ರಾಯಚೂರು

ಅಂಗಡಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಜೂ.13:
ನಗರದ ಎಪಿಎಂಸಿ ಪ್ರಾಂಗಣದಲ್ಲಿನ ಒದಗಿಸಿರುವ ಜಾಗೆಗೆ ಇಲ್ಲಿನ ಪಟೇಲ್ ರಸ್ತೆಯಲ್ಲಿರುವ ಎಲ್ಲ 72 ಅಂಗಡಿಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಗುರುವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಶೆಟ್ಟಿಭಾವಿ ವೃತ್ತದಿಂದ ಸರ್ದಾರ್ ಪಟೇಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ, ನಗರದ ಪಟೇಲ್ ರಸ್ತೆಯಲ್ಲಿರುವ 72 ಸಗಟು ವ್ಯಾಪಾರಿಗಳ ಅಂಗಡಿಗಳನ್ನು ಸ್ಥಳಾಂತರಿಸುವ ಉದ್ದೇಶದಿಂದ ಎಪಿಎಂಸಿ ಪ್ರಾಂಗಣದಲ್ಲಿ ಅಗತ್ಯ ಸಂಖ್ಯೆಯ ಹಾಗೂ ಸಮರ್ಪಕ ಜಾಗೆಯನ್ನು ಒದಗಿಸಿ ವರ್ಷ ಗತಿಸಿದೆ. ಆದರೂ ಪಟೇಲ್ ರಸ್ತೆಯಲ್ಲಿನ ಅಂಗಡಿಗಳನ್ನು ತೆರವುಗೊಳಿಸಲು ಅಂಗಡಿಗಳ ಮಾಲಿಕರು ಮುಂದಾಗಿಲ್ಲ ಎಂದು ಆರೋಪಿಸಿದರು.
ಖಂಡನೆ: ಎಪಿಎಂಸಿ ಪ್ರಾಂಗಣಕ್ಕೆ ತೆರಳಲು ಆಸಕ್ತಿ ತೋರದ ವ್ಯಾಪಾರಿಗಳು ಪ್ರಾಂಗಣದಲ್ಲಿ ನೀಡಿದ ಜಾಗದಲ್ಲಿ ಕಟ್ಟಡಗದಳ ನಿರ್ಮಾಣ ಕಾಮಗಾರಿ ದುರುದ್ದೇಶದಿಂದಲೇ ನಿಧಾನಗತಿಯಲ್ಲಿ ಸಾಗುವಂತೆ ಮಾಡಿದ್ದಾರೆ. ವರ್ತಕರ ಈ ರೀತಿಯ ವರ್ತನೆಯನ್ನು ಕರವೇ ಖಂಡಿಸುತ್ತದೆ ಎಂದು ಎಚ್ಚರಿಸಿದರು.
ಪಟೇಲ್ ರಸ್ತೆಯಲ್ಲಿ ಸದ್ಯ ಅನೇಕ ಸಗಟು ವ್ಯಾಪಾರಸ್ಥರು ದಿನವೂ ವಹಿವಾಟು ನಡೆಸುತ್ತಿರುವುದರಿಂದ ಈ ಮಾರ್ಗದಲ್ಲಿ ದಿನವೂ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆಯಾಗುತ್ತಿದೆ. ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಪಟೇಲ್ ರಸ್ತೆಯಲ್ಲಿ ವ್ಯಾಪಾರಿಗಳಿಗೆ ಸಂಬಂಧಿಸಿದ ಲಾರಿಗಳು ನಿಲುಗಡೆ ಮಾಡುವುದರಿಂದ ಅಪಾಯದ ಸ್ಥಿತಿಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾನೂನು ಉಲ್ಲಂಘನೆ: ಎಪಿಎಂಸಿ ಕಾರ್ಯದರ್ಶಿಗಳು ಈಗಾಗಲೇ 15ದಿನದಲ್ಲಿ ಪಟೇಲ್ ರಸ್ತೆಯ ಅಂಗಡಿಗಳನ್ನು ತೆರವುಗೊಳಿಸಿ ಎಪಿಎಂಸಿಯಲ್ಲಿ ಒದಗಿಸಿರುವ ಜಾಗೆಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿ ನೊಟೀಸ್ ಜಾರಿ ಮಾಡಿದ್ದರೂ,  ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ವರ್ತಕರ ಧೋರಣೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಟೀಕಿಸಿದರು.
ಕೆಲ ವರ್ಷಗಳ ಹಿಂದಷ್ಟೇ ಪಟೇಲ್ ರಸ್ತೆಯನ್ನು ನಿರ್ಮಿಸಿದ್ದು, ಅದೀಗ ಪುನಾ ಹದಗೆಟ್ಟಿದೆ. ಈ ಹಿಂದೆ ಎಪಿಎಂಸಿಯಿಂದಲೇ ದುರಸ್ತಿ ಕೈಗೊಳ್ಳಲಾಗಿತ್ತು.
ಆದರೆ ಮೂರೇ ವರ್ಷದಲ್ಲಿ ರಸ್ತೆ ಮತ್ತೆ ತೀರಾ ಹದಗೆಟ್ಟಿದ್ದು, ದುರಸ್ತಿ ಕೈಗೊಳ್ಳುವ ಮೊದಲೇ ವರ್ತಕರು ಇಲ್ಲಿಂದ ಎಪಿಎಂಸಿ ಜಾಗಕ್ಕೆ ಸ್ಥಳಾಂತರಗೊಳ್ಳಬೇಕು. ರಸ್ತೆ ದುರಸ್ತಿ ಕಾರ್ಯವನ್ನು ನಗರಸಭೆಗೆ ವಹಿಸಬೇಕೆಂದು ಆಗ್ರಹಿಸಿದರು.
ಹೋರಾಟದ ಎಚ್ಚರಿಕೆ: ಮುಂದಿನ 15ದಿನದಲ್ಲಿ ಪಟೇಲ್ ರಸ್ತೆಯಲ್ಲಿರುವ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಎಪಿಎಂಸಿ ಜಾಗಕ್ಕೆ ಸ್ಥಳಾಂತರಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಜತೆಗೂಡಿ ಕರವೇ ಸಂಘಟನೆ ಪಟೇಲ್ ರಸ್ತೆಯಲ್ಲಿನ ಅಂಗಡಿಗಳನ್ನು ಬಂದ್ ಮಾಡಿಸಿ ಉಗ್ರ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ಪಟೇಲ್ ರಸ್ತೆಯಲ್ಲಿ ಸದ್ಯ ವಹಿವಾಟು ನಡೆಸುತ್ತಿರುವವರು ಸ್ಥಳಾಂತರಗೊಳ್ಳುವವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸರಕು ಹೊತ್ತ ಭಾರೀ ವಾಹನಗಳ ನಿಲುಗಡೆಯನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್, ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ಕೆ.ಕಿಶನ್ ರಾವ್, ರಘುವೀರ ನಾಯಕ, ಜನಾರ್ದನ ರಾಜಲಬಂಡಾ, ಮುಮ್ತಾಜುದ್ದೀನ್, ನಾಗರಾಜ ಬಿಚ್ಚಾಲಿ, ಅರಾಫತ್, ಬಂದೇನವಾಜ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.