ರಾಯಚೂರು

ಕೋಟಿ ಕೋಟಿ ಸುರಿದವರು ಲೆಕ್ಕ ನೀಡಿದ್ದು ಲಕ್ಷ ಮಾತ್ರ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.13
ಚುನಾವಣೆಯ ಲೆಕ್ಕ ನೀಡದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ, ನಟಿ ಪೂಜಾ ಗಾಂಧಿ. 71 ಅಭ್ಯರ್ಥಿಗಳಿಂದ ಮಾತ್ರ ಖರ್ಚು ವೆಚ್ಚದ ವಿವರ ಸಲ್ಲಿಕೆ. 15 ಜನರಿಂದ ವೆಚ್ಚದ ಮಾಹಿತಿ ಸಲ್ಲಿಕೆಯಿಲ್ಲ. ಕೋಟಿ ಸುರಿದವರಿಂದಲೂ ಲಕ್ಷ ರು. ವೆಚ್ಚದ ಲೆಕ್ಕ ನೀಡಿಕೆ.
- ಇದು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಖರ್ಚು ವೆಚ್ಚದ ಪ್ರಮುಖಾಂಶಗಳು.
ರಾಜ್ಯ ವಿಧಾನಸಭೆಗೆ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದವರು ಗೆಲ್ಲಲೇಬೇಕೆಂಬ ಛಲದೊಂದಿಗೆ ಕೋಟಿ ವೆಚ್ಚ ಮಾಡಿದರೂ, ಚುನಾವಣೆ ಆಯೋಗಕ್ಕೆ ಮಾತ್ರ ಲಕ್ಷದ ಲೆಕ್ಕಾಚಾರ ಒದಗಿಸಿದ್ದಾರೆ. ಯಾವೊಬ್ಬರೂ ಚುನಾವಣೆ ಆಯೋಗ ನಿಗದಿ ಮಾಡಿದ ಒಟ್ಟು ವೆಚ್ಚ 16 ಲಕ್ಷದ ಬಳಿ ಸುಳಿದಿಲ್ಲ ಎಂಬುದು ಅಭ್ಯರ್ಥಿಗಳು ಒದಗಿಸಿದ ಮಾಹಿತಿಯಿಂದ ಸ್ಪಷ್ಟ. ಆಯೋಗ ಎಷ್ಟೇ ಬಿಗಿ ಕ್ರಮ ಅನುಸರಿಸಿದರೂ ಪ್ರಯತ್ನ ಮಾತ್ರ ವ್ಯರ್ಥ ಎಂಬುದು ಮತ್ತೆ ಸಾಬೀತಾಗಿದೆ.
15 ಜನ ಲೆಕ್ಕಪತ್ರ ಒದಗಿಸಿಲ್ಲ: ಜಿಲ್ಲೆಯ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 86 ಜನರಲ್ಲಿ ವೆಚ್ಚದ ವಿವರ ಸಲ್ಲಿಕೆಗೆ ಜೂ. 7ಕ್ಕೆ ಗಡುವು ತೀರಿದ್ದರೂ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ, ನಟಿ ಪೂಜಾ ಗಾಂಧಿ, ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರೂ ಸೇರಿದಂತೆ 15 ಜನ ಲೆಕ್ಕಪತ್ರ ಒದಗಿಸಿಲ್ಲ ಎಂದು ಜಿಲ್ಲಾಡಳಿತದ ಚುನಾವಣೆ ವಿಭಾಗ ತಿಳಿಸಿದೆ.  ಮತದಾರರ ಒಲವು ಗಳಿಸಲು ಬಹುತೇಕ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕೋಟಿ ಹಣ ಸುರಿದಿದ್ದಾರೆ. ಆದರೆ ಚುನಾವಣೆಯ ಆಯೋಗದ ಲೆಕ್ಕ ಕೇಳಿದಾಗ ಮಾತ್ರ ಆಯೋಗದ ಗಡಿ(16 ಲಕ್ಷ)ಯ ಬಳಿಯೂ ಸುಳಿದಿಲ್ಲ ಎಂಬ ಲೆಕ್ಕಾಚಾರ ತೋರಿಸಿರುವುದು ಸ್ಪಷ್ಟ.
