ಗಂಡ- ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ಜೂ.7
ನಗರದ ಬಹುತೇಕ ಕಡೆ ಉಕ್ಕಿ ಹರಿಯುವ ಒಳಚರಂಡಿ ಮ್ಯಾನ್ಹೋಲ್ಗಳು. ರಸ್ತೆಗೆ ನುಗ್ಗುವ ಕೊಳಚೆ ನೀರು, ದಾರಿಹೋಕರಿಗೆ ಹಾಗೂ ವಿವಿಧ ಬಡಾವಣೆಗಳ ನಿವಾಸಿಗಳಿಗೆ ನರಕದ ದರ್ಶನ. ಪರಿಹಾರ ಕಾಣದ ದಿನಗೂಲಿ ನೌಕರರ ಬೇಡಿಕೆಗಳಿಂದಾಗಿ ಜನತೆಗೆ ಸದ್ಯ ದುರ್ವಾಸನೆಯ ಪರಿಸರದಿಂದ ಮುಕ್ತಿ ದೊರೆಯುವ ಲಕ್ಷಣಗಳಿಲ್ಲ.
ಜಿಲ್ಲಾಡಳಿತ, ನಗರಸಭೆ ಮತ್ತು ನಗರಸಭೆಯ ದಿನಗೂಲಿ ನೌಕರರ ಸಂಘರ್ಷದ ಮಧ್ಯೆ ನಾಗರಿಕರು ಈಗ ಸಂಕಷ್ಟಕ್ಕೆ ಸಿಲುಕಿರುವ ದುಸ್ಥಿತಿಯಿದು.
ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಗರಸಭೆಯ ದಿನಗೂಲಿ ನೌಕರರು ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಹೋರಾಟಕ್ಕಿಳಿದಿರುವುದು ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ. ಇಲ್ಲಿನ ನಗರಸಭೆ ಎಂದಿನಿಂದಲೂ ಗೊಂದಲದ ಗೂಡು. ಅವ್ಯವಸ್ಥೆಗೆ ಹೆಸರಾಗಿರುವ ನಗರಸಭೆಯಲ್ಲಿ ದಿನಗೂಲಿ ನೌಕರರ ಈಡೇರದ ಬೇಡಿಕೆಗಳಿಗೆ ಕೊನೆಯಿಲ್ಲ. ಒಂದು ಬೇಡಿಕೆ ಈಡೇರಿದರೆ ಮತ್ತೊಂದು ಹುಟ್ಟಿಕೊಳ್ಳಲು ನಗರಾಡಳಿತವೇ ಕಾರಣವಾಗಿರುತ್ತದೆ.
ಹೋರಾಟ: ಈಗಲೂ ಹಾಗೆಯೇ ಆಗಿದ್ದು, ನಗರಸಭೆಯ ದಿನಗೂಲಿ ನೌಕರರ ಮೂರು ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದರಿಂದ ನಗರಸಭೆಯ ಆಡಳಿತಕ್ಕೆ ಮನವಿ ಮಾಡಿ ಬೇಸತ್ತ ದಿನಗೂಲಿ ನೌಕರರ ಸಂಘದ ಸದಸ್ಯರು ಜಿಲ್ಲಾಡಳಿತಕ್ಕೆ ಮೊರೆ ಹೋಗಿದ್ದಾರೆ. ಆದರೆ ಜಿಲ್ಲಾಡಳಿತವು ಸಮಸ್ಯೆಯನ್ನು ಪರಿಹರಿಸುವ ಮೊದಲು ದಿನಗೂಲಿ ನೌಕರರ ಮೇಲೆ ಹರಿಹಾಯ್ದಿದ್ದು ಹೋರಾಟದ ಕಿಚ್ಚು ಹಚ್ಚಿದೆ. ಹಾಗಾಗಿ ಸಂಘದ ಕಾರ್ಯಕರ್ತರು ಆಡಳಿತದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಸಿಬ್ಬಂದಿಯಿಲ್ಲ: ನಗರದಲ್ಲಿ ಮೊದಲಿನಿಂದಲೂ ನಗರಸಭೆಯಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಅದರಲ್ಲೂ ನಗರ ದಿನೆದಿನೇ ಬೆಳೆಯುತ್ತಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯ ನೇಮಕಾತಿ ನಡೆದಿಲ್ಲ ಎಂಬ ಆರೋಪವಿದೆ. ನಗರದಲ್ಲಿ ಸುಮಾರು 3 ಲಕ್ಷ ಹತ್ತಿರ ಜನಸಂಖ್ಯೆ ಬಂದಿದೆ. ನಗರಸಭೆಯ ಮೂಲಗಳ ಪ್ರಕಾರವೇ 8ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮ್ಯಾನ್ಹೋಲ್ಗಳು ನಗರದ ವಿವಿಧೆಡೆಯಿದ್ದು, ಅವುಗಳ ನಿರ್ವಹಣೆಯ ಕಾರ್ಯವನ್ನು ಕೇವಲ 26 ಜನ ಸಿಬ್ಬಂದಿಯಿಂದಲೇ ಮಾಡಿಸಲಾಗುತ್ತಿದೆ.
