ನಿರ್ಮಿತಿ ಕೇಂದ್ರದ ಏಜೆನ್ಸಿ ರದ್ದುಗೊಳಿಸಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.12
ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿರುವ ತಾಲೂಕಿನ ಧಡೇಸ್ಗೂರು, ಸಿದ್ರಾಂಪುರ, ಚನ್ನಳ್ಳಿ, ಗುಂಜಳ್ಳಿ, ಗೊರೇಬಾಳ ಪ್ರೌಢಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿವೆ. ಕಾಮಗಾರಿಯೂ ತೀರಾ ಕಳಪೆಯಾಗಿದ್ದು ಕೂಡಲೇ ನಿರ್ಮಿತಿ ಕೇಂದ್ರಕ್ಕೆ ವಹಿಸಿರುವ ಏಜೆನ್ಸಿಯನ್ನು ರದ್ದುಗೊಳಿಸಿ, ಆಯಾ ಎಸ್ಡಿಎಂಸಿಗೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಗೊತ್ತುವಳಿ ಅಂಗೀಕರಿಸಿ ಕಳುಹಿಸಬೇಕೆಂದು ತಾಲೂಕು ಪಂಚಾಯಿತಿ ಸರ್ವ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.
ಸದಸ್ಯರ ಆಕ್ರೋಶ: ಆರಂಭದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಯಮಿತ(ಭೂ ಸೇನಾ) 2009- 10ರಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ತಾಲೂಕಿನ ರಾಗಲಪರ್ವಿ, ಗುಡದೂರು, ಗೋಮರ್ಸಿ, ಕೆ.ಬಸಾಪುರ, ಮಾಡಶಿರವಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆರಂಭಗೊಂಡಿರುವ ರಸ್ತೆ, ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ನೀರು ಸರಬರಾಜು ಯೋಜನೆಯಡಿ ಕುಡಿಯುವ ನೀರಿನ ಯೋಜನೆಗಳು ಅಧೋಗತಿಗೆ ತಲುಪಿವೆ. ಒಳಬಳ್ಳಾರಿ, ಗೋಮರ್ಸಿ, ಆರ್.ಎಚ್. ನಂ.1 ಹಾಗೂ ಇತರೆಡೆ ಟ್ಯಾಂಕ್ ನಿರ್ಮಾಣವಾಗಿ, ಪೈಪ್ಲೈನ್ ಮುಗಿದಿವೆ. ಆದರೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿ ವರದಿ ನೀಡಲು ಸೂಚನೆ: ಇದಕ್ಕೆ ಭೂ ಸೇನಾ ನಿಗಮದ ಅಧಿಕಾರಿ ಸೋಮಶೇಖರ ವಾರದಲ್ಲಿ ಪೂರ್ಣಗೊಳಿಸಿವುದಾಗಿ ಹೇಳಿದರೂ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಮಧ್ಯಪ್ರವೇಶಿಸಿದ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಳವಾರ ಜಿಪಂ ಉಪ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೋಮಶೇಖರಗೆ ಸೂಚಿಸಿದರು.
ತಾಲೂಕಿನ ಶ್ರೀಪುರಂ ಜಂಕ್ಷನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಸಗಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಇಒಗೆ ಸದಸ್ಯ ಯಂಕೋಬ ಒತ್ತಾಯಿಸಿದರು. ತಾಲೂಕಿನ ಅಲಬನೂರು ಗ್ರಾಮದಲ್ಲಿರುವ ಶಂಕರ ನರ್ಸರಿ ಶಾಲೆಯ ಬಗ್ಗೆ ಕೇಳಿದಾಗ ಇದಕ್ಕೆ ಉತ್ತರಿಸಿದ ಬಿಇಒ, ಈಗಾಗಲೇ ಶಾಲೆಯ ಪರವಾನಗಿ ರದ್ದುಗೊಳಿಸಿದ್ದಾಗಿ ತಿಳಿಸಿದರು. ಶಾಲೆ ರದ್ದಾಗಿದ್ದರೂ ಅನಧಿಕೃತವಾಗಿ ನಡೆಯುತ್ತಿದೆ ಎಂದು ಶಾಲೆಯ ಭಿತ್ತಿಪತ್ರವನ್ನು ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ ಪ್ರದರ್ಶಿಸಿದರು. ಮಕ್ಕಳಿಗೆ, ಪಾಲಕರಿಗೆ ತೊಂದರೆಯಾಗದಂತೆ ಶಾಲೆಯನ್ನು ಬಂದ್ ಮಾಡಿ 4 ದಿನಗಳಲ್ಲಿ ವರದಿ ನೀಡುವಂತೆ ಬಿಇಒ ವೃಷಭೇಂದ್ರಯ್ಯಸ್ವಾಮಿ ಕಚೇರಿಯ ಅಧಿಕಾರಿ ರವಿಯಪ್ಪನವರಿಗೆ ಸೂಚನೆ ನೀಡಿದರು.