ರಾಯಚೂರು ನಗರ ಕ್ಷೇತ್ರ: ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಮಾಹಿತಿ ಪ್ರಕಾರ- ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೈಯದ್ ಯಾಸೀನ್ 6,89,680 ವೆಚ್ಚ ಮಾಡಿದರೆ, ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಡಾ. ಶಿವರಾಜ್ ಪಾಟೀಲ್ 5,79,257, ಕೆಜೆಪಿಯ ಬಸವರಾಜ ಕಳಸ 3,14,066, ಬಿಎಸ್ಪಿಯ ಹಾರೇಸ್ ಸಿದ್ದಿಖಿ 2,14,100, ಜೆಡಿಯುನ ನೂರ್ ಮಹ್ಮದ್ 1,03,944 ವೆಚ್ಚ ಮಾಡಿದ್ದಾಗಿ ತಿಳಿಸಿದ್ದಾರೆ. ಇನ್ನುಳಿದವರು 50 ಸಾವಿರದ ಗಡಿ ದಾಟಿಲ್ಲ.
ರಾಯಚೂರು ಗ್ರಾಮೀಣ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ರಾಯಪ್ಪ ನಾಯಕ ವೆಚ್ಚ ಮಾಡಿದ್ದು 6,83,575, ಜೆಡಿಎಸ್‌ನ ರಾಜಾ ಅಮರೇಶ್ವರ ನಾಯಕ 10,67,036, ಬಿಜೆಪಿಯ ಅಭ್ಯರ್ಥಿ ಹಾಗೂ ಹಾಲಿ ಶಾಸಕ ತಿಪ್ಪರಾಜು 8,34,239, ಬಿಎಸ್ಸಾರ್ ಕಾಂಗ್ರೆಸ್‌ನ ಖಾಸೀಂ ನಾಯಕ್ 1,30,530, ಬಿಎಸ್ಪಿಯ ವಿಜಯಲಕ್ಷ್ಮಿ 2,67,190 ವೆಚ್ಚ ಮಾಡಿದ್ದಾಗಿ ತಿಳಿಸಿದ್ದಾರೆ.
ಮಾನವಿ: ಕಾಂಗ್ರೆಸ್‌ನ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹಂಪಯ್ಯ ನಾಯಕ 7,56,988.55 ವೆಚ್ಚ ಮಾಡಿದ್ದರೆ, ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ 7,18,093, ಕೆಜೆಪಿಯ ಗಂಗಾಧರ ನಾಯಕ 7,71,359, ಬಿಜೆಪಿಯ ಅಯ್ಯಮ್ಮ ನಾಯಕ 6,86,973, ಬಿಎಸ್ಸಾರ್ ಕಾಂಗ್ರೆಸ್‌ನ ಬಸನಗೌಡ ದದ್ದಲ್ 2,53,888, ಬಿಎಸ್ಪಿಯ ಮಲ್ಲಪ್ಪ ಬಂಗಾರಿ 1,26,029, ಸಿಪಿಎಂ ರೆಡ್ ಸ್ಟಾರ್‌ನ ಮುದುಕಪ್ಪ ನಾಯಕ 1,21,435 ವೆಚ್ಚ ಮಾಡಿದ್ದಾರೆ.
ದೇವದುರ್ಗ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ವೆಂಕಟೇಶ್ ನಾಯಕ 5,31,638, ಬಿಜೆಪಿಯ ಶಿವನಗೌಡ ನಾಯಕ 4,40,051, ಕೆಜೆಪಿಯ ಶಾಂತಗೌಡ 2,21,030 ವೆಚ್ಚ ಮಾಡಿದ್ದಾರೆ.
ಲಿಂಗಸ್ಗೂರು: ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಮಾನಪ್ಪ ವಜ್ಜಲ್ 6,52,323, ಬಿಎಸ್ಸಾರ್ ಕಾಂಗ್ರೆಸ್‌ನ ಸಿದ್ದಪ್ಪ ಬಂಡಿ 3,25,230, ಕೆಜೆಪಿಯ ಎಚ್.ಬಿ. ಮುರಾರಿ 4,44,017, ಕಾಂಗ್ರೆಸ್‌ನ ಡಿ.ಎಸ್. ಹೂಲಗೇರಿ 4,31,515, ಬಿಜೆಪಿ  ಟಿ.ಆರ್. ನಾಯ್ಕ 3,71,050, ಪಕ್ಷೇತರ ಡಾ. ರಂಗನಾಥ 3,34,077 ವೆಚ್ಚ ಮಾಡಿದ್ದಾಗಿ ತಿಳಿಸಿದ್ದಾರೆ.
