ ಪಾಠ, ಪ್ರವಚನ, ಮಧ್ವಮತದವರಲ್ಲಿ ಗೊಂದಲವಿಲ್ಲದಂತೆ ಸಾಮರಸ್ಯದ ಮೂಲಕ ಒಗ್ಗೂಡಿಸುವ ಕಾರ್ಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಶೈಕ್ಷಣಿಕ ಪ್ರಗತಿಗೆ ಮಠ ಕೊಡುಗೆ: ಮಂತ್ರಾಲಯ ಶ್ರೀಮಠವು ಮಂತ್ರಾಲಯ ಗ್ರಾಮದ ಭಾಗವಾಗಿದೆ. ಗ್ರಾಮವನ್ನು ಹೊರತುಪಡಿಸಿ ಶ್ರೀಮಠವನ್ನೂ ಕಲ್ಪಿಸಿ ಕೊಳ್ಳುವುದೂ ಅಸಾಧ್ಯ. ಬಡವರ ಸರ್ವಾಂಗೀಣ ಪ್ರಗತಿಗೆ ಶೈಕ್ಷಣಿಕ ಪ್ರಗತಿಗೆ ಮಠ ಕೊಡುಗೆ ನೀಡಲಿದೆ. ಆರೋಗ್ಯ ಸೇವೆ, ಕುಡಿಯುವ ನೀರಿನ ಒದಗಿಸುವಿಕೆಗೆ ಮಠ ನೆರವಾಗಲಿದೆ ಎಂದು ಹೇಳಿದರು.
ಮಂತ್ರಾಲಯ ಮಠದ ಇದುವರೆಗಿನ ಪೀಠಾಧಿಪತಿಗಳ ಕಾಲದಲ್ಲಿ ಪರಂಪರಾಗತವಾಗಿ ತತ್ವಜ್ಞಾನ ಪ್ರಸಾರ ಕಾರ್ಯ ಸಾಗಿಬಂದಿದೆ. ಈಚೀನ ದಿನಗಳಲ್ಲಿ ಜ್ಞಾನಪ್ರಸಾರ ಕಾರ್ಯ ಇಮ್ಮಡಿಗೊಂಡಿದೆ. ಹಿರಿಯಶ್ರೀಗಳ ಕರುಣೆ, ಔದಾರ್ಯದ ಮೂಲಕ ತಮಗೆ ಉತ್ತರಾಧಿಕಾರತ್ವ ಲಭ್ಯವಾಗಿದೆ. ಇದನ್ನು ಜನ್ಮಜನ್ಮಾಂತರದ ಸೌಭಾಗ್ಯವೆಂದು ಸ್ವೀಕರಿಸಿ ಸೇವೆಗೈಯ್ಯುವುದಾಗಿ ಶ್ರೀಸುಬುಧೇಂದ್ರ ತೀರ್ಥರು ಹಿರಿಯ ಶ್ರೀಗಳಿಗೆ ಪ್ರಮಾಣ ಮಾಡಿದರು.
ನಿರಂತರ ಧಾರ್ಮಿಕ ಕಾರ್ಯಕ್ರಮಗಳು: ವಿದ್ಯಾಮಠದ ಕೀರ್ತಿ ಎಲ್ಲೆಡೆ ಪಸರಿಸಬೇಕು. ಹಿರಿಯ ಶ್ರೀಗಳ ಆಶಯ ಈಡೇರಿಸುವುದೇ ತಮ್ಮ ಪರಮ ಗುರಿ. ವೈಷ್ಣವ ಸಂಪ್ರದಾಯ ಬೆಳೆಸಿ ಉಳಿಸುವ ಕಾರ್ಯ ಅಗತ್ಯ. ಹಳ್ಳಿಯಿಂದ ದಿಲ್ಲಿಯವರೆಗೆ ರಾಯರ ಭಕ್ತರಿದ್ದು, ಅವರ ಹಿತ ಕಾಯುವುದಕ್ಕೆ ಆದ್ಯತೆ. ನ್ಯಾಯ, ವ್ಯಾಕರಣ, ಮೀಮಾಂಸಾ ಶಾಸ್ತ್ರ, ಅಧ್ಯಯನ, ಪಾರಾಯಣ, ಗ್ರಂಥ ಮುದ್ರಣ ಮತ್ತು ಪ್ರಸಾರ, ನಿರಂತರ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಶ್ರೀಮಠದಲ್ಲಿ ನಡೆಯಲಿದೆ ಎಂದು ಹೇಳಿದರು.
ಹಿರಿಯ ಶ್ರೀಗಳ ಆಪ್ತ ಕಾರ್ಯದರ್ಶಿ ಶ್ರೀರಾಜಾ ರಾಜಗೋಪಾಲಾಚಾರ್ಯ ಅವರು ಪ್ರಾಸ್ತಾವಿಕ ಮಾತನಾಡಿ, ಮಂತ್ರಾಲಯದ ಪೂರ್ವಾಶ್ರಮದ ಮೊಮ್ಮಗರಾಗಿರುವ ಶ್ರೀಸುಬುಧೇಂದ್ರತೀರ್ಥರಿಗೆ ಉತ್ತರಾಧಿಕಾರತ್ವ ದೊರೆತಿರುವುದು ಭಕ್ತರಿಗೆ ಸಂತಸದ ಸಂಗತಿ ಎಂದರು.
ಭಕ್ತರಿಗೆ ಸಂಭ್ರಮ: ಮಂತ್ರಾಲಯದ ಕೂಸು ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವುದು ಭಕ್ತರಿಗೆ ಸಂಭ್ರಮ ಉಂಟು ಮಾಡಿದೆ ಎಂದ ಅವರು, ಶ್ರೀಮಠದ ಉತ್ತರಾಧಿಕಾರತ್ವ ನೀಡಿಕೆಯಲ್ಲಿ ಯಾವುದೇ ಪ್ರಭಾವ ನೆರವಾಗದು. ಬದಲಿಗೆ ಶ್ರೀರಾಯರ ಪ್ರೇರಣೆ, ಹಿರಿಯ ಶ್ರೀಗಳ ಕರುಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಗುರುವಂದನಾ ಸಮಾರಂಭದಲ್ಲಿ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ, ವಿ.ಆರ್. ಪಂಚಮುಖಿ, ಶ್ರೀಪತಿ, ಮಾಧವ ಶೆಟ್ಟಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ವಿದ್ವಾಂಸರು, ಪಂಡಿತರುಗಳು ಪಾಲ್ಗೊಂಡಿದ್ದರು.
ಶ್ರೀಮಠದ ಸಿಬ್ಬಂದಿ ಮತ್ತು ಭಕ್ತರು ಉಭಯಶ್ರೀಗಳನ್ನು ಈ ವೇಳೆ ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮೊದಲು ಮಂತ್ರಾಲಯ ಪುರಪ್ರವೇಶಿಸಿದ ಹಿರಿಯ ಶ್ರೀಗಳಾದ ಶ್ರೀಸುಯತೀಂದ್ರತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀಸುಬುಧೇಂದ್ರ ತೀರ್ಥರನ್ನು ಭವ್ಯ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆತರಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.