ತಿಂಗಳಲ್ಲಿ ಸಂಪರ್ಕ: ಗೊರೇಬಾಳದಲ್ಲಿ ರಾಜೀವಗಾಂಧಿ ಕುಡಿವ ನೀರಿನ ಯೋಜನೆ ಪೂರ್ಣವಾಗಿದ್ದರೂ ಸುತ್ತಮುತ್ತಲ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ರೌಡಕುಂದಾ ಸದಸ್ಯೆ ಪೂರ್ಣಿಮಾ ಪ್ರಶ್ನಿಸಿದರು. ವಿದ್ಯುತ್ ಅಳವಡಿಕೆಯಲ್ಲಿ ತಾಂತ್ರಿಕ ದೋಷಗಳು ಕಂಡಿದ್ದು, ಜೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಿಂಗಳೊಳಗೆ ನೀರು ಸರಬರಾಜು ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಜಿಪಂ ಉಪವಿಭಾಗದ ಎಇಇ ಬಿ.ಆರ್. ಗೌಡೂರು ಉತ್ತರಿಸಿದರು.
ಅಧಿಕ ಒತ್ತಡದಿಂದ ವಿವಿಧ ಗ್ರಾಮಗಳಲ್ಲಿ ಟಿಸಿಗಳು ಸುಡುತ್ತಿವೆ. ಅನಧಿಕೃತ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ತಮಗೆ ಅಧಿಕೃತ ವಿದ್ಯುತ್ ಬಳಕೆ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಅನಧಿಕೃತ ವಿದ್ಯುತ್ ಸಂಪರ್ಕ ಪಡೆದವರ ಬಗ್ಗೆ ಪ್ರತಿದಿನ 100- 200 ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಬಗ್ಗೆ ಸದಸ್ಯರು ತಮ್ಮ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಕುಡಿವ ನೀರಿನ ಯೋಜನೆಗೆ ಬೇಕಾಗಿರುವ ವಿದ್ಯುತ್ ಸೌಕರ್ಯವನ್ನು ಸಾಧ್ಯವಾದಷ್ಟು ಬೇಗನೆ ಒದಗಿಸುವುದಾಗಿ ಜೆಸ್ಕಾಂನ ಇಇ ಎಂ.ಎನ್. ದೇಸಾಯಿ ಸಭೆಗೆ ಉತ್ತರಿಸಿದರು.
ರೈತರು ಆತಂಕ ಪಡಬೇಕಿಲ್ಲ: ತಾಲೂಕಿನ 11 ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾಗಿರುವ ಬೀಜ ಹಾಗೂ ಗೊಬ್ಬರ ದಾಸ್ತಾನಿದೆ. ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆಯ ಕೆ.ಬಿ. ಗದ್ದಿ ಸಭೆಗೆ ತಿಳಿಸಿದರು.
ಸಭೆಗೆ ತೋಟಗಾರಿಕಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿ ಗೈರು ಹಾಜರಿಯಾಗಿದ್ದರಿಂದ ಕಾರಣ ಕೇಳಿ ನೋಟಿಸ್ ನೀಡುವಂತೆ ತಾಪಂ ಇಒ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ನಂತರ ರೇಷ್ಮೆ, ಆರೋಗ್ಯ, ಜಿಪಂ ಉಪವಿಭಾಗ, ಸಮಾಜ ಕಲ್ಯಾಣ, ಜಲಾನಯನ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕೃಷಿ ಇಲಾಖೆಗಳ ಮಾಹಿತಿಯನ್ನು ಪಡೆಯಲಾಯಿತು. ನಂತರ ತಾಪಂ 2013- 14ನೇ ಸಾಲಿನ ವಿವಿಧ ಯೋಜನೆಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಯಿತು. ಸಭೆಯಲ್ಲಿ ತಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