ಮಸ್ಕಿ: ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರತಾಪಗೌಡ ಪಾಟೀಲ್ 7,59,010, ಕೆಜೆಪಿಯ ಮಹಾದೇವಪ್ಪಗೌಡ ಪಾಟೀಲ್ 5,42,436, ಬಿಜೆಪಿಯ ಶಂಕರ್ ಕುಮಾರ್ ಮೇದಾರ್ 66,324, ಬಿಎಸ್ಸಾರ್ ಕಾಂಗ್ರೆಸ್‌ನ ಶೇಖರಪ್ಪ ತಳವಾರ್ 2,93,857, ಜೆಡಿಎಸ್ ಅಮರೇಶ ದಿನ್ನಿ 2,64,870 ವೆಚ್ಚ ಮಾಡಿದ್ದಾರೆಂದು ದಾಖಲೆ ನೀಡಿದ್ದಾರೆ.
ಸಿಂಧನೂರು: ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹಂಪನಗೌಡ ಬಾದರ್ಲಿ 9,50,685, ಜೆಡಿಎಸ್‌ನ ವೆಂಕಟರಾವ್ ನಾಡಗೌಡ 9,52,837, ಬಿಜೆಪಿಯ ಶೇಷಗಿರಿರಾವ್ 6,57,735, ಕರ್ನಾಟಕ ಮಕ್ಕಳ ಪಕ್ಷದ ಸೈಯದ್ ಸಾಬೀರ್ ನಾನಾ 1,15,440, ಕೆಜೆಪಿಯ ರಾಜಶೇಖರಗೌಡ ಪಾಟೀಲ್ 7,04,812, ಬಿಎಸ್ಸಾರ್ ಕಾಂಗ್ರೆಸ್‌ನ ಕೆ.ಕರಿಯಪ್ಪ 5,50,449, ಪಕ್ಷೇತರ ರಾಮಣ್ಣ ಎಲೆಕೂಡ್ಲಗಿ 1,77,371, ಜೆಡಿಯುನ ಶಾಂತಗೌಡ ಜಾಗೀರದಾರ್ 2,28,708 ವೆಚ್ಚ ಮಾಡಿದ್ದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ ಎಲ್ಲರಿಗಿಂತ ಅತೀ ಹೆಚ್ಚು 10,67,036 ಹಣವನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಮಾಡಿದ್ದಾರೆ.
ಲಕ್ಷಾಂತರದ ಲೆಕ್ಕ: ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಛಲದಿಂದ ಮತದಾರರ ಓಲೈಕೆಗೆ ನಾನಾ ರೀತಿಯ ಆಸೆ, ಆಮಿಷಗಳನ್ನು ಈಡೇರಿಸಲು ಚುನಾವಣೆಯಲ್ಲಿ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಸುರಿದಿದ್ದಾರೆ. ಆದರೆ ಆಯೋಗಕ್ಕೆ ಮಾತ್ರ ಲಕ್ಷಾಂತರದ ಲೆಕ್ಕಾಚಾರ ಒಪ್ಪಿಸಿ ಕೈತೊಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ನಟಿ ಪೂಜಾಗಾಂಧಿ ಸೇರಿದಂತೆ 15 ಜನ ವೆಚ್ಚದ ಮಾಹಿತಿಯನ್ನು ಇದುವರೆಗೆ ಜಿಲ್ಲಾಡಳಿತಕ್ಕೆ ಸಲ್ಲಿಸಿಲ್ಲ. ಅಂಥವರಿಗೆ ಜಿಲ್ಲಾಡಳಿತ ಅಂತಿಮ ಎಚ್ಚರಿಕೆಯ ನೊಟೀಸ್ ನೀಡಲಿದ್ದು, ಆನಂತರದಲ್ಲಿ ಆಯೋಗಕ್ಕೆ ಮುಂದಿನ ಕ್ರಮಕ್ಕೆ ಮನವಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.