ಪ್ರಚಾರಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಡಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.10
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ. ಶಿಕ್ಷಕರು ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಪ್ರತಿ ತಿಂಗಳಿಗೊಮ್ಮೆಯಾದರೂ ಮಕ್ಕಳಿಗೆ ನೆರವಾಗುವಂತ, ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಹಾಯವಾಗುವಂತ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ತೀಕ್ಷ್ಣವಾಗಿ ಚಾಟಿ ಬೀಸಿದರು.
ನಗರದ ಕೋಟೆ ವೀರಣ್ಣ ದೇವಸ್ಥಾನದಲ್ಲಿ ತಾಲೂಕು ಲಿಂಗವಂತ ನೌಕರರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಸಂಘ ಸಂಸ್ಥೆಗಳನ್ನು ತಮ್ಮ ಒಳಿತಿಗಾಗಿ ಕಟ್ಟಿಕೊಳ್ಳಬೇಕೆ ವಿನಃ ರಾಜಕೀಯ ಮಾಡುವುದಾಗಲಿ, ಬೇರೆ ಶಿಕ್ಷಕರಿಗೆ ತೊಂದರೆ ಕೊಡುವ, ಮನಸ್ಸಿಗೆ ನೋವನ್ನುಂಟು ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಅದರ ಬದಲು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಕರ್ತರಾಗಬೇಕು. ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಸಾಗಿಸಲು ಯತ್ನಿಸಬೇಕು. ಅದಕ್ಕೆ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.
ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಿ: ನೌಕರರ ಸಂಘಗಳು ಸಹಕಾರ ತತ್ವದಡಿ ಸಹಕಾರಿ ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿಗೆ ತಮ್ಮ ತಮ್ಮಲ್ಲಿ ಅನುಕೂಲಗಳನ್ನು ಮಾಡಿಕೊಳ್ಳಬೇಕು. ಆರ್ಥಿಕವಾಗಿ ಸಶಕ್ತರಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಕರೇಗೌಡ ಮಾತನಾಡಿ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಸರ್ಕಾರದ ಜೊತೆಗೆ ಖಾಸಗಿ ವ್ಯಕ್ತಿಗಳಿಂದ ಕೊಡಿಸಿ ಅವರ ವ್ಯಾಸಂಗಕ್ಕೆ ನೆರವಾಗಬೇಕು. ನೌಕರರ ಸಂಘಗಳು ಕೇವಲ ಜಾತಿಗೆ ಸೀಮಿತವಾಗದೆ ಸರ್ವರ ಏಳಿಗೆಗೆ ಶ್ರಮಿಸಬೇಕು. ಅಂದಾಗ ಸಂಘಗಳು ಜನಮಾನಸದಲ್ಲಿ ಉಳಿಯುತ್ತವೆ ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಿದರು. ಬಸವರಾಜ, ಅಶ್ವಿನಿ ಸಜ್ಜನ ಬಳಗಾನೂರು, ಈರಪ್ಪ ಗುಂಜಳ್ಳಿ, ವಿರುಪಾಕ್ಷರಡ್ಡಿ, ಅನಿಲಕುಮಾರರಡ್ಡಿ, ವಿನೋದಕುಮಾರ ಬಹುಮಾನಕ್ಕೆ ಭಾಜನರಾದರು.
ಇದಲ್ಲದೇ ನಿವೃತ್ತಿ ಹೊಂದಿದ ನೌಕರರಾದ ನಿರ್ಮಲ ಅಮರಯ್ಯ ಹಿರೇಮಠ, ವರಮೂರ್ತಿಸ್ವಾಮಿ, ಶಿವಲಿಂಗಯ್ಯ ಹಿರೇಮಠ, ಪಂಚಾಕ್ಷರಯ್ಯ, ಮಲ್ಕಪ್ಪ, ಸೋಮಶೇಖರ, ಷಡಕ್ಷರಯ್ಯ, ಎಸ್.ಕೆ. ಹೊಟ್ಟಿನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಬಿ.ಆರ್. ಗೌಡೂರು, ಲೋಕೊಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ನಾಗರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ನೌಕರರ ಒಕ್ಕೂಟದ ಅಧ್ಯಕ್ಷ ದೊಡ್ಡನಗೌಡ ಗುಂಜಳ್ಳಿ, ಲಿಂಗವಂತ ನೌಕರರ ಗೌರವಾಧ್ಯಕ್ಷ ವೆಂಕನಗೌಡ ವಟಗಲ್, ಪ್ರದಾನ ಕಾರ್ಯದರ್ಶಿ ವೀರೇಶಕೋಟೆ, ಖಜಾಂಚಿ ವೆಂಕೋಬ ಸರ್ಜಾಪೂರ, ಆಹಾರ ಇಲಾಖೆಯ ನಾಗರಾಜ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯರು ವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಲಿಂಗವಂತ ನೌಕರರ ಸಂಘದ ಅಧ್ಯಕ್ಷ ಅಮರೇಶ ಹರೆಟನೂರು ವಹಿಸಿದ್ದರು. ಕೆ.ಬಿ. ಹವಾಲ್ದಾರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಶರಣಬಸವ ಹಿರೇಮಠ ಮಾತನಾಡಿದರು. ಈರಮ್ಮ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

