'ಆಧುನಿಕತೆಯಿಂದ ಸಂಸ್ಕೃತಿ, ಪರಂಪರೆಗೆ ಧಕ್ಕೆ'
ಕ.ಪ್ರ. ವಾರ್ತೆ, ದೇವದುರ್ಗ, ಜೂ.5
ವೈಚಾರಿಕತೆ ಮತ್ತು ಆಧುನಿಕತೆಯ ಹೆಸರಿನಲ್ಲಿ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಕಲುಷಿತಗೊಳಿಸಲಾಗುತ್ತಿದೆ. ಕೇವಲ ಸಂಸ್ಕಾರಯುಕ್ತ ಸಮಾಜದಿಂದ ಮಾತ್ರ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದು ರಂಭಾಪುರಿ ಶ್ರೀಗಳು ನುಡಿದರು.
ತಾಲೂಕಿನ ನೀಲಗಲ್ ಗ್ರಾಮದಲ್ಲಿ ಬುಧವಾರ ನಡೆದ ಬ್ರಹನ್ಮಠದ ಶ್ರೀಗುರು ಪಟ್ಟಾಧಿಕಾರ ಮಹೋತ್ಸವದಲ್ಲಿ ಶ್ರೀರೇಣುಕಾಶಾಂತಮಲ್ಲ ಶಿವಾಚಾರ್ಯರಿಗೆ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿ ನಂತರ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿ, ಮಾನವನ ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಸಂಸ್ಕಾರದ ಬಗ್ಗೆ ಅರಿವು ಹೊಂದುವುದು ಮುಖ್ಯ. ಸಂಸ್ಕಾರದಿಂದ ಕೂಡಿದ ಸುಸಂಸ್ಕೃತ ಸಮಾಜ ನಿರ್ಮಾಣವೇ ಪಂಚಪೀಠಗಳ ಗುರಿಯಾಗಿದೆ ಎಂದು ಹೇಳಿದರು.
ಅರ್ಚನೆಗಿಂತ ಅರ್ಪಣೆ: ಪ್ರಾಚೀನ ಇತಿಹಾಸ ಮತ್ತು ಪವಿತ್ರ ಪರಂಪರೆಯನ್ನು ಹೊಂದಿರುವ ವೀರಶೈವ ಧರ್ಮದ ಪಂಚಪೀಠಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಸಾಮರಸ್ಯ ಸ್ಥಾಪನೆಗೆ ಶ್ರಮಿಸುತ್ತಿವೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಅರ್ಚನೆಗಿಂತ ಅರ್ಪಣೆ ಮೇಲು ಎಂಬುದನ್ನು ಪಂಚಪೀಠಗಳು ಸಾರಿವೆ ಎಂದು ತಿಳಿಸಿದರು.
ನೀಲಗಲ್ ಬ್ರಹನ್ಮಠವು ಪಂಚಪೀಠದ ರಂಭಾಪುರಿ ಮಠದ ಶಾಖಾ ಮಠವಾಗಿದ್ದು, ಡಾ.ಪಂಚಾಕ್ಷರ ಶಿವಾಚಾರ್ಯರು ಮಠದ ಪ್ರಗತಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸದ್ಯ ಅವರ ಉತ್ತರಾಧಿಕಾರಿಯಾಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯರು ನಿಯುಕ್ತಿಗೊಂಡಿರುವುದು ಸಂತಸ ತಂದಿದೆ ಎಂದು ನುಡಿದರು.
ಈ ವೇಳೆ ರಂಭಾಪುರಿ ಶ್ರೀಗಳು ನೀಲಗಲ್ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳಿಗೆ ಶಾಲು ಹೊದಿಸಿ ಆಶೀರ್ವದಿಸಿದರು. ಅಧ್ಯಕ್ಷತೆಯನ್ನು ನೀಲಗಲ್ ಬ್ರಹನ್ಮಠದ ಡಾ. ಪಂಚಾಕ್ಷರ ಶಿವಾಚಾರ್ಯರು ವಹಿಸಿದ್ದರು. ರಾಯಚೂರಿನ ಕಿಲ್ಲೆಂ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು, ಗಬ್ಬೂರಿನ ಬೂದಿಬಸವೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.
ಇದೇ ವೇಳೆ ನೂತನ ಮಠದ ಕಟ್ಟಡ ಮತ್ತು ನೂತನ ಕಲ್ಯಾಣ ಮಂಟಪದ ಉದ್ಘಾಟನೆ ನಡೆಯಿತು. 25 ಜೋಡಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ವಿಜೃಂಭಣೆಯಿಂದ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