ಸಿಬ್ಬಂದಿ ಕೊರತೆಯಿಂದ ದಿನವೂ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ಒಳಚರಂಡಿ ನಿರ್ವಹಣೆಯ ಸಿಬ್ಬಂದಿಗೆ ಬಿಡುವಿಲ್ಲದಂತೆ ದುಡಿಯುವುದು ಅನಿವಾರ್ಯ ಎಂಬಂತಿದೆ. ಹೀಗಾಗಿ ಲಭ್ಯವಿರುವ ಸಿಬ್ಬಂದಿಯೇ ಒಳಚರಂಡಿ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ನಗರಸಭೆಯ ದಿನಗೂಲಿ ಸಿಬ್ಬಂದಿಗಳನ್ನು ಕೆಲ ಪ್ರಮುಖ ಅಧಿಕಾರಿಗಳು, ರಾಜಕೀಯ ನಾಯಕರ ಮನೆಯಲ್ಲಿ ಕೆಲಸಕ್ಕಿರಿಸಿಕೊಳ್ಳಲಾಗಿದೆ. ವೇತನ ಮಾತ್ರ ನಗರಸಭೆಯಿಂದ ಪಾವತಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದರಿಂದ ನಗರಸಭೆಯ ಸಿಬ್ಬಂದಿ ಕಾರ್ಯನಿರ್ವಹಣೆಯ ಬಗ್ಗೆಯೇ ಅನುಮಾನಿಸುವಂತಾಯಿತು.
ಎಚ್ಚರಿಕೆ ನೋಟಿಸ್: ಅಷ್ಟೇ ಅಲ್ಲ ನಗರಸಭೆಯ ಬಹುತೇಕ ಸಿಬ್ಬಂದಿ ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸೂಕ್ತ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂಬ ಆರೋಪಗಳು ವಿವಿಧ ಸಂಘಟನೆಗಳಿಂದ ಕೇಳಿಬಂದಿದೆ.
ಈ ಕುರಿತು ನಗರಸಭೆಯ ದಿನಗೂಲಿ ನೌಕರರ ಸಂಘದ ಮುಖಂಡ ಅಂಬಣ್ಣ ಅರೋಲಿಕರ್ ಪ್ರತಿಕ್ರಿಯಿಸಿ, ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಒಳಚರಂಡಿ ನಿರ್ವಹಿಸುವ ಕಾರ್ಮಿಕರೂ ಸೇರಿ ದಿನಗೂಲಿ ನೌಕರರಿಗೆ ಕನಿಷ್ಠ ಸವಲತ್ತು ನೀಡುತ್ತಿಲ್ಲ. ವೇತನ ತಡೆಹಿಡಿಯುವುದು, ಹೋರಾಟ ನಡೆಸದಂತೆ ಎಚ್ಚರಿಕೆ ನೋಟಿಸ್ ನೀಡುವುದು ತೀರಾ ಸಾಮಾನ್ಯ ಸಂಗತಿಯಾಗಿದೆ ಎಂದಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ದಿನಗೂಲಿ ಕಾರ್ಮಿಕರು ನಡೆಸಿದ ಹೋರಾಟದ ಫಲವಾಗಿ ಕಳೆದ ಮೂರು ತಿಂಗಳಿನಿಂದ ನಗರಸಭೆ ಬಾಕಿ ಉಳಿಸಿಕೊಂಡಿದ್ದ ದಿನಗೂಲಿ ಕಾರ್ಮಿಕರ ವೇತನ ಪಾವತಿಯಾಗಿದೆ. ಆದರೆ ಈಚೆಗೆ ನೀರಿನ ನಿರ್ವಹಣೆಯ ಕಾರ್ಯದಲ್ಲಿದ್ದಾಗ ಮೃತನಾದ ವೆಂಕಟೇಶ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಹೋರಾಟ ಮುಂದುವರಿದಿದೆ.
ಜಿಲ್ಲಾಧಿಕಾರಿಗಳು ಸಂಧಾನ ಸಭೆ ನಡೆಸಿ ಪರಿಹಾರ ನೀಡಿಕೆಗೆ ಸಂಬಂಧಿಸಿ ಸರ್ಕಾರಕ್ಕೆ ಮಾರ್ಗದರ್ಶನ ಕೋರಿ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ. ಆದರೆ ಹೋರಾಟ ಮಾತ್ರ ಮುಂದುವರಿದಿದೆ. ನಗರಸಭೆ ಅವ್ಯವಸ್ಥೆಯಿಂದ ಬೇಸತ್ತಿದ್ದ ನಾಗರಿಕರು ಈಗ ದಿನಗೂಲಿ ನೌಕರರ ಹೋರಾಟದಿಂದಾಗಿ ವಿವಿಧ ಸೇವೆಗಳಿಂದ ವಂಚಿತರಾಗಿದ್ದಾರೆ. ಜಿಲ್ಲಾಡಳಿತ, ನಗರಸಭೆ ಆಡಳಿತ ಮತ್ತು ದಿನಗೂಲಿ ನೌಕರರ ಮಧ್ಯದ ಸಂಘರ್ಷದಿಂದ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ. ಒಳಚರಂಡಿಗಳು ನಗರದ ಬಹುತೇಕ ಬಡಾವಣೆಗಳಲ್ಲಿ ಉಕ್ಕಿ ಹರಿಯುತ್ತಿದ್ದು, ನಿರ್ವಹಣೆಯಿಲ್ಲವಾಗಿದೆ. ಪರಿಣಾಮ ಕಲುಷಿತ ಪರಿಸರದಲ್ಲಿ ಜೀವನ ನಡೆಸುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